ವಾರಣಾಸಿಯಲ್ಲಿ ಸಂಸದರಾಗಿದ್ದ ಪ್ರಧಾನಿ ಮೋದಿ ಆಯ್ಕೆಯನ್ನು ಪ್ರಶ್ನಿಸಿದ್ದ ಅರ್ಜಿ ವಜಾ

ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಆಯ್ಕೆಯನ್ನು ಪ್ರಶ್ನಿಸಿ ಗಡಿಭದ್ರತಾ ಪಡೆಯಿಂದ ಅಮಾನತುಗೊಂಡಿದ್ದ ಯೋಧ ತೇಜ್ ಬಹದ್ದೂರ್ ಅವರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಇಂದು ತಿರಸ್ಕರಿಸಿದೆ.
ಇಂದು ಮಧ್ಯಾಹ್ನ 12 ಗಂಟೆಗೆ ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿದ ಸುಪ್ರೀಂಕೋರ್ಟಿನ ಮುಖ್ಯನ್ಯಾಯಮೂರ್ತಿ ಎ.ಎಸ್.ಬೋಬ್ಡೆ,ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ,ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠ ತೇಜ್ ಬಹದ್ದೂರ್ ಅವರ ಮನವಿಯನ್ನು ತಿರಸ್ಕರಿಸಿತು.
ಇದಕ್ಕೂ ಮುನ್ನ 2017ರಲ್ಲಿ ದೇಶದ ಗಡಿ ಕಾಯುವ ಯೋಧರಿಗೆ ಸರಬರಾಜು ಮಾಡುವ ಆಹಾರ ಕಳಪೆಯಾಗಿರುತ್ತದೆ ಎಂದು ವೀಡಿಯೋ ಮಾಡಿ ವೈರಲ್ ಮಾಡಿದ್ದಕ್ಕಾಗಿ ಗಡಿ ಭದ್ರತಾ ಪಡೆಯ ಯೋಧನಾಗಿದ್ದ ತೇಜ್ ಬಹದ್ದೂರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.
ಬಳಿಕ 2019ರ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ತದನಂತರ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿದ್ದ ತೇಜ್ ಬಹದ್ದೂರ್ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ ನಾಮಪತ್ರದ ಜೊತೆಗೆ ಗಡಿಭದ್ರತಾ ಪಡೆಯಲ್ಲಿ ಭ್ರಷ್ಟಾಚಾರ ಅಥವಾ ರಾಜ್ಯದ್ರೋಹ ಎಸಗಿಲ್ಲ ಎಂದು ದೃಢಪಡಿಸುವ ಪ್ರಮಾಣಪತ್ರವನ್ನು ನಾಮಪತ್ರದೊಂದಿಗೆ ಸಲ್ಲಿಸಿಲ್ಲ ಎಂದು ತೇಜ್ ಬಹದ್ದೂರ್ ಅವರ ನಾಮಪತ್ರವನ್ನು ಕಳೆದ 2019 ರ ಮೇ 1ರಂದು ಕೇಂದ್ರ ಚುನಾವಣಾ ಆಯೋಗ ತಿರಸ್ಕರಿಸಿತ್ತು.‌
ಚುನಾವಣಾ ಆಯೋಗದ ಈ ಕ್ರ‌ಮವನ್ನು ಪ್ರಶ್ನಿಸಿ ತೇಜ್ ಬಹದ್ದೂರ್ ಅಲಹಾಬಾದ್ ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು. ಈ ಹಿನ್ನಲೆಯಲ್ಲಿ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದ ತೇಜ್ ಬಹದ್ದೂರ್ ಮನವಿ ಇಂದು ವಜಾಗೊಂಡಿದೆ.
‌ ‌ಕೆ ಟಿವಿ ನ್ಯೂಸ್ ನವದೆಹಲಿ

Add Comment