ಆರೋಗ್ಯ-ವೈದ್ಯಕೀಯ ಶಿಕ್ಷಣ ಖಾತೆಗಳನ್ನು ಒಬ್ಬ ಸಚಿವರಿಗೇ ಕೊಡಲಿ

ಸಿಎಂ ಯಡಿಯೂರಪ್ಪ ಅವರು ತಮ್ಮ ಸಂಪುಟದಲ್ಲಿ ನೂತನ ಸಚಿವರಿಗೆ ಮಾಡಿರುವ ಖಾತೆ ಹಂಚಿಕೆ ಮತ್ತು ಇತರ ಸದಸ್ಯರಿಗೆ ಖಾತೆ ಮರುಹಂಚಿಕೆ ಬಗ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮೊದಲ ಬಾರಿ ಬಹಿರಂಗವಾಗಿ ಟೀಕೆ ಮಾಡಿದ್ದಾರೆ.
ತನ್ನ ಬಳಿ ಇದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಹಿಂಪಡೆದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಬಿಜೆಪಿ ರಾಜಕೀಯವಾಗಿ ಆತ್ಮಹತ್ಯೆಗೆ ಮುಂದಾಗಿದೆ ಎಂದು ಗುಡುಗಿದ್ದಾರೆ. ಮಾಧ್ಯಮಗಳೊಂದಿಗೆ ಇಂದು ಮಾತನಾಡುತ್ತಿದ್ದ ಡಾ.ಕೆ ಸುಧಾಕರ್, ತಾನು ಬಿಜೆಪಿಗೆ ಬರುವಾಗ ನೀಡಲಾಗಿದ್ದ ಮಾತನ್ನು ಉಳಿಸಿಕೊಳ್ಳಲಾಗಿಲ್ಲ ಎಂದೂ ಅವರು ವಿಷಾದ ವ್ಯಕ್ತಪಡಿಸಿದ್ಧಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಬಿಜೆಪಿಗೆ ಮೂರು ಪರ್ಸೆಂಟ್ ವೋಟು ಬಂದಿರಲಿಲ್ಲ. ನಾನು ಬಿಜೆಪಿ ಸೇರಿ 85 ಸಾವಿರ ಮತ ಪಡೆದೆ. 5 ಸಾವಿರ ಮತದಿಂದ 85 ಸಾವಿರ ಮತ ಪಡೆಯುವುದು ಸಾಮಾನ್ಯ ವಿಷಯ ಅಲ್ಲ. ಎಂಥ ಪರಿಸ್ಥಿತಿಯಲ್ಲಿ ನಾನು ರಿಸ್ಕ್ ತೆಗೆದುಕೊಂಡು ಬಿಜೆಪಿಗೆ ಬಂದಿದ್ದೆ ಎಂಬುದು ಗೊತ್ತಿದೆ. ಪಕ್ಷಕ್ಕೆ ಒಳ್ಳೆಯ ಹೆಸರು ತರಲು ನನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸ ಮಾಡಿದ್ದೇನೆ ಎಂದು ಆರೋಗ್ಯ ಸಚಿವರು ಹೇಳಿಕೊಂಡಿದ್ದಾರೆ.
ನಾನು ಬಿಜೆಪಿಗೆ ಬರುವಾಗ ಏನೇನು ಮಾತುಕತೆ ಆಗಿತ್ತು ಅಂತ ನನಗೆ ಗೊತ್ತು. ವಿವಿಧ ಘಟನಾವಳಿಗಳ ಮೂಲಕ ಈ ಸರ್ಕಾರ ಬಂದಿದೆ. ಈ ವೇಳೆ ನಡೆದ ಮಾತುಕತೆ ಪ್ರಕಾರ ಈಗ ನಡೆದುಕೊಳ್ಳಬೇಕು. ನನಗೆ ಪಕ್ಷದ ಶಿಸ್ತು ಮುಖ್ಯ. ಸಿಎಂ ಏನು ಮಾಡಬೇಕಿತ್ತು ಅಂತ ನಾನು ಹೇಳಲು ಆಗುವುದಿಲ್ಲ. ಸಿಎಂ ಭೇಟಿಯಾಗಿ ನಾನು ಮಾತನಾಡುತ್ತೇನೆ. ಆದರೆ, ಆಶೋಕ್ ಜೊತೆ ನಾನಿನ್ನೂ ಮಾತನಾಡಿಲ್ಲ. ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿದ್ದೇನೆ ಅಷ್ಟೇ. ನನ್ನ ಜೊತೆ ರಮೇಶ್ ಜಾರಕಿಹೊಳಿ ಕೂಡ ಮಾತನಾಡಿದ್ದಾರೆ ಎಂದವರು ತಿಳಿಸಿದ್ದಾರೆ.

ಎಂಟಿಬಿ ನಾಗರಾಜ್ ಅವರಿಗೆ ಅನ್ಯಾಯ ಆಗಿದೆ. ವಸತಿ ಸಚಿವ ಸ್ಥಾನವನ್ನು ಅವರು ಬಿಟ್ಟು ಬಂದಿದ್ದರು. ಈಗ ಎಂಟಿಬಿ ನಾಗರಾಜ್ ಅವರ ರಕ್ಷಣೆ ನಮ್ಮ ಕರ್ತವ್ಯವಾಗಿದೆ. ಈ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ ಎಂದು ಡಾ. ಸುಧಾಕರ್ ಸ್ಪಷ್ಟಪಡಿಸಿದ್ಧಾರೆ.
ತಮ್ಮ ಖಾತೆ ಬದಲಾವಣೆ ಬಗ್ಗೆ ಮಾತನಾಡಿದ ಅವರು, ತಾನು ಯಾವುದೇ ಇಲಾಖೆಗೆ ಕಚ್ಚಿಕೊಂಡು ಕೂರುವುದಿಲ್ಲ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಎರಡೂ ಖಾತೆ ಒಬ್ಬರ ಬಳಿ ಇದ್ದರೆ ಒಳ್ಳೆಯದು ಎಂಬ ಕಾರಣಕ್ಕೆ ನನಗೆ ಕೊಡಲಾಗಿತ್ತು. ಈಗ ಅದನ್ನು ಯಾರಿಗೇ ಕೊಟ್ಟರೂ ಒಬ್ಬರ ಬಳಿಯೇ ಆ ಎರಡು ಖಾತೆಗಳು ಇರಬೇಕು. ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ಎರಡೂ ಇಲಾಖೆ ಮಧ್ಯೆ ಸಮನ್ವಯತೆ ಇರುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೆ ಟಿವಿ ಕನ್ನಡ ಬೆಂಗಳೂರು

Add Comment