ಬೆಂಗಳೂರಿನಲ್ಲಿ ದಿಢೀರ್ 6 ಸಚಿವರ ರಾಜೀನಾಮೆ – ಬಿಜೆಪಿಗರು ಫುಲ್ ಖುಷ್

1 Star2 Stars3 Stars4 Stars5 Stars (No Ratings Yet)
Loading...

 

ಬಿಜೆಪಿಯ ಶಾಸಕರು ಫುಲ್ ಖುಷಿಯಾಗಿದ್ದಾರೆ. ಕಾರ್ಯಕರ್ತರಿಗಂತೂ ಇದೇ ನಿಜವಾದ ಹೋಳಿ ಹಬ್ಬ. ಕಲರ್ ಕಲರ್ ಬಣ್ಣ ಎರಚೋ ಬದಲು ಕೇಸರಿ ಬಣ್ಣ ಎರಚಿ ಸಂಭ್ರಮಿಸೋ ಸುದ್ದಿ. ಬೆಂಗಳೂರಿನಲ್ಲಿ ದಿಢೀರ್ 6 ಸಚಿವರು ರಾಜೀನಾಮೆ ನೀಡಿದ್ದಾರೆ.

ಮಧ್ಯಪ್ರದೇಶದಿಂದ ಬೆಂಗಳೂರಿಗೆ ಬಂದಿರೋ 18 ಶಾಸಕರ ಪೈಕಿ 6 ಸಚಿವರೂ ಇದ್ದರು. ಕಮಲನಾಥ್ ಸರ್ಕಾರದಲ್ಲಿದ್ದ ಈ 6 ಸಚಿವರು ಉಳಿದ 12 ಶಾಸಕರೂ ರಾಜ್ಯಪಾಲರಿಗೆ ಮತ್ತು ವಿಧಾನಸಭಾ ಸ್ಪೀಕರ್‍ಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಕಾಂಗ್ರೆಸ್‍ನ ಪ್ರಭಾವಿ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ಕಾಂಗ್ರೆಸ್ ತೊರೆದ ಬೆನ್ನಲ್ಲೇ ಈ 18 ಶಾಸಕರು ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ನಿಶ್ಚಿತವಾಗಿದೆ. 18 ಶಾಸಕರು ರಾಜೀನಾಮೆ ಅಂಗೀಕಾರವಾದ ತಕ್ಷಣವೇ ಬಿಜೆಪಿ ಸೇರಲಿದ್ದಾರೆ. ಜ್ಯೋತಿರಾದಿತ್ಯ ಸಿಂಧಿಯಾ ಇಂದು ರಾತ್ರಿ ಅಥವಾ ನಾಳೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸಮ್ಮುಖದಲ್ಲಿ ಬಿಜೆಪಿ ಸೇರಲಿದ್ದಾರೆ.

ರಾಜೀನಾಮೆ ಕೊಟ್ಟಿರೋ 18 ಶಾಸಕರಿಗೆ ಕರ್ನಾಟಕದ ಸಿಎಂ ಯಡಿಯೂರಪ್ಪ ಸಲಹೆಯಂತೆ ಬಿಜೆಪಿ ರಾಜ್ಯ ನಾಯಕರ ತಂಡವೊಂದು ಆತಿಥ್ಯ ಒದಗಿಸಿದೆ.

ಇದರೊಂದಿಗೆ ಮಧ್ಯಪ್ರದೇಶದಲ್ಲಿ ಕೂದಲೆಳೆ ಅಂತರದಲ್ಲಿ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿ ಈಗ ಮತ್ತೆ ಅಧಿಕಾರ ಹಿಡಿಯಲಿದೆ. 14 ತಿಂಗಳ ವನವಾಸದ ಬಳಿಕ ಶಿವರಾಜ್ ಸಿಂಗ್ ಚೌಹಾಣ್ ಮತ್ತೆ ಸಿಎಂ ಆಗಲಿದ್ದಾರೆ. ಜ್ಯೋತಿರಾದಿತ್ಯ ಸಿಂಧ್ಯಾ ರಾಜ್ಯಸಭೆ ಪ್ರವೇಶಿಸಲಿದ್ದು ಕೇಂದ್ರ ಸಚಿವರಾಗಲಿದ್ದಾರೆ.

Add Comment