ಡ್ರಗ್ಸ್ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಹೊರಬಂದ ನಟಿ ರಾಗಿಣಿ ಇಂದು ಲೈವ್ ವೀಡಿಯೋ ಮಾಡುವ ಮೂಲಕ ಗಳಗಳನೆ ಕಣ್ಣೀರು ಹಾಕಿದ್ದಾರೆ. ಜೊತೆಗೆ ಜೈಲಿನಲ್ಲಿ ಅನುಭವಿಸಿದ ಕಷ್ಟದ ದಿನಗಳ ಬಗ್ಗೆಯೂ ಸಹ ಹಂಚಿಕೊಂಡರು. ಆ ದಿನಗಳು ತುಂಬಾ ಕಷ್ಟದ್ದಾಗಿತ್ತು, ಕುಟುಂಬದ ಬೆಂಬಲದಿಂದಲೇ ನಾನು ಸ್ಟ್ರಾಂಗ್ ಆಗಿದ್ದೇನೆ. ನಾನು ತುಂಬಾ ಮೌನ ವಹಿಸಿದ್ದೇನೆ. ಆದರೆ ದುರ್ಬಲಗೊಂಡಿಲ್ಲ. ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇದ್ದರೆ, ನಿಮ್ಮಲ್ಲಿ ಛಲವಿದ್ದರೆ ಯಾರಿಗೂ ಯಾವುದಕ್ಕೂ ಉತ್ತರಿಸಬೇಕಿಲ್ಲ. ಈ ಶಕ್ತಿಯಿಂದಲೇ ನಾನೀಗ ನಿಮ್ಮ ಮುಂದೆ ಬಂದು ಮಾತನಾಡುತ್ತಿದ್ದೇನೆ. 12 ವರ್ಷದಿಂದ ಕನ್ನಡ ಚಿತ್ರರಂಗದಲ್ಲಿ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದೇನೆ ಎಲ್ಲ ರೀತಿಯ ಏಳು ಬೀಳುಗಳನ್ನು ಕಂಡಿದ್ದೇನೆ. ಕಷ್ಟದ ಸಂದರ್ಭಗಳನ್ನು ನಿಭಾಯಿಸುವ ಬಗ್ಗೆ ನಮ್ಮ ತಂದೆ, ತಾಯಿ ನಮಗೆ ಚೆನ್ನಾಗಿ ಹೇಳಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.