ರಾಜಭವನದಲ್ಲಿ ಸಂಜೆ 7 ಸಚಿವರಿಂದ ಪ್ರಮಾಣವಚನ ಸ್ವೀಕಾರ ಅಂತ್ಯ

ಅಂತೂ ಇಂತೂ ಕೊನೆಗೂ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಸರ್ಕಾರದ 7 ನೂತನ ಸಚಿವರನ್ನು ನೇಮಕದಲ್ಲಿ ಹಸ್ತಕ್ಷೇಪ ಮಾಡಿ ಶಾಕ್ ನೀಡಿದೆ.
ನೂತನ ಸಚಿವರ ಪಟ್ಟಿ ಇಂತಿದೆ:
1. ಆರ್.ಶಂಕರ್
2. ಎಂ.ಟಿ.ಬಿ.ನಾಗರಾಜ್
3. ಉಮೇಶ್ ಕತ್ತಿ
4. ಸಿ.ಪಿ.ಯೋಗೇಶ್ವರ್
5. ಎಸ್.ಅಂಗಾರ
6. ಅರವಿಂದ ಲಿಂಬಾವಳಿ
7. ಮುರುಗೇಶ್ ನಿರಾಣಿ
ರಾಜಭವನದಲ್ಲಿ ಇಂದು ಸಂಜೆ 3:45ರಿಂದ ನಡೆದ ಸಮಾರಂಭದಲ್ಲಿ ರಾಜ್ಯಪಾಲರಾದ ವಜೂಭಾಯ್ ವಾಲಾ ಅವರು ಈ ಏಳೂ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.
ಈ ಸಮಾರಂಭದಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್,ಸಿಎಂ ಯಡಿಯೂರಪ್ಪ ಸೇರಿದಂತೆ ಹಿರಿಯ ಸಚಿವರು,ಶಾಸಕರು,ಬಿಜೆಪಿ ಮುಖಂಡರು,ಕಾರ್ಯಕರ್ತರು ಹಾಜರಿದ್ದರು.
ಇತ್ತೀಚಿಗೆ ಬೆಂಗಳೂರಿನ ರಾಜರಾಜೇಶ್ವರಿನಗರ ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿ ಸತತ 3ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಮುನಿರತ್ನ ಅವರಿಗೆ ನಕಲಿ‌ ಮತದಾರರ ಗುರುತಿನ ಚೀಟಿ ವಿವಾದದ ಪ್ರಕರಣವಿನ್ನೂ ಸುಪ್ರೀಂಕೋರ್ಟ್ ನಲ್ಲಿರುವ ಕಾರಣ ಬಿಜೆಪಿ ಹೈಕಮಾಂಡ್ ಆದೇಶದ ಮೇರೆಗೆ ನಿಮಗೆ ಸಚಿವ ಸ್ಥಾನವನ್ನು ಈಗಲೇ ಕೊಡುತ್ತಿಲ್ಲ,ಆದರೆ ನೀವು ಈ ಪ್ರಕರಣದಿಂದ ಸುಪ್ರೀಂಕೋರ್ಟ್ ನಲ್ಲಿ ದೋಷಮುಕ್ತರಾದ ಬಳಿಕ ಸಚಿವ ಸ್ಥಾ‌ನ ನೀಡಲಾಗುವುದು ಎಂದು ಸ್ವತಃ ಸಿಎಂ ಯಡಿಯೂರಪ್ಪ ಅವರು ಶಾಸಕ ಮುನಿರತ್ನ ಅವರನ್ನು ಮನವೊಲಿಸಿದ್ದಾರೆ.
ಮತ್ತೊಂದೆಡೆ 2018ರಲ್ಲಿ ಪಕ್ಷೇತರ ಶಾಸಕನಾಗಿ ಮುಳಬಾಗಿಲು ಕ್ಷೇತ್ರದಿಂದ ಮೊದಲ ಬಾರಿ ಗೆಲುವು ಸಾಧಿಸಿದ್ದ ಎಚ್.ನಾಗೇಶ್ ಬಳಿಕ ರಾಜೀನಾಮೆ ನೀಡಿ
ಬಿಜೆಪಿ ಸೇರಿದ್ದರು.
ಕಳೆದ 2020ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಶಾಸಕರಾಗಿ ಗೆದ್ದು ಅಬಕಾರಿ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದ ಎಚ್.ನಾಗೇಶ್ ಅವರಿಗೆ ಸಿಎಂ ಯಡಿಯೂರಪ್ಪ ಇಂದು ಬೆಳಗ್ಗೆ 11:30 ಕ್ಕೆ ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯೇ ಅಂತಿಮ ಸಂಪುಟ ಸಭೆಯೆಂದು ಗೊತ್ತಿರಲಿಲ್ಲ! ಆದರೆ ಸ್ವತಃ ಸಿಎಂ ಯಡಿಯೂರಪ್ಪ ಅವರೇ ನಾಗೇಶ್ ಅವರನ್ನು ಮನವೊಲಿಸಿ ನಿಮಗೆ ಪಕ್ಷದಲ್ಲಿ ಸಮಾನಂತರ ಹುದ್ದೆ ಕೊಡಲಾಗುವುದು ಎಂದು ಸಮಾಧಾನಪಡಿಸಿದರು.
ಆದರೆ ಈ ಸಂಪುಟ ಸಭೆ ಬಳಿಕ ವಲಸಿಗ ಸಚಿವರಾದ ಡಾ.ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ನಾರಾಯಣಗೌಡ ಅವರುಗಳು ಸಿಎಂ ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡು ನಾಗೇಶ್ ಅವರನ್ನು ಸಂಪುಟದಿಂದ ಕೈಬಿಟ್ಟಿದ್ದಕ್ಕೆ ವಿರೋಧ ವ್ಯಕ್ತಪಡಿಸಿದರು‌. ಆದರೆ ಸಿಎಂ ಮಾತ್ರ ಇದು ಹೈಕಮಾಂಡ್ ಆದೇಶ ನಾನೇನೂ ಮಾಡಕಾಗಲ್ಲ ಎಂದರು.
ಇನ್ನೊಂದೆಡೆ ಅಚ್ಚರಿ ಎಂಬಂತೆ ಬೀಳಗಿ ಕ್ಷೇತ್ರದಲ್ಲಿ ಕೇವಲ 3 ಬಾರಿ ಶಾಸಕರಾದರೂ ಕೈಗಾರಿಕಾ ಮಾಫಿಯಾದಿಂದ ಹೇಗೊ ಲಾಬಿ ನಡೆಸಿ ಹೈಕಮಾಂಡ್ ನಿಂದ ಸಚಿವ ಸ್ಥಾನ ಗಿಟ್ಟಿಸಿದ್ದಾರೆ.
ಉಳಿದಂತೆ ಹುಕ್ಕೇರಿಯ 8 ಬಾರಿ ಶಾಸಕ ಮಾಜಿ ಸಚಿವ ಉಮೇಶ್ ಕತ್ತಿ ಸಹಜವಾಗೇ ಮತ್ತೊಮ್ಮೆ ಸಚಿವರಾಗಿದ್ದಾರೆ.
ವಲಸಿಗರಾದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕ ಆರ್.ಶಂಕರ್ ಉಪಚುನಾವಣೆಯಲ್ಲಿ ಹೈಕಮಾಂಡ್ ಹೇಳಿದಂತೆ ಸ್ಪರ್ಧಿಸದ ಕಾರಣ ಈಗ ಸಚಿವರಾಗಿದ್ದಾರೆ‌‌. ಜೊತೆಗೆ ಹೊಸಕೋಟೆ ಉಪಚುನಾವಣೆಯಲ್ಲಿ ಬಿಜೆಪಿಯಿಂದ
ಸ್ಪರ್ಧಿಸಿದರೂ ಸೋತಿದ್ದ ವಲಸಿಗ ಮಾಜಿ ಸಚಿವ ಎಂ.ಟಿ.ಬಿ.ನಾಗರಾಜ್ ಅವರಿಗೆ ಹೇಳಿದಂತೆ ಪರಿಷತ್ ಸದಸ್ಯತ್ವ ನೀಡಿ ಸಚಿವರನ್ನಾಗಿ ಮಾಡಲಾಗಿದೆ.
ಇನ್ನು ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದಲ್ಲಿ 1999 ರಲ್ಲಿ ಪಕ್ಷೇತರ ಶಾಸಕರಾಗಿ ಬಳಿಕ ಕಾಂಗ್ರೆಸ್ ನಿಂದ 2004,2008ರಲ್ಲಿ ಶಾಸಕರಾಗಿದ್ದ ಸೈನಿಕ ಚಿತ್ರದ ಖ್ಯಾತಿಯ ನಾಯಕ ನಟ ಸಿ.ಪಿ.ಯೋಗೇಶ್ವರ್ 2009ರಲ್ಲಿ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಕೇವಲ 235 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಅಶ್ವಥ್ ಅವರಿಗೆ ಸೋತಿದ್ದರು‌. ಆದರೆ 2011ರಲ್ಲಿ ಸ್ವತಃ ಜೆಡಿಎಸ್ ಶಾಸಕ ಅಶ್ವಥ್ ಬಿಜೆಪಿ ಸೇರಿದ ಕಾರಣ ಉಪಚುನಾವಣೆ ನಡೆದು ಬಿಜೆಪಿಯಿಂದ ಯೋಗೇಶ್ವರ್ ಶಾಸಕರಾಗಿದ್ದರು. ಆದರೆ ಯಡಿಯೂರಪ್ಪ ಅವರೇ 2013ರಲ್ಲಿ ಕೆಜೆಪಿ ಪಕ್ಷ ಸ್ಥಾಪಿಸಿದ್ದರಿಂದ ಯೋಗೇಶ್ವರ್ ಅವರೂ ಸಹ ಬಿಜೆಪಿ ತ್ಯಜಿಸಿ ಸಮಾಜವಾದಿ ಪಕ್ಷದಿಂದ 2013ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ಅನಿತಾ ಕುಮಾರಸ್ವಾಮಿ ಅವರನ್ನು ಸೋಲಿಸಿ 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.
ಆದರೆ 2018ರಲ್ಲಿ ಯಡಿಯೂರಪ್ಪ ಅವರು ಕೆಜೆಪಿ ತ್ಯಜಿಸಿ ಬಿಜೆಪಿಗೆ ಬಂದಿದ್ದ ಕಾರಣ ಚನ್ನಪಟ್ಟಣದಲ್ಲಿ ಮತ್ತೆ ಬಿಜೆಪಿಯಿಂದ ಸ್ಪರ್ಧಿಸಿದ್ದರೂ ಆಗ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೆದುರು ಯೋಗೇಶ್ವರ್ ಸೋಲಬೇಕಾಯಿತು.‌
ಹಾಗಿದ್ದರೂ ಆಪರೇಶನ್ ಕಮಲದ ಮೂಲಕ ತನ್ನ ಎದುರಾಳಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಯಶಸ್ವಿಯಾದ ಕಾರಣಕ್ಕೆ ಯೋಗೇಶ್ವರ್ ಅವರಿಗೆ ಬಿಜೆಪಿ ಹೈಕಮಾಂಡ್ ಪರಿಷತ್ ಸ್ಥಾನ ನೀಡಿ ಸಚಿವ ಸ್ಥಾನವನ್ನೂ ದಯಪಾಲಿಸಿದೆ.
ಇನ್ನು ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದ್ದ ಬಿಜೆಪಿ ಕಟ್ಟಾಳು,ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರಿಗೆ ಹೈಕಮಾಂಡ್ ಆದೇಶದ ಪ್ರಕಾರ ಸಚಿವ ಸ್ಥಾನ ನೀಡಲಾಗಿದೆ.
ಅದೇ ರೀತಿ ಕರಾವಳಿಯ ಸುಳ್ಯ ಕ್ಷೇತ್ರದ ಜನಪ್ರಿಯ ಶಾಸಕ ಎಸ್.ಅಂಗಾರ ಅವರು ಸಹಜವಾಗಿ ಸಚಿವರಾಗಿದ್ದಾರೆ.
ಆದರೆ ಚಿತ್ರದುರ್ಗದಲ್ಲಿ 5 ಬಾರಿ ಶಾಸಕರಾಗಿದ್ದ ಜಿ.ಎಚ್.ತಿಪ್ಪಾರೆಡ್ಡಿ,ಸೊರಬ ಕ್ಷೇತ್ರದಿಂದ 4 ಬಾರಿ ಶಾಸಕರಾಗಿರುವ ಮಾಜಿ ಸಚಿವ ಕುಮಾರ್ ಬಂಗಾರಪ್ಪ,ಮೈಸೂರಿನ ಕೃಷ್ಣರಾಜ ಕ್ಷೇತ್ರದ ಹಿರಿಯ
ಶಾಸಕ,ಮಾಜಿ ಸಚಿವ ರಾಮದಾಸ್,ರಾಜ್ಯದ ಏಕೈಕ ಯಾದವ ಸಮುದಾಯದ ಶಾಸಕಿ ಪೂರ್ಣಿಮಾ ಶ್ರೀನಿವಾಸ್,ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್,ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ,ತೀರ್ಥಹಳ್ಳಿಯಲ್ಲಿ 3ನೇ ಬಾರಿಗೆ ಶಾಸಕರಾಗಿರುವ ಅರಗ ಜ್ಞಾನೇಂದ್ರ,ಮೂಡಿಗೆರೆ ಶಾಸಕ ಎಂ.ಪಿ‌.ಕುಮಾರಸ್ವಾಮಿ ಸೇರಿದಂತೆ ಅನೇಕ ಬಿಜೆಪಿ ಮೂಲ ಶಾಸಕರು ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದಾರೆ.
ಕೊನೆಗೆ ಸಚಿವ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ ಎಚ್.ನಾಗೇಶ್ ಹೇಳಿಕೆ ನನ್ನಂತೆ ಇನ್ನೂ ಮೂರ್ನಾಲ್ಕು ಸಚಿವರು ರಾಜೀನಾಮೆ ನೀಡಲಿದ್ದಾರೆ,ಆಗ ಸಚಿವ ಸಂಪುಟದ ಪುನಾರಚನೆ ನಡೆಯಲಿದೆ ಎಂದು ಸುಳಿವು ನೀಡಿದ್ದಾರೆ.
ಆದರೆ ಇದಕ್ಕೂ ಮುನ್ನ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿ “ನಮ್ಮ ಕಡೆಯಿಂದ ಇನ್ನೂ ಐವರು ಸಚಿವರಾಗಬೇಕಾಗಿದೆ‌. ಏಕೆಂದರೆ ಮುಂದೆ ಎಚ್.ವಿಶ್ವನಾಥ್,ಮಹೇಶ್ ಕುಮಟಳ್ಳಿ,ಮಾಲೀಕಯ್ಯ ಗುತ್ತೇದಾರ್ ಸಚಿವರಾಗುವುದು ಇನ್ನೂ ಬಾಕಿಯಿದೆ.
ಈ ವರ್ಷದ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಬಿಜೆಪಿ ಸರ್ಕಾರದ ಹಾಲಿ 7 ಸಚಿವರು ರಾಜೀನಾಮೆ ನೀಡಲಿರುವ ಕಾರಣ ಮತ್ತೊಮ್ಮೆ ಸಂಪುಟ ಪುನಾರಚನೆ ನಡೆಯಲಿದೆ ಎಂದು ಬಾಂಬ್ ಸಿಡಿಸಿದ್ದಾರೆ.
ಕೆ ಟಿವಿ ನ್ಯೂಸ್ ಬೆಂಗಳೂರು(ರಾಜಭವನದಿಂದ)

Add Comment