ಡಿಕೆಶಿ ನೇಮಕದ ಬೆನ್ನಲ್ಲೇ ಕಾಂಗ್ರೆಸ್ ಇಬ್ಭಾಗ ?

1 Star2 Stars3 Stars4 Stars5 Stars (1 votes, average: 5.00 out of 5)
Loading...

ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ನೇಮಕವಾಗುತ್ತಿದ್ದಂತೆಯೇ ಕರ್ನಾಟಕ ಕಾಂಗ್ರೆಸ್ ಬಹುತೇಕ ಇಬ್ಭಾಗವಾದಂತಾಗಿದೆ. ಸಿದ್ದರಾಮಯ್ಯ ಹಾಗೂ ಕೆಲ ಕಾಂಗ್ರೆಸ್ ನಾಯಕರ ಇಚ್ಚೆಗೆ ವಿರುದ್ಧವಾಗಿ ಹೈಕಮಾಂಡ್ ಡಿಕೆಶಿಗೆ ಮಣೆ ಹಾಕಿದೆ. ಹಲವು ಪ್ರಕರಣಗಳಲ್ಲಿ ವಿಚಾರಣೆ ಎದುರಿಸ್ತಿರೋ ಡಿಕೆಶಿಯಿಂದ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು ವಿಶ್ಲೇಷಿಸಲಾಗ್ತಿದೆ.

ಈ ಮಧ್ಯೆ, ಡಿಕೆಶಿ ನೇಮಕದ ಮೊದಲ ದಿನವೇ ಕಾಂಗ್ರೆಸ್‍ನ ಬಣ ರಾಜಕೀಯವನ್ನು ಬಯಲು ಮಾಡುವಂತಹ ಘಟನೆಗಳು ಬೆಳಕಿಗೆ ಬಂದಿವೆ. ಹೈಕಮಾಂಡ್‍ನಿಂದ ಘೋಷಣೆ ಹೊರಬೀಳುತ್ತಿದ್ದಂತೆಯೇ, ಡಿಕೆಶಿ ವಿಧಾನಸೌಧದಲ್ಲೇ ಸಿದ್ದರಾಮಯ್ಯ ಭೇಟಿಗೆ ಹೋಗಿದ್ರು. ಕೈಯಲ್ಲಿ ಸಿಂಗಲ್ ಕೆಂಪು ರೋಸ್ ಬೇರೆ ಇತ್ತು. ಡಿಕೆಶಿ ಕಂಡೊಡನೆಯೇ, ಸಿದ್ದು ಇರಿಸು ಮುರಿಸಿಗೊಳಗಾದ್ರು. ಕಂಗ್ರಾಟ್ಸ್ ಸರ್ ಅಂತ ಡಿಕೆಶಿ ಹೇಳಿದ್ರೆ, ನಂಗ್ಯಾಕಯ್ಯಾ ಕಂಗ್ರಾಟ್ಸ್ ಹೇಳ್ತೀಯಾ ? ಅಂತ ಕೋಪ ತೋರಿಸಿಕೊಳ್ಳಲಾಗದೇ ಪ್ರಶ್ನಿಸಿದ್ರು. ಇದು ಇಲ್ಲಿಗೇ ಮುಗಿಯಲಿಲ್ಲ. ಇಬ್ಬರ ಮಧ್ಯೆ ಇರೋ ಒಡಕು, ವಿಧಾನಸಭೆ ಅಧಿವೇಶನದಲ್ಲಿ ಸ್ಪಷ್ಟವಾಗಿ ಬಯಲಾಯ್ತು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವ ಡಾ ಸುಧಾಕರ್ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಮುಂದಾಗಿದ್ರು. ಈ ವೇಳೆ, ಸುಧಾಕರ್ ಪರ ನಿಂತ ಮಿತ್ರಮಂಡಳಿ ಸಚಿವರು, ಸಿದ್ದು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು. ಆದರೆ, ಸಿದ್ದು ಪರ ನಿಲ್ಲಬೇಕಿದ್ದ ಕಾಂಗ್ರೆಸ್ ಶಾಸಕರು ಮೌನಕ್ಕೆ ಜಾರಿದ್ರು. ಸಿದ್ದು ಪರಮಾಪ್ತರಾದ ಕೆ ಜೆ ಜಾರ್ಜ್, ಕೃಷ್ಣಬೈರೇಗೌಡ ಮೊದಲಾದ ಬೆರಳೆಣಿಕೆ ನಾಯಕರು ಎದ್ದು ನಿಂತು ಕಾದಾಡಿದ್ರು. ಆದ್ರೆ, ಸಿದ್ದು ಪಕ್ಕದಲ್ಲೇ ಕೂತಿದ್ದ ಡಿಕೆಶಿ ಮಾತ್ರ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಮಗುಮ್ಮಾಗಿದ್ದರು.

ಕೆಪಿಸಿಸಿ ಅಧ್ಯಕ್ಷ ಪಟ್ಟ ಸಿಕ್ಕಿದ ಖುಷಿಯಲ್ಲಾದ್ರೂ ಡಿಕೆಶಿ ಘರ್ಜಿಸ್ತಾರೆ ಅಂತ ಕಾಂಗ್ರೆಸ್ ಶಾಸಕರು ಅಂದುಕೊಂಡಿದ್ದೇ ಬಂತು. ಡಿಕೆಶಿ ಮಾತ್ರ ಸಿದ್ದು ಬೆಂಬಲಕ್ಕೆ ಧಾವಿಸಲಿಲ್ಲ. ಮೊದಲ ದಿನವೇ ಹೀಗಾದರೆ, ಪಕ್ಷದ ಕಥೆ ಮುಂದೇನು ಅನ್ನೋ ಚಿಂತೆಯಲ್ಲಿ ಕಾಂಗ್ರೆಸ್ ನಾಯಕರು ಮುಳುಗಿದ್ದಾರೆ.

Add Comment