ಗ್ರಹದೋಷಗಳೇನಾದರೂ ಇವೆಯೇ ? ಹಾಗಿದ್ದರೆ ತಪ್ಪದೇ ನಾಳೆ ಈ ಕೆಲಸ ಮಾಡಿ

1 Star2 Stars3 Stars4 Stars5 Stars (No Ratings Yet)
Loading...

ನಿಮಗೆ ಗ್ರಹದೋಷಗಳೇನಾದರೂ ಇವೆಯೇ ? ಹಾಗಿದ್ದರೆ ತಪ್ಪದೇ ನಾಳೆ ಈ ಕೆಲಸ ಮಾಡಿ. ಯಾಕೆಂದರೆ ನಾಳೆ ರಥಸಪ್ತಮಿ. ನವಗ್ರಹಗಳ ನಾಯಕ ಸೂರ್ಯನ ಪೂಜೆಗೆ ಹೇಳಿ ಮಾಡಿಸಿದ ದಿನ. ಜಗತ್ತಿಗೆ ಬೆಳಕು ನೀಡುವ ಸೂರ್ಯಭಗವಾನ್ ನಾಳೆಯಿಂದ ನಿಮ್ಮ ಬದುಕಿಗೂ ಬೆಳಕು ತರದೇ ಇರುತ್ತಾನೆಯೇ ? ನಾಳೆ ಏನು ಮಾಡಬೇಕು ಎಂದು ಹೇಳುವ ಮುನ್ನ, ರಥಸಪ್ತಮಿಯ ವಿಶೇಷತೆ ತಿಳಿದುಕೊಳ್ಳೋಣ.

ಮಾಘ ಮಾಸ ಶುಕ್ಲಪಕ್ಷದ ಸಪ್ತಮಿಯ ದಿನ. ಜಗತ್ತಿನ ಮುಂದುವರಿಕೆಗೆ ಚಾಲಕನಾದ ಶ್ರೀ ಸೂರ್ಯ ಭಗವಾನನು ಸಿಂಹ ರಾಶಿಯಿಂದ ಮಕರ ರಾಶಿಗೆ ತನ್ನ ರಥವನ್ನೇರಿ ಹೋಗುತ್ತಾನೆ. ಅಂದರೆ ಇಂದಿಗೆ ಛಳಿಗಾಲವು ಮುಗಿದು ಬೇಸಗೆಯ ಕಾಲವು ಪ್ರಾರಂಭವಾಗುವುದು. ಸೂರ್ಯನು ತನ್ನ ಏಳು ಕುದುರೆಗಳ ರಥವನ್ನೇರುವನು. ಅವನ ರಥದ ಸಾರಥಿ ಅರುಣ. ಇಂದು ವೇದ ಮಂತ್ರಗಳ ಭಾಗವಾದ ಕೃಷ್ಣ ಯಜುರ್ವೇದ ತೈತ್ತಿರೀಯಾರಣ್ಯಕದಲ್ಲಿ ಪ್ರಸ್ತಾಪಿಸಿರುವ ಅರುಣಪ್ರಶ್ನ ರೀತ್ಯಾ ಸೂರ್ಯ ನಮಸ್ಕಾರಗಳನ್ನು ಮಾಡುವುದು ಪದ್ಧತಿ.

ಸೂರ್ಯನ ರಥಕ್ಕೆ ಏಳು ಕುದುರೆಗಳು. ಅವುಗಳ ಹೆಸರುಗಳು ಗಾಯತ್ರಿ, ಬೃಹತೀ, ಉಷ್ಣಿಕ್, ಜಗತೀ, ತ್ರಿಷ್ಟುಪ್, ಅನುಷ್ಟುಪ್ ಮತ್ತು ಪಂಕ್ತಿ.

ಬೆಳಗಿನ ಜಾವದಲ್ಲಿ ತಲೆ, ಭುಜ, ಕತ್ತು, ಕಂಕುಳು, ತೊಡೆ, ಪಾದ ಇತ್ಯಾದಿಗಳ ಮೇಲೆ ಎಕ್ಕದ ಎಲೆಯನ್ನು ಇಟ್ಟುಕೊಂಡು ಸ್ನಾನ ಮಾಡಿ, ಪೂರ್ವಾಭಿಮುಖವಾಗಿ ಸೂರ್ಯನಿಗೆ ನಮಸ್ಕರಿಸುವುದು ರೂಢಿಯಲ್ಲಿದೆ. ಸೂರ್ಯನ ೧೦೮ ಹೆಸರುಗಳನ್ನು ಉಚ್ಚರಿಸಿ ನಮಸ್ಕಾರಗಳನ್ನು ಮಾಡುವರು. ಮನೆಯ ಒಂದು ಕೋಣೆಯಲ್ಲಿ ಪೂರ್ಣವಾಗಿ ಒಂದು ಸುತ್ತು ಪ್ರದಕ್ಷಿಣೆ ಹಾಕುತ್ತಾ ಅರುಣ ಪ್ರಶ್ನದ ಮಂತ್ರ ಪಠಿಸಿ ನಮಸ್ಕಾರ ಮಾಡುವರು. ಹೀಗೆ ೧೦೮ ನಮಸ್ಕಾರಗಳನ್ನು ಮಾಡುವರು. ೧೦೮ ಆಗದಿದ್ದವರು ೧೨ ನಾಮಗಳನ್ನು ಜಪಿಸಿ ನಮಸ್ಕಾರ ಮಾಡುವರು. ಅವಾವುದೆಂದರೆ ಇಂದ್ರ, ಧಾತ, ಪರ್ಜನ್ಯ, ತ್ವಷ್ಟ, ಪುಷ, ಆರ್ಯಮ, ಭಾಗ, ವಿವಸ್ವನ, ವಿಷ್ಣು, ಅಂಶುಮಾನ, ವರುಣ ಮತ್ತು ಮಿತ್ರ. ಈ ಹನ್ನೆರಡು ಹೆಸರುಗಳು ಹನ್ನೆರಡು ತಿಂಗಳುಗಳ ಸೂಚಕ. ಇದೇ ತರಹ ಸೂರ್ಯನಿಗೆ ಇನ್ನೂ ಹನ್ನೆರಡು ಹೆಸರುಗಳಿವೆ. ಅವುಗಳು ಯಾವುವೆಂದರೆ, ಆದಿತ್ಯ, ಸವಿತಾ, ಸೂರ್ಯ, ಮಿಹಿರ, ಅರ್ಕ, ಪ್ರಭಾಕರ, ಮಾರ್ತಾಂಡ, ಭಾಸ್ಕರ, ಭಾನು, ಚಿತ್ರಭಾನು, ದಿವಾಕರ ಮತ್ತು ರವಿ. ೧೨ ಜನ ಋತ್ವಿಕರನ್ನು ಮನೆಗೆ ಕರೆಯಿಸಿ ನಮಸ್ಕಾರ ಮಾಡಿಸುವುದೂ ರೂಢಿಯಲ್ಲಿದೆ. ಆ ಹನ್ನೆರಡು ಜನ ಋತ್ವಿಕರ ಅರುಣ ಪ್ರಶ್ನ್ಯ ರೀತ್ಯಾ ಒಂದು ನಮಸ್ಕಾರವನ್ನು ೧೨ ಎಂದು ಲೆಕ್ಕಕ್ಕೆ ತೆಗೆದುಕೊಳ್ಳುವರು. ಆ ಸಂದರ್ಭದಲ್ಲಿ ಸೂರ್ಯನಿಗೆ ಪ್ರಿಯವಾದ ರವೆಯ ಪಾಯಸವನ್ನು ನೈವೇದ್ಯಕ್ಕಿರಿಸಿ, ಅದನ್ನು ಪ್ರಸಾದವಾಗಿ ಋತ್ವಿಕರಿಗೆ ಕೊಡುವರು ಮತ್ತು ಇತರರೂ ಸೇವಿಸುವರು.
ಒರಿಸ್ಸಾ ರಾಜ್ಯದಲ್ಲಿನ ಕೊನಾರ್ಕದ ಸೂರ್ಯನ ದೇವಸ್ಥಾನ, ಗಯಾದ ದಕ್ಷಿಣಾರ್ಕ ದೇವಸ್ಥಾನ, ರಾಜಸ್ಥಾನದ ರಾನಕ್ಪುರ, ಗುಜರಾತ್ ರಾಜ್ಯದ ಮೊಧೆರಾ, ಮಧ್ಯಪ್ರದೇಶದ ಉನಾವು (ಚರ್ಮ ರೋಗಗಳ ನಿವಾರಣೆಗಾಗಿ ಜನರು ಇಲ್ಲಿಗೆ ಹೋಗುವರು), ಅಸ್ಸಾಮಿನ ಗೋಲ್ಪರ, ಆಂಧ್ರಪ್ರದೇಶದ ಅರಸವಲ್ಲಿ, ತಮಿಳುನಾಡಿನ ಕುಂಭಕೋಣಂನ ಸೂರ್ಯನ ದೇವಸ್ಥಾನ ಇವುಗಳು ಭಾರತದಲ್ಲಿರುವ ಪ್ರಮುಖ ದೇವಸ್ಥಾನಗಳು.
ಪುರಾಣಗಳ ಪ್ರಕಾರ ಸೂರ್ಯನಿಗೆ ಇಬ್ಬರು ಪತ್ನಿಯರು – ಸಂಜನಾ ಮತ್ತು ಛಾಯಾ. ಅವನ ಮಕ್ಕಳಲ್ಲಿ ಪ್ರಮುಖರೆಂದರೆ, ಮನು, ಯಮ, ಯಮುನಾ, ಕರ್ಣ, ಸುಗ್ರೀವ ಇತ್ಯಾದಿ. ಶ್ರೀ ರಾಮನು ಸೂರ್ಯನ ವಂಶಸ್ತನು.
ಸಂಕಲಕರು – ಶ್ರೀ. ಸಮರ್ಥ ಕಾಂತಾವರ
ಸೂರ್ಯೋಪಾಸನೆಯ ಮಹತ್ವ
ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮದಲ್ಲಿ ಸೂರ್ಯನ ಉಪಾಸನೆಗೆ ಅಪಾರ ಮಹತ್ವ ನೀಡಿದ್ದಾರೆ.
೧. ಸೂರ್ಯೋಪಾಸನೆಯಿಂದ ಶರೀರದಲ್ಲಿರುವ ಚಂದ್ರನಾಡಿಯು ಪೂರ್ಣಪ್ರಮಾಣದಲ್ಲಿ ಮುಚ್ಚಿ ಹೋಗಿ ಸೂರ್ಯನಾಡಿಯು ಬೇಗ ಕಾರ್ಯರತವಾಗಲು ಸಹಾಯವಾಗುತ್ತದೆ. ಚಂದ್ರನ ಉಪಾಸನೆಗಿಂತ ಸೂರ್ಯನ ಉಪಾಸನೆ ಅಧಿಕ ಶ್ರೇಷ್ಠವಾಗಿದೆ.
೨. ಸೂರ್ಯನಿಗೆ ಬೆಳೆಗ್ಗೆ ಅರ್ಘ್ಯ ಅರ್ಪಿಸಿ ಅವನ ದರ್ಶನ ಪಡೆದರೆ ಸಾಕು, ಅವನು ಪ್ರಸನ್ನನಾಗುತ್ತಾನೆ. ಸೂರ್ಯನ ದರ್ಶನ ಪಡೆಯುವುದು ಅವನ ಉಪಾಸನೆಯ ಒಂದು ಭಾಗವೇ ಆಗಿದೆ.
೩. ಉದಯಿಸುತ್ತಿರುವ ಸೂರ್ಯನೆಡೆಗೆ ನೋಡಿ ‘ತ್ರಾಟಕ’ವನ್ನು ಮಾಡಿದರೆ ಕಣ್ಣುಗಳ ಕ್ಷಮತೆಯು ಹೆಚ್ಚುತ್ತದೆ.
೪. ಸೂರ್ಯನಮಸ್ಕಾರ ಮಾಡುವುದು: ಯೋಗಾಸನಗಳಲ್ಲಿ ಸೂರ್ಯನಮಸ್ಕಾರ ಮಹತ್ವದ ವ್ಯಾಯಾಮವಾಗಿದೆ. ಇದರಲ್ಲಿ ಸ್ಥೂಲ ಶರೀರದ ಉಪಯೋಗ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡುತ್ತಾರೆ. ಹೀಗೆ ೨೦ ವರ್ಷ ನಿತ್ಯವೂ ಸೂರ್ಯನಮಸ್ಕಾರ ಮಾಡಿದರೆ ಸೂರ್ಯದೇವನು ಪ್ರಸನ್ನನಾಗುತ್ತಾನೆ.

ಈಗ ಪರಿಹಾರ :
ಏಳು ಎಕ್ಕೆಯ ಎಳೆಗಳನ್ನು ತಲೆ, ಭುಜ, ಮೊಣಕೈ, ಮೊಣಕಾಲುಗಳ ಮೇಲೆ ಇಟ್ಟುಕೊಂಡು ಸ್ನಾನ ಮಾಡಿದರೆ ರೋಗ ರುಜಿನಗಳ ಜೊತೆ ಸಕಲ ಗ್ರಹದೋಷಗಳೂ ನಿವಾರಣೆಯಾಗುತ್ತವೆ.

ಶುಭಂಕರೋತಿ
#ಡಾ.ಬಸವರಾಜ್ ಗುರೂಜಿ, ಜ್ಯೋತಿಷಿ 9972848937

 

Add Comment