ಬಿಜೆಪಿ ಮುಖಂಡರು ಮತ್ತು ಆರೆಸ್ಸೆಸ್ ಹೆಸರಿನಲ್ಲಿ ಜನರಿಗೆ ಭಾರಿ ವಂಚನೆ ಎಸಗಿರುವ ಕೇಸ್ ನಲ್ಲಿ ಅರೆಸ್ಟ್ ಆಗಿ ಸಿಸಿಬಿ ಪೊಲೀಸರ ವಶದಲ್ಲಿರುವ ಯುವರಾಜ್ ಸ್ವಾಮಿ ಅವರ ಜೊತೆ ನಾವು ಯಾವುದೇ ಹಣಕಾಸಿನ ವ್ಯವಹಾರ ಹೊಂದಿಲ್ಲ ಎಂದು ನಟಿ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಎರಡನೇ ಪತ್ನಿ ರಾಧಿಕಾ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ತಾವು ಬಂಧಿತ ವಂಚಕ ಯುವರಾಜ್ ಅಲಿಯಾಸ್ ಅವರಿಂದ ಹಲವು ಕೋಟಿ ರೂ. ಪಡೆದಿರುವುದು ಆತನ ಬ್ಯಾಂಕ್ ಖಾತೆಯಲ್ಲಿ ದಾಖಲಾಗಿದೆ ಎಂಬ ಗಂಭೀರ ಆರೋಪಗಳ ಬಗ್ಗೆ ಇಂದು ಮಧ್ಯಾಹ್ನ ಬೆಂಗಳೂರಿನ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಿಂದ ಸುದ್ದಿಗೋಷ್ಠಿ ನಡೆಸಿದ ನಟಿ ರಾಧಿಕಾ ಕುಮಾರಸ್ವಾಮಿ ಅವರು ಹೇಳಿದ್ದಿಷ್ಟು : ನಮ್ಮ ಕುಟುಂಬದ ಜೊತೆ ಯುವರಾಜ್ ಸ್ವಾಮಿಯವರು 17 ವರ್ಷಗಳಿಂದ ಸಂಬಂಧ ಹೊಂದಿರುವುದು ನಿಜ, ಯುವರಾಜ್ ಸ್ವಾಮಿಯವರು ಹಿಂದೆ ನಮ್ಮ ತಂದೆ ದಿವಂಗತ ದೇವರಾಜು ಅವರು ಅನಾರೋಗ್ಯಕ್ಕೀಡಾದಾಗ 15 ಲಕ್ಷ ರೂ. ಆಸ್ಪತ್ರೆ ಖರ್ಚಿಗೆಂದು ಕೊಟ್ಟಿದ್ದು ನಿಜ. ಆದರೆ ಯುವರಾಜ ಸ್ವಾಮಿ ಅವರಿಂದ ನಮ್ಮ ಕುಟುಂಬ ಒಂದುಕಾಲು ಕೋಟಿ ರೂ. ಪಡೆದಿರುವ ವದಂತಿ ಶುದ್ಧ ಸುಳ್ಳು,ನಾನು ನನ್ನ ಸಹೋದರನ ಜೊತೆ ಯುವರಾಜ ಸ್ವಾಮಿ ಬಳಿ ಜ್ಯೋತಿಷ್ಯ ಕೇಳಲು ಹೋಗುತ್ತಿದ್ದೆವು,ಕಳೆದ ಬಾರಿ ಹೋದಾಗ ಯುವರಾಜ ಸ್ವಾಮಿ ಅವರು ಕಳೆದ ಡಿಸೆಂಬರ್ ತಿಂಗಳಾದ ಮೇಲೆ ನನಗೆ ಶುಕ್ರದೆಸೆ,ಗುರುಬಲ ಇದೆ ಎಂದು ಭವಿಷ್ಯ ಹೇಳಿದ್ದರು.
ಯುವರಾಜ ಸ್ವಾಮಿ ಅವರ ಪತ್ನಿ ಹೆಸರಲ್ಲಿ ಒಂದು ಪ್ರೊಡಕ್ಷನ್ ಹೌಸ್ ಇದೆ,ಆ ಕಾರಣ ಸಿನಿಮಾ ನಟಿಯಾಗಿ ಅವರ ಮನೆಗೆ ಹೋಗಿಬರುತ್ತಿದ್ದೆ ವಿನಃ ಯಾವುದೇ ಹಣಕಾಸಿನ ವ್ಯವಹಾರಕ್ಕೆ ಹೋಗುತ್ತಿರಲಿಲ್ಲ.
ಆದರೆ ಈಗ ಈ ಸ್ವಾಮಿ ಇಷ್ಟೊಂದು ವಂಚನೆ ಮಾಡಿದ್ದಾರೆ ಎಂದು ನನಗೆ ನಂಬಲೂ ಅಸಾಧ್ಯವಾಗಿದೆ,ಹೀಗೆ ವಂಚನೆ ಮಾಡುವವರು ಎಂದು ಗೊತ್ತಿದ್ದರೆ ನಾವು ಮೊದಲೇ ಅವರಿಂದ ದೂರ ಇರುತ್ತಿದ್ದೆವು” ಎಂದು ಹೇಳಿ ಸಿಸಿಬಿ ಪೊಲೀಸರು ವಿಚಾರಣೆಗೆ ಹೋಗಿ ಇದನ್ನೇ ಹೇಳುವೆ ಎಂದು ನಟಿ ರಾಧಿಕಾ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಧಿಕಾ ಅವರ ಸಹೋದರ ಸಹ ಇದ್ದರು.
ಕೆ ಟಿವಿ ನ್ಯೂಸ್ ಬೆಂಗಳೂರು