ಚಿಕ್ಕಮಗಳೂರಿನ ರೆಸಾರ್ಟ್ ನಲ್ಲಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಬಿಜೆಪಿ ಅತೃಪ್ತರ ರಹಸ್ಯ ಸಭೆ!

ಚಿಕ್ಕಮಗಳೂರು ಹೊರವಲಯದ ಸರಾಯ್ ರೆಸಾರ್ಟ್ ನಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿರುವ ಅತೃಪ್ತ ಸಚಿವರು ಮತ್ತು ಸಚಿವ ಸ್ಥಾನ ಸಿಗದ ಬಿಜೆಪಿ ಶಾಸಕರು ರಹಸ್ಯ ಸಭೆ ನಡೆಸಿರುವುದು ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ನಗರದ ಹೊರವಲಯದ ಸರಾಯ್ ರೆಸಾರ್ಟ್ ನಲ್ಲಿ ನಡೆದ ಈ ರಹಸ್ಯ ಸಭೆಯಲ್ಲಿ ಕೇವಲ ಬಿಜೆಪಿ ವಲಸಿಗ ಸಚಿವರು ಅಲ್ಲದೆ ಬಿಜೆಪಿ ಮೂಲ ಶಾಸಕರೂ ಭಾಗವಹಿಸಿದ್ದರು.
ಸಣ್ಣ ನೀರಾವರಿ ಸಚಿವ ಸಿ.ಪಿ.ಯೋಗೇಶ್ವರ್,ಅಬಕಾರಿ ಸಚಿವ ಕೆ.ಗೋಪಾಲಯ್ಯ ಜೊತೆ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮತ್ತು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಅವರೂ ಸಹ ಪಾಲ್ಗೊಂಡಿದ್ದರು.
ಆದರೆ ಈ ಬಗ್ಗೆ ಶುಕ್ರವಾರ ರಾತ್ರಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿ “ಇಲ್ಲ,ಇದು ಯಾವ ಅತೃಪ್ತ ಬಿಜೆಪಿ ಗುಂಪಿನ ಸಭೆಯಲ್ಲ,ನನ್ನ ಇಲಾಖೆಯ ಕೆಲಸದ ಬಗ್ಗೆ ಮಾತನಾಡಲು ರೆಸಾರ್ಟ್ ಗೆ ಬಂದಿದ್ದೇವೆ,ಅಷ್ಟೇ…ಎಂದು ಸಮಜಾಯಿಷಿ ನೀಡಿದ್ದರು.
ಮತ್ತೊಂದೆಡೆ ಮಾಧ್ಯಮಗಳ ಕ್ಯಾಮೆರಾಗಳು ಮತ್ತು ಮೊಬೈಲ್ ಕ್ಯಾಮೆರಾಗಳಿಂದ ಸೆರೆಯಾಗಿದ್ದೇವೆ ಎಂದು ತಿಳಿದ ತಕ್ಷಣ ಸಣ್ಣ‌ ನೀರಾವರಿ ಸಚಿವ ಸಿ.ಪಿ.ಯೋಗೇಶ್ವರ್ ಗಾಬರಿಯಿಂದ ರೆಸಾರ್ಟ್ ನಿಂದ ಕಾರಿನಲ್ಲಿ ವಾಪಾಸ್ಸಾದರು.
ಇನ್ನೊಂದೆಡೆ ಕೊರೊನಾ ಸೋಂಕಿನ ಕಾಲದಲ್ಲೂ ಒಳ್ಳೆಯ ಕೆಲಸ ಮಾಡಿದರೂ ನನ್ನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಿತ್ತುಕೊಂಡು ಅಬಕಾರಿ ಇಲಾಖೆ ಕೊಟ್ಟಿದ್ದಾರೆ,ನೋಡಣ್ಣ ಎಂದು ಅತೃಪ್ತ ಸಚಿವ ಗೋಪಾಲಯ್ಯ ತಮ್ಮ ನಾಯಕ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಹೇಳಿದ್ದಾರೆ. ಆಗ ಸಚಿವ ರಮೇಶ್ ಜಾರಕಿಹೊಳಿ ಸಿಟ್ಟಾಗಿ ” ಏ ಗೋಪಾಲಯ್ಯ,ನೀನು ರೌಡಿಸಂ ಮಾಡಿಸುತ್ತಿದ್ದೆ,ಹಿಂದೆ ಡಾನ್ ಆಗಿದ್ದೆ ಎಂದು ಸ್ವತಃ ದೇವೇಗೌಡರ ಕುಟುಂಬ ನಿನಗೆ ಒಕ್ಕಲಿಗ ಪ್ರಬಲ ಶಾಸಕ ಎಂದು ಗೊತ್ತಿದ್ದರೂ ಸಚಿವ ಸ್ಥಾನ ನೀಡಲಿಲ್ಲ, ಆದರೆ ನಿನಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೊಡಿ ಎಂದು ಸಿಎಂ ಯಡಿಯೂರಪ್ಪ ಅವರಿಗೆ ನಾನೇ ಒತ್ತಡ ಹೇರಿದ್ಧೆ. ಈಗ ನಿನಗೇನೂ ಅವಮಾನ ಆಗಿಲ್ಲ,ರೊಕ್ಕ ಬರೊ ಅಬಕಾರಿ ಖಾತೆ ಸಿಕ್ಕಿದೆ,ಹೋಗಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇರೊ ಬಾರ್ ಅಂಡ್ ರೆಸ್ಟೋರೆಂಟ್ ಗಳಿಂದ,ಪಬ್ ಗಳಿಂದ,ರೆಸಾರ್ಟ್ ಗಳಿಂದ ಕಲೆಕ್ಷನ್ ಮಾಡ್ಕೊಂಡು ಸದ್ಯ ಸುಮ್ನಿರು,ನೋಡು ಈ ಎಂ.ಪಿ.ಕುಮಾರಸ್ವಾಮಿ ಅವರು ದಲಿತ ಬಿಜೆಪಿ ಶಾಸಕನಾಗಿ ಹಲವಾರು ಬಾರಿ ಮೂಡಿಗೆರೆ ಕ್ಷೇತ್ರದಿಂದ ಗೆದ್ದಿದ್ದರೂ ಯಡಿಯೂರಪ್ಪ ಇವರಿಗೊಂದು ಸಚಿವ ಸ್ಥಾನ ಕೊಟ್ಟಿಲ್ಲ,ಈಗ ನನ್ನ ಬೆಸ್ಟ್ ಫ್ರೆಂಡ್ ಸಿ.ಪಿ.ಯೋಗೇಶ್ವರ್ ಅವರಿಗೂ ಸಣ್ಣ ನೀರಾವರಿ ಖಾತೆ ಕೊಟ್ಟಿದ್ದಾರೆ,ಅವರು 5 ಸಲ ಚನ್ನಪಟ್ಟಣ ಶಾಸಕರಾಗಿದ್ರು,ಈ ಸಲ ನಮ್ಮ ಹಳೆಯ ಸಿಎಂ ಕುಮಾರಣ್ಣನ ಹವಾಕ್ಕೆ ಸೋತಿದ್ರು. ನಾನೇ ಸಿಎಂ ಯಡಿಯೂರಪ್ಪರ ಬಳಿ ಯೋಗೇಶ್ವರ್ ಅವರಿಗೆ ಸಚಿವ ಸ್ಥಾನ ಕೊಡಲೇಬೇಕು,ನಮ್ಮನ್ನೆಲ್ಲಾ ಬಿಜೆಪಿಗೆ ಕರೆತಂದು ಸರ್ಕಾರ ರಚನೆಯಾಗಿ ನೀವು ಸಿಎಂ ಆಗಲು ಯೋಗೇಶ್ವರ್ ಹಗಲುರಾತ್ರಿ ಎನ್ನದೆ ಕಾದು ಮುಂಬೈನಲ್ಲಿ ನಮ್ಮನ್ನು ಜೋಪಾನವಾಗಿ ಬೆಂಗಳೂರಿಗೆ ಕರೆತಂದು ನಿಮ್ಮ ಪಕ್ಷ ಸೇರೊ ಹಾಗೆ ಮಾಡಿದ್ದಾರೆ ಎಂದು ಹೇಳಿ ಯೋಗೇಶ್ವರ್ ಅವರಿಗೆ MLC ಜೊತೆಗೆ ಸಚಿವ ಸ್ಥಾನ ಕೊಡಿಸಿದ್ದೇನೆ,ಆದ್ದರಿಂದ ನಾನು ಈಗ ಬಿಜೆಪಿ ನಾಯಕ,ಹಳೆಯದೆಲ್ಲಾ ಮರೆತು ಎಲ್ಲರೂ ಮುಂದಿನ ರಾಜಕೀಯ ಎದುರಿಸೋಣ,ತಾ.ಪಂ-ಜಿ.ಪಂ ಚುನಾವಣೆ ಜೊತೆಗೆ ಬೆಂಗಳೂರಿನ ಬಿಬಿಎಂಪಿ ಎಲೆಕ್ಷನ್ ಎದುರಿಸೋಣ,ಗೋಪಾಲಣ್ಣ ಎಂದು ಸಭೆಯಲ್ಲಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಆದಾಗ್ಯೂ ಈಗ ಖಾತೆ ಹಂಚಿಕೆ ಅಸಮಾಧಾನ ತಾತ್ಕಾಲಿಕ,ಮುಂದೆ ಖಾತೆ ಬದಲಾವಣೆ ಆಗುತ್ತೆ ಎಂದು ಸ್ವತಃ ಸಿಎಂ ಯಡಿಯೂರಪ್ಪ ಹೇಳಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದಾಗ ವಲಸಿಗರು ಓಕೆ ಎಂದಿದ್ದಾರೆ. ಆದರೆ ಮೂಲ ಬಿಜೆಪಿ ಶಾಸಕರಾಗಿ ಸಚಿವರಾಗದ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಮಾತ್ರ ಮೌನವಾಗೇ ರೆಸಾರ್ಟ್ ನಿಂದ ಹೊರಬಂದರು.
ಕೆ ಟಿವಿ ಕನ್ನಡ ಚಿಕ್ಕಮಗಳೂರು

Add Comment