ಮಸ್ಕಿಯಲ್ಲಿ ರಾಷ್ಟ್ರಕವಿ ಕುವೆಂಪುರವರ 96ನೇ ಜನ್ಮದಿನಾಚರಣೆ

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಇಂದು ಮಹಾ ಮಾನವತಾವಾದಿ ವಿಶ್ವಮಾನವ ರಾಷ್ಟ್ರಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಖ್ಯಾತ ಕವಿ ಕುವೆಂಪು ಅವರ 96 ಜನ್ಮ ದಿನಾಚರಣೆಯನ್ನು ಸರಳವಾಗಿ ಆಚರಣೆ ಮಾಡಲಾಯಿತು.
ಇದೇ ವೇಳೆ ಮಾತನಾಡಿದ ಕ.ರ.ವೇ ತಾಲ್ಲೂಕು ಅಧ್ಯಕ್ಷ ಆರ್.ಕೆ.ನಾಯಕ ಅವರು “ಕುವೆಂಪು ರವರ ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಪ್ರಕೃತಿಯ ಬಗ್ಗೆ ಎಷ್ಟು ವರ್ಣಿಸಿದ್ದಾರೊ ಅದಕ್ಕಿಂತ ಇನ್ನೂ ಹೆಚ್ಚು ಜೀವಂತವಾಗಿ ನಾಯಿಗುತ್ತಿಯನ್ನು ಪರಿಚಯಿಸುತ್ತಾರೆ. ಕಗ್ಗತ್ತಲಿನ ಕಾಡುಗಳ ರಾತ್ರಿಯ ಎದೆಯಲ್ಲಿ ನಡುಗದೆ, ಪ್ರೀತಿಯ ಬೀಜಗಳನ್ನು ಎದೆಯೊಳಗಿಟ್ಟುಕೊಂಡ ಗುತ್ತಿಯ ಬಿಗಿ ಉಸಿರಿನಲ್ಲಿ ಸಹ ಕುವೆಂಪು ಅವರ ವಿಶ್ವಮಾನವ ಸಂದೇಶ ಇದೆ.
ಕುವೆಂಪು ಅವರ ನಾಟಕ,ಕಥೆ,ಕಾದಂಬರಿ ಮತ್ತು ಅವರ ಒಟ್ಟು ಬರವಣಿಗೆಯ ಪಯಣವೇ ವಿಶ್ವಮಾನವದೆಡೆಗಿನ ಪ್ರಯಾಣವಾಗಿತ್ತು. ಅವರು ಬರೆದಿರುವ ಬರಹಗಳಲ್ಲಿ ಒಂದು ರೀತಿಯ ಪ್ರಕೃತಿಯ ದಿವ್ಯಸ್ಪರ್ಶ ಇದೆ, ಮೂಢನಂಬಿಕೆಗಳು ಮತ್ತು ವೈದಿಕರ ಕೆಡುಕಿನ ಜಾಣತನದ ವಿರುದ್ಧ ಗಟ್ಟಿಯಾದ ಸಿಟ್ಟಿದ್ದು ಅದರ ಬಿಸಿ ತಾಗುತ್ತದೆ.
ಅವರ ಆತ್ಮಕಥೆ ’ನೆನಪಿನ ದೋಣಿಯಲ್ಲಿ ನಿವೇದಿಸಿಕೊಂಡಿರುವಂತೆ, ಯುವಕರಾಗಿದ್ದಾಗ ಕುವೆಂಪು ಅವರು ಒಂದು ಸಲ “ಲೈಬ್ರರಿಯಲ್ಲಿ ಸಾಲಾಗಿ ಜೋಡಿಸಿಟ್ಟ ಪುಸ್ತಕಗಳ ಹೆಸರು ನೋಡಿ”, ಓದುತ್ತಾ ಬೆರಗಾಗಿ ನಿಲ್ಲುತ್ತಾರೆ. ಅವರಿಗೆ ಇದ್ದ ಜ್ಞಾನದಾಹ ಇದರಿಂದ ತಿಳಿಯುತ್ತದೆ. ನಮ್ಮನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ಶೋಷಿಸುವ ಹಲವು ಸಂಗತಿಗಳಿಗೆ ಪ್ರಶ್ನಿಸುವ ಮತ್ತು ಪ್ರತಿಭಟಿಸುವ ಶಕ್ತಿ ಓದಿನಿಂದ ಮಾತ್ರ ಬರುವಂತಹುದು ಎಂದು ಪ್ರಸಂಶಿಸಿದರು.
’ವಿಚಾರ ಕ್ರಾಂತಿಗೆ ಆಹ್ವಾನ’ ಪುಸ್ತಕದಲ್ಲಿ ಕುವೆಂಪು ಅವರು ತಮ್ಮ ಬದುಕಿನ ವಿಚಾರಗಳಲ್ಲಿದ್ದ ’ಎಷ್ಟೊಂದು ಮಡಿವಂತಿಕೆಗಳನ್ನು ಛಿದ್ರ ಮಾಡಿದ್ದಾರೆ ಎಂಬುದು ತಿಳಿಯುತ್ತದೆ. ಬರವಣಿಗೆಯಂತೆ ಬದುಕಿದ ಕುವೆಂಪು ಅವರು ವಿಶ್ವಮಾನವರಾಗಿದ್ದು ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ಕನ್ನಡ ಪರ ಸಂಘಟನೆಗಳ ಮುಖಂಡರು ಹಾಗೂ ಅನೇಕ ಸಾರ್ವಜನಿಕರು ಭಾಗವಹಿಸಿದ್ದರು.
ಚನ್ನಬಸವ ಹಿರೇಮಠ ಕೆ ಟಿವಿ ನ್ಯೂಸ್ ಮಸ್ಕಿ

Add Comment