ಮಸ್ಕಿ ಪಟ್ಟಣದ ಸೌಂದರ್ಯ ಹಾಳುಮಾಡುತ್ತಿರುವ ಘನತ್ಯಾಜ್ಯ

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಭೌತಿಕ ಪರಿಸರ ಮತ್ತು ಸೌಂದರ್ಯವನ್ನು ಹಾಳು ಮಾಡುತ್ತಿರುವ ಘನತ್ಯಾಜ್ಯ ವಿಲೇವಾರಿಯ ಸಂಪೂರ್ಣವಾಗಿ ಅವೈಜ್ಞಾನಿಕ ರೀತಿಯಲ್ಲಿದ್ದು ಎಲ್ಲೆಂದರಲ್ಲಿ ಕಸದರಾಶಿ ಗೋಚರವಾಗುತ್ತವೆ.
ಅದರಲ್ಲೂ ಸರಕಾರಿ ಶಾಲಾ ಆವರಣಕ್ಕೆ ಅಂಟಿಕೊಂಡು ವಿಪರೀತ ಘನತ್ಯಾಜ್ಯ ಬಿಸಾಕಿದ್ದು ಅಂತಹ ಕಠಿಣ ಪರಿಸ್ಥಿತಿಯಲ್ಲಿ ಮಕ್ಕಳು ಶಾಲಾ ಕೊಠಡಿ ಮತ್ತು ಆವರಣದಲ್ಲಿ ಕುಳಿತು ಪಾಠ ಕೇಳುವ ದುಸ್ಥಿತಿ ಉಂಟಾಗಿದೆ.
ಇನ್ನು ಮುಖ್ಯ ಕಾಲುವೆಯ ದಂಡೆಯಲ್ಲಿ ಕೋಳಿ ಪುಕ್ಕ ಬಿಸಾಡಿದ್ದು ಅದು ಸ್ವಲ್ಪ ಗಾಳಿ ಬೀಸಿದರೆ ಸಾಕು ಕಾಲುವೆಯಲ್ಲಿ ಹೋಗಿ ಸೇರುತ್ತದೆ. ಇದೇ ನೀರನ್ನು ಮುಂದಿನ ಭಾಗದ ರೈತರು ಕುಡಿಯಲು ಬಳಸುತ್ತಾರೆ. ಆದರೆ ಇದ್ಯಾವುದರ ಪರಿವೆಯೇ ಇಲ್ಲದ ಕೆಲವರು ಕಾಲುವೆಯ ದಂಡೆಯಲ್ಲಿ ಕಸ ಮತ್ತು ಕೋಳಿ ಪುಳಕವನ್ನು ಬಿಸಾಡಿ ಬಡಜನರ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿರುವುದು ಸೋಜಿಗದ ಸಂಗತಿ ಎಂದರೆ ಬಹುಶಃ ತಪ್ಪಾಗಲಾರದು.
ಇನ್ನು ಇದೆಲ್ಲವನ್ನೂ ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತಿರುವ ಸ್ಥಳೀಯ ಸಂಸ್ಥೆ ಪುರಸಭೆಯು ಈ ಬಗ್ಗೆ ನಮಗೇನೂ ತಿಳಿದಿಲ್ಲ ಎನ್ನುವಂತೆ ಮೈಮರೆತು ಕೂತಿದೆ. ಅದಕ್ಕಾಗಿ ಇನ್ನಾದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕು ಮತ್ತು ಎಲ್ಲೆಂದರಲ್ಲಿ ಕಸವನ್ನು ಬಿಸಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು .
ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರತಿಕ್ರಿಯೆ.
ಪಟ್ಟಣದ ಸರಕಾರಿ ಬಾಲಕಿಯರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಬಸಪ್ಪ ಎನ್.ತನಿಕೇದಾರ್ “ಈ ಘನ ತ್ಯಾಜ್ಯ ವಿಲೇವಾರಿ ಕುರಿತು ಪುರಸಭೆಯ ಮುಖ್ಯಾಧಿಕಾರಿಗಳಲ್ಲಿ ಹಲವಾರು ಬಾರಿ ಮನವಿ ಮಾಡಿದರೂ ಇಲ್ಲಿಯವರೆಗೂ ಯಾವುದೇ ಕೆಲಸ ಆಗಿಲ್ಲ, ಈಗ ಶಾಲೆ ಪುನರಾರಂಭ ಆಗಿದ್ದು ಮಕ್ಕಳು ಶಾಲೆಗೆ ಬರುತ್ತಿದ್ದು ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮೊದಲೇ ಸ್ವಚ್ಛ ಮಾಡಿ ಎಂದು ಪುನಃ ಮನವಿ ಮಾಡುವೆ. ಒಂದುವೇಳೆ ಹಾಗೇನಾದರೂ ನಿರ್ಲಕ್ಷ್ಯ ತೋರಿದಲ್ಲಿ ನಾವೇ ಶುಚಿಗೊಳಿಸಿ ಮಕ್ಕಳ ಉತ್ತಮ ಆರೋಗ್ಯಕ್ಕೆ ಅನುವು ಮಾಡಿಕೊಡುತ್ತೇವೆ ಎಂದು ಹೇಳಿದರು.
ಈ ಬಗ್ಗೆ ಮಸ್ಕಿ ಪಟ್ಟಣದ 5ನೇ ವಾರ್ಡ್ ನಿವಾಸಿ
ನಾಗಭೂಷಣ ಬಾರಕೇರ ಅವರು ಹೀಗೆ ಹೇಳುತ್ತಾರೆ
“ಪಟ್ಟಣದ ಐದನೆಯ ವಾರ್ಡ್ ನಲ್ಲಿ ಊರೆಲ್ಲಾ ಕಸವನ್ನ ರಸ್ತೆಯ ಪಕ್ಕದಲ್ಲಿ ತಂದು ಬಿಸಾಡುವುದು ಸರ್ವೇಸಾಮಾನ್ಯವಾಗಿದೆ. ಇದರಿಂದ ಇಲ್ಲಿನ ಜನ ಸಾಮಾನ್ಯರಿಗೆ ಕೆಟ್ಟ ವಾಸನೆ ಬರುತ್ತಿದ್ದು, ಸಂಜೆ ಆಗುತ್ತಿದ್ದಂತೆ ಕಸಕ್ಕೆ ಬೆಂಕಿ ಹಚ್ಚುತ್ತಾರೆ, ಇದರಿಂದ ತುಂಬಿಕೊಳ್ಳುವ ದಟ್ಟ ಹೊಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ,ಅಲ್ಲದೆ ಚಿಕ್ಕ ಚಿಕ್ಕ ಮಕ್ಕಳು ಅದೇ ಕೊಳಚೆ ಪ್ರದೇಶದಲ್ಲಿ ಆಟವಾಡುವುದು ತಿರುಗಾಡುವುದು ಸಾಮಾನ್ಯವಾಗಿದೆ, ಅದಕ್ಕಾಗಿ ನಾವು ಹಲವು ಬಾರಿ ಮನವಿ ಮಾಡಿದರೂ ಕಸ ವಿಲೇವಾರಿ ಶಾಲಾ ರಸ್ತೆ ಬದಿಯಲ್ಲಿ ಹಾಕುವುದು ಎಷ್ಟು ಸರಿ? ಎಂಬುದು ಯಕ್ಷಪ್ರಶ್ನೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಪುರಸಭೆಯ ಅಧಿಕಾರಿಗಳನ್ನು ಈ ಬಗ್ಗೆ ಪ್ರಶ್ನಿಸಿದಾಗ ಅವರು ಹೀಗೆಂದರು:
ಮಸ್ಕಿಯಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಮಾಡಲು ಭೂಮಿ ಖರೀದಿ ಪ್ರಕ್ರಿಯೆ ನಡೆಸಿದ್ದು ಇನ್ನೆರಡು ತಿಂಗಳಲ್ಲಿ ಬಹುಶಃ ಆಗಬಹುದು,
ಅಲ್ಲಿಯವರೆಗೂ ಸಮಸ್ಯೆ ಇದ್ದಿದ್ದೇ ಎಂದು ಹೇಳುತ್ತಾ ರಾತ್ರೋರಾತ್ರಿ ತಂದು ಕಸವನ್ನು ಬಿಸಾಡುವವರಿಗೆ ಏನು ಮಾಡಬೇಕು ತಿಳಿಯದಂತೆ ಆಗಿದೆ ಎಂದು ಹೇಳಿದರು.
ಒಟ್ಟಾರೆ ಅಧಿಕಾರಿಗಳು ಎಚ್ಚೆತ್ತು ಮಸ್ಕಿ ಪಟ್ಟಣದ ತುಂಬೆಲ್ಲಾ ಹರಡಿರುವ ಕಸವನ್ನು ಸೂಕ್ತ ರೀತಿಯಲ್ಲಿ ತೆರವುಗೊಳಿಸಿ ಬಹುತೇಕ ಪರಿಸರ ಮತ್ತು ಜನತೆಗೆ ನೆಮ್ಮದಿಯ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
ಚನ್ನಬಸವ ಹಿರೇಮಠ ಕೆ ಟಿವಿ ನ್ಯೂಸ್ ಮಸ್ಕಿ

Add Comment