ಸಾರ್ವಕಾಲಿಕ ದಾಖಲೆ ಬೆಲೆಗೆ ಏರಿದ ತೈಲ ಬೆಲೆ!

ಜನವರಿ 22 ರ ಬೆಳಿಗ್ಗೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 85.45 ರೂ.ಗೆ ತಲುಪಿದೆ.
ತೈಲ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ ಸುಮಾರು 25 ಪೈಸೆ ಹೆಚ್ಚಿಸಿವೆ, ಈ ಮೂಲಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇದು ಸಾರ್ವಕಾಲಿಕ ಗರಿಷ್ಠ ಮಟ್ಟದ ಪೆಟ್ರೋಲ್ ಬೆಲೆ ಏರಿಕೆ ಎನ್ನಲಾಗುತ್ತಿದೆ.
  ಮುಂಬೈಯಲ್ಲಿ ಪ್ರತಿ ಲೀಟರ್‌ಗೆ ಪೆಟ್ರೋಲ್ ಬೆಲೆಯು ದಾಖಲೆಯ ಗರಿಷ್ಠ 92.04 ರೂ. ತಲುಪಿದೆ. ಮತ್ತೊಂದೆಡೆ, ಡೀಸೆಲ್​ ಬೆಲೆಯೂ 25 ಪೈಸೆ ಏರಿಕೆ ಮಾಡಲಾಗಿದ್ದು, ಪ್ರತಿ ಲೀಟರ್‌ಗೆ 75.63 ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಈ ತಿಂಗಳ ಜನವರಿ 18 ರಂದು ತೈಲ ಕಂಪೆನಿಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 25 ಪೈಸೆ ಹೆಚ್ಚಿಸಿದ ನಂತರ ಇಂಧನ ಬೆಲೆಗಳು ಜನವರಿ 18 ರ ಬೆಳಿಗ್ಗೆ ಅದರ ದಾಖಲೆಯ ಗರಿಷ್ಠ 84.95 ರೂಗೆ ತಲುಪಿತ್ತು.
ಮುಂಬೈಯಲ್ಲಿ ಪ್ರತಿ ಲೀಟರ್‌ಗೆ ಪೆಟ್ರೋಲ್ ಬೆಲೆ 91.56 ರೂ. ತಲುಪಿತ್ತು. ತೈಲ ಕಂಪೆನಿಗಳು ಇದೀಗ ಮತ್ತೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್​ ಬೆಲೆಯನ್ನು ಏರಿಕೆ ಮಾಡಿವೆ. ತೈಲ ಕಂಪೆನಿಗಳು ಕಳೆದ 20 ದಿನಗಳಲ್ಲಿ ತೈಲ ಬೆಲೆಗಳನ್ನು ಏರಿಸುತ್ತಿರುವುದು ಇದು ಮೂರನೇ ಬಾರಿ.
ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ದೈನಂದಿನ ಬೆಲೆ ಪರಿಷ್ಕರಣೆ ಪುನರಾರಂಭದ ಪರಿಣಾಮವಾಗಿಯೇ ತೈಲ ಬೆಲೆ ಏರಿಕೆಯಾಗುತ್ತಿದೆ ಎನ್ನಲಾಗುತ್ತಿದೆ.
2020 ರ ಮಧ್ಯದಲ್ಲೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 80 ರೂ. ದಾಟುವ ಮೂಲಕ ಸಾರ್ವಕಾಲಿಕ ದಾಖಲೆ ಬರೆದಿತ್ತು. ಆದರೆ, ಇದೀಗ ತೈಲ ಕಂಪೆನಿಗಳು ಮತ್ತೆ ಮತ್ತೆ ಪ್ರತಿದಿನ ಬೆಲೆ ಪರಿಷ್ಕರಣೆ ಮಾಡುತ್ತಿರುವ ಪರಿಣಾಮ ದೆಹಲಿ ಮತ್ತು ಮುಂಬೈನಲ್ಲಿ ಶೀಘ್ರದಲ್ಲೆ ಪೆಟ್ರೋಲ್-ಡೀಸೆಲ್ ಬೆಲೆ 100 ರೂ. ದಾಟಲಿದೆ ಎನ್ನಲಾಗುತ್ತಿದೆ.
ದರಗಳನ್ನು ಹೆಚ್ಚಿಸಲಾಗಿದೆ ಆದರೆ ಸ್ಥಳೀಯ ಮಾರಾಟ ತೆರಿಗೆ ಅಥವಾ ವ್ಯಾಟ್‌ನ ಪ್ರಮಾಣವನ್ನು ಅವಲಂಬಿಸಿ ಅಂತಿಮ ಚಿಲ್ಲರೆ ಮಾರಾಟದ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ.
ಕೆ ಟಿವಿ ಕನ್ನಡ

Add Comment