ಶಿವಮೊಗ್ಗ ಬಳಿಯ ಕಲ್ಲುಕ್ವಾರಿ ಸ್ಫೋಟ-ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ

ಶಿವಮೊಗ್ಗದ ಹುಣಸೋಡು-ಅಬ್ಬಲಗೆರೆ ಬಳಿ ಇರುವ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆ ದೊಡ್ಡ ಅಚಾತುರ್ಯ. ಇದಕ್ಕೆ ಕಾರಣರಾದವರನ್ನು ಹುಡುಕಿ ಕಾನೂನಿನ ಮುಂದೆ ತರಲಾಗುವುದು ನಾಳೆ ತಾವು ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸುತ್ತೇನೆ ಎಂದು ಹೇಳಿದರು.
ಶಿವಮೊಗ್ಗದಲ್ಲಿ ಆದ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲು ತಜ್ಞರ ತಂಡ ಆಗಮಿಸಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಗಣಿ ಮತ್ತು ಭೂ ವಿಜ್ಞಾನ ಸಚಿವರು, ಸಂಸದ ಬಿ.ವೈ.ರಾಘವೇಂದ್ರ ಅವರು ಸ್ಥಳಕ್ಕೆ ತೆರಳಿ ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದಾರೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನದಳ ಕೂಡ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದೆ. ತನಿಖೆಯ ವರದಿ ಬಂದ ಮೇಲೆ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಸ್ಫೋಟದಲ್ಲಿ ಮೃತಪಟ್ಟ ಐವರು ಕಾರ್ಮಿಕರ ಶವಗಳನ್ನು ಇದುವರೆಗೆ ಹೊರತೆಗೆಯಲಾಗಿದೆ.
ಕೆ ಟಿವಿ ಕನ್ನಡ ಬೆಂಗಳೂರು ಮತ್ತು ಶಿವಮೊಗ್ಗ

Add Comment