ನಾವು ಭಿಕ್ಷೆ ಬೇಡುತ್ತಿಲ್ಲ.. 2ಎ ಪೂರ್ಣ ಪ್ರಮಾಣದ ಮೀಸಲಾತಿ ನೀಡಿ – ಸರ್ಕಾರಕ್ಕೆ ಬಲಿಜ ಹಕ್ಕುಗಳ ಹೋರಾಟ ಸೇವಾ ಸಮಿತಿ ಆಗ್ರಹ

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ನಾವು ಭಿಕ್ಷೆ ಬೇಡುತ್ತಿಲ್ಲ, ನಮಗೆ ಸಂವಿಧಾನ ಬದ್ಧವಾಗಿ ಬಂದಿದ್ದ 2ಎ ಪೂರ್ಣಪ್ರಮಾಣದ ಮೀಸಲಾತಿ ನೀಡಿ. ಹೀಗೆ ನಮ್ಮನ್ನು ತುಚ್ಛವಾಗಿ ಕಂಡರೆ ಅದಕ್ಕೆ ನೀವು ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಬಲಿಜ ಹಕ್ಕುಗಳ ಹೋರಾಟ ಸೇವಾ ಸಮಿತಿ ಎಚ್ಚರಿಕೆ ನೀಡಿದೆ.

ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಬಲಿಜ ಹಕ್ಕುಗಳ ಹೋರಾಟ ಸೇವಾ ಸಮಿತಿಯ ಪದಾಧಿಕಾರಿ ಹಾಗೂ ಖ್ಯಾತ ಸಂಖ್ಯಾ ಶಾಸ್ತ್ರ ಜ್ಯೋತಿಷ್ಯರಾದ ಜಯಶ್ರೀನಿವಾಸನ್, ದಕ್ಷಿಣ ಶಿರಡಿ ಇಂಟರ್ ನ್ಯಾಷನಲ್ ಪೀಠಾಧ್ಯಕ್ಷರಾದ ಶ್ರೀ ಸಾಯಿ ರಾಮ್ ಪ್ರಸಾದ್ ಗುರೂಜಿ ಮತ್ತು ರಾಮೋಹಳ್ಳಿಯ ನಾಗದುರ್ಗ ಪೀಠದ ಪೀಠಾಧ್ಯಕ್ಷರಾದ ಡಾ.ಶಕ್ತಂ ಶ್ರೀ ಶಕ್ತಿ ಬಾಲಮ್ಮ ಸ್ವಾಮೀಜಿ, ಕತ್ರಿಗುಪ್ಪೆ ಅಯ್ಯಪ್ಪ ದೇವಸ್ಥಾನ ಸಮಿತಿಯ ಪೀಠಾಧ್ಯಕ್ಷರಾದ ಶ್ರೀ ಎಂ.ಡಿ.ಸ್ವಾಮೀಜಿಯವರು ಭಾಗವಹಿಸಿ ಬಲಿಜ ಸಮುದಾಯಕ್ಕೆ ಪೂರ್ಣ ಪ್ರಮಾಣದ 2ಎ ಮೀಸಲಾತಿ ನೀಡಬೇಕೆಂದು ರಾಜ್ಯ ಸರ್ಕಾರವನ್ನ ಆಗ್ರಹಿಸಿದರು.

2ಎ ಮೀಸಲಾತಿಗಾಗಿ ನಾವು ಮುಂದಿನ ದಿನಗಳಲ್ಲಿ ಆಮರಣಾಂತ ಉಪವಾಸ ಮಾಡಲಾಗುವುದು ಎಂದು ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಬಲಿಜ ಸಮುದಾಯದ ಆಕ್ರೋಶ ಹೊರಹಾಕಿದೆ.

ಸುದ್ದಿಗೋಷ್ಠಿಯಲ್ಲಿ ಖ್ಯಾತ ಸಂಖ್ಯಾಶಾಸ್ತ್ರ ಜ್ಯೋತಿಷಿಗಳಾದ ಜಯಶ್ರೀನಿವಾಸನ್ ಗುರೂಜಿ ಮಾತನಾಡಿ, ಕರ್ನಾಟಕದಲ್ಲಿ ಸುಮಾರು 40 ಲಕ್ಷ ಬಲಿಜ ಸಮುದಾಯದ ಜನರಿದ್ದಾರೆ. ಈ ಹಿಂದೆ ಬಲಿಜ ಸಮುದಾಯ 2ಎ’ ಮೀಸಲಾತಿಯನ್ನ ಹೊಂದಿತ್ತು. ಆದರೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಅಧಿಕಾರಾವಧಿಯಲ್ಲಿ ಏಕಾಏಕಿ 2ಎ’ ಮೀಸಲಾತಿಯನ್ನ ಹಿಂತೆಗೆದುಕೊಳ್ಳಲಾಗಿತ್ತು. ಆ ನಂತರ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ತಮ್ಮ ಈ ಹಿಂದಿನ ಕಾಲಾವಧಿಯಲ್ಲಿ ಬಲಿಜ ಸಮುದಾಯದ ವಿದ್ಯಾಭ್ಯಾಸಕ್ಕೆ 2ಎ’ ಮೀಸಲಾತಿಯನ್ನು ನೀಡಿ, ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ 2ಎ’ ಮೀಸಲಾತಿಯನ್ನ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಆದ್ರೆ ಈಗ ಮುಖ್ಯಮಂತ್ರಿಗಳು ಕೊಟ್ಟ ಮಾತನ್ನು ಮರೆತಿದ್ದಾರೆ ಎಂದು ಆರೋಪಿಸಿದರು.

ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದ್ರೆ ನಿಮಗೆ ಪೂರ್ಣಪ್ರಮಾಣದ ಮೀಸಲಾತಿ ನೀಡುವುದಾಗಿ ಸಿಎಂ ಬಿಎಸ್ ವೈ ಮಾತು ಕೊಟ್ಟಿದ್ದರು. ಆದ್ರೆ ಈಗ ಯಡಿಯೂರಪ್ಪನವರು ಆ ಮಾತನ್ನು ಮರೆತಿದ್ದಾರೆ. ಅಲ್ಲದೆ ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ ಅನ್ನೋ ಕೆಲಸವನ್ನು ಯಡಿಯೂರಪ್ಪನವರು ಮಾಡ್ತಾ ಇದ್ದಾರೆ. ಹಲವು ಸಮುದಾಯಗಳಿಗೆ ನಿಗಮ, ಸಾಕಷ್ಟು ಅನುದಾನಗಳನ್ನು ನೀಡುತ್ತಿರೋ ಯಡಿಯೂರಪ್ಪನವರು, ಬಲಿಜ ಸಮುದಾಯಕ್ಕೆ 2ಎ ಮೀಸಲಾತಿಯನ್ನು ನೀಡದಿರುವುದು ತುಂಬಾ ವಿಷಾಯನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಬಲಿಜ ಸಮುದಾಯದ ಬಗ್ಗೆ ಆಳುವ ಸರ್ಕಾರಗಳು ನಿರ್ಲಕ್ಷ ವಹಿಸಿರುವುದರಿಂದ ಬಲಿಜ ಸಮಾಜದ ಜನರು ಸರ್ಕಾರದ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿ ಹಲವಾರು ಸಂಕಷ್ಟಗಳನ್ನ ಎದುರಿಸುತ್ತಿದ್ದಾರೆ. ಈ ಹಿಂದೆ ಯಡಿಯೂರಪ್ಪನವರು
ವಿದ್ಯಾಭ್ಯಾಸಕ್ಕೆ ಮಾತ್ರ 2ಎ’ ಮೀಸಲಾತಿ ಒದಗಿಸಿಕೊಟ್ಟರು. ಮುಂದೆ ಸಿಎಂ ಆದಾಗ 24 ಗಂಟೇಲಿ ಬಲಿಜ ಸಮುದಾಯಕ್ಕೆ ಪೂರ್ಣಪ್ರಮಾಣದ ಮೀಸಲಾತಿ ನೀಡಿವುದಾಗಿ ಹೇಳಿದ ಬಿಎಸ್ ವೈ, ಈಗ ನಮ್ಮನ್ನು ಕಡೆಗಣಿಸಿದ್ದಾರೆ. ಮುಂದಿನ ದಿನಗಳಲ್ಲಿ ಬಲಿಜ ಸಮಾಜದ ಎಲ್ಲಾ ಸಮುದಾಯದ ಮುಖಂಡರ ಸಭೆ ಕರೆಯಲಾಗಿದೆ. ಇನ್ನೆರಡು ದಿನದಲ್ಲಿ ಸಭೆ ಕರೆದು ಚರ್ಚೆ ಮಾಡುತ್ತೇವೆ. ಸರ್ಕಾರಕ್ಕೆ ಒಂದು ವಾರ ಗಡುವು ನೀಡುತ್ತೇವೆ. ಅಷ್ಟರಲ್ಲಿ ಸರ್ಕಾರ ಒಂದು ನಿರ್ಧಾರಕ್ಕೆ ಬರಬೇಕು. ಇಲ್ಲದಿದ್ರೆ ಉಗ್ರ ಹೋರಾಟ ಮಾಡುತ್ತೇವೆ. ಸ್ವಾಮೀಜಿಗಳಿಂದ ಆಮರಣಾಂತ ಉಪವಾಸ ಮಾಡುತ್ತೇವೆ ಎಂದು ಜಯಶ್ರೀನಿವಾಸನ್ ಗುರೂಜಿ ಎಚ್ಚರಿಕೆ ನೀಡಿದರು.

ಬಳಿಕ ಡಾ.ಶಕ್ತಂ ಶ್ರೀ ಶಕ್ತಿ ಬಾಲಮ್ಮ ಸ್ವಾಮೀಜಿ ಮಾತನಾಡಿ, ವಿದ್ಯೆಗೆ ಮಾತ್ರ ಯಡಿಯೂರಪ್ಪ ಅವರು 2ಎ ಮೀಸಲಾತಿ ನೀಡಿದ್ದಾರೆ. ಉತ್ತಮ ವಿದ್ಯಾಭ್ಯಾಸ ಮಾಡಿ, ನಮ್ಮ ಯುವ ಜನಾಂಗ ಕೂಲಿ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿಗಳು ಯೋಚನೆ ಮಾಡಬೇಕು. ನಾವೇನು ನಿಮಗೆ ಭಿಕ್ಷೆ ಬೇಡುತ್ತಿಲ್ಲ. ಈಗ ವಿದ್ಯೆಗೆ ಮೀಸಲಾತಿ ನೀಡಿರುವಂತೆ ಉದ್ಯೋಗದಲ್ಲೂ ಮೀಸಲಾತಿ ನೀಡಿ ಎಂದು ಮನವಿ ಮಾಡಿಕೊಂಡಿದರು.

ಉದ್ಯೋಗದಲ್ಲಿ ಮೀಸಲಾತಿ ಸಿಗದಿರುವುದರಿಂದ ಲಕ್ಷಾಂತರ ಬಲಿಜ ಯುವಕ ಯುವತಿಯರು ಪ್ರತಿಭೆ ಇದ್ದರೂ ಕೆಲಸ ಸಿಗದೆ ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಬಲಿಜ ಸಮುದಾಯದ ಅಭಿವೃದ್ದಿಯನ್ನ ಮರೆತಿರುವ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಕೂಡಲೇ ಬಲಿಜ ಸಮುದಾಯಕ್ಕೆ 2ಎ’ ಪೂರ್ಣ ಪ್ರಮಾಣದ ಮೀಸಲಾತಿ ನೀಡಬೇಕು ಎಂದು ಅವರು ಆಗ್ರಹಿಸಿದ್ರು.

ಇನ್ನು ರಾಮಪ್ರಸಾದ್ ಗುರೂಜಿ ಮಾತನಾಡಿ, ಬಲಿಜ ಸಮುದಾಯಕ್ಕೆ ಮೂರು ದಶಕಗಳಿಂದ ಅನ್ಯಾಯವಾಗಿದೆ. ಸಿಎಂ ಯಡಿಯೂರಪ್ಪ ಅವರು ಕೊಟ್ಟ ಮಾತನ್ನು ಮರೆತಿದ್ದಾರೆ. ಸರ್ಕಾರಿ ಉದ್ಯೋಗ ಸಿಗದೆ ನಮ್ಮ ಜನಾಂಗದ ಯುವಕರು ನಿರಾಶರಾಗಿದ್ದಾರೆ. ಉದ್ಯೋಗ ಸಿಗುತ್ತಿಲ್ಲ, ಇದರಿಂದ ಭವಿಷ್ಯ ಇಲ್ಲದಂತಾಗಲಿದೆ. ರಾಜಕೀಯವಾಗಿಯೂ ನಾವು ಬಹಳ ಹಿಂದುಳಿದಿದ್ದೇವೆ. ಸರ್ಕಾರ ನಮ್ಮ ಬಲಿಜ ಸಮುದಾಯದತ್ತ ಗಮನ ಹರಿಸಬೇಕು ಎಂದು ಮನವಿ ಮಾಡಿಕೊಂಡ್ರು.
ನುಡಿದಂತೆ ನಡಿ ಮಾನವ, ನಡೆದಂತೆ ನುಡಿ ಮಾನವ. ಮುಖ್ಯಮಂತ್ರಿಗಳು ನುಡಿದಂತೆ ನಡೆಯಬೇಕು. ಇದರಿಂದ ಎಲ್ಲರ ಭವಿಷ್ಯ ಉತ್ತಮವಾಗಿರಲಿದೆ ಎಂದು ಕತ್ರಿಗುಪ್ಪೆ ಅಯ್
ಯಪ್ಪ ದೇವಸ್ಥಾನ ಸಮಿತಿಯ ಪೀಠಾಧ್ಯಕ್ಷರಾದ ಶ್ರೀ ಎಂ.ಡಿ.ಸ್ವಾಮೀಜಿ ಮನವಿ ಮಾಡಿದರು.

Add Comment