ಚಿಕ್ಕಬಳ್ಳಾಪುರ ಬಳಿ ಅಕ್ರಮ ಜಿಲೆಟಿನ್ ಸ್ಫೋಟ-6 ಸಾವು

ಶಿವಮೊಗ್ಗ ಜಿಲ್ಲೆಯ ಹುಣಸೋಡಿ ಕಲ್ಲುಕ್ವಾರೆಯಲ್ಲಿ ಜಿಲೆಟಿನ್ ಸ್ಫೋಟ ಮಾಸುವ ಮುನ್ನವೇ ಅಂತದ್ದೇ ಒಂದು ಅವಘಡ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಹಿರೇನಾಗವೇಲಿ ಗ್ರಾಮದ ಅರಣ್ಯ ಪ್ರದೇಶದ ಬಳಿ ಅಕ್ರಮವಾಗಿ ಜಿಲೆಟಿನ್ ಸಾಗಿಸುತ್ತಿದ್ದಾಗ ಏಕಾಏಕಿ ಸ್ಫೋಟಗೊಂಡು ಸ್ಥಳದಲ್ಲೇ 6 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಭೀಕರ ಜಿಲೆಟಿನ್ ಸ್ಫೋಟದಿಂದ ಸಾವನ್ನಪ್ಪಿದ 6 ಜನ ಕಾರ್ಮಿಕರ ಮೃತ ದೇಹಗಳು ಗುರುತುಹಿಡಿಯಲಾರದಷ್ಟು ನೂರು ಮೀಟರ್ ವರೆಗೆ ಸಿಡಿದು ಚೆಲ್ಲಾಪಿಲ್ಲಿಯಾಗಿವೆ.
ಅಲ್ಲದೆ ಈ ಸ್ಫೋಟದಲ್ಲಿ ಇನ್ನೂ ಮೂವರ ಸ್ಥಿತಿ ಗಂಭೀರವಾಗಿದೆ‌. ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದೆ. ಭ್ರಮರವಾಸಿನಿ ಕ್ರಷರ್ ನಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದ ಅರಣ್ಯಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ.
ಮೃತಪಟ್ಟವರನ್ನು ಕ್ರಷರ್ ಇಂಜಿನಿಯರ್ ಉಮಾಕಾಂತ್, ಕಂಪ್ಯೂಟರ್ ಆಪರೇಟರ್ ಗಂಗಾಧರ್, ವೇಯರ್ ಮುರುಳಿ, ವಾಚ್ ಮನ್ ಮಹೇಶ್ ಹಾಗೂ ಸ್ಥಳೀಯ ರಾಮು ಎಂದು ಗುರುತಿಸಲಾಗಿದೆ.
ಅಲ್ಲದೆ ಟಾಟಾಏಸ್ ಚಾಲಕ ರಿಯಾಜ್ ಗಂಭೀರವಾಗಿ ಗಾಯಗೊಂಡು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಅರಣ್ಯಪ್ರದೇಶದಲ್ಲಿ ಅಕ್ರಮವಾಗಿ ಅಡಗಿಸಿಟ್ಟಿದ್ದ ಜಿಲೆಟಿನ್ ಗಳನ್ನು(ಸ್ಫೋಟಕಗಳನ್ನು) ಹೊತ್ತು ತರುವಾಗ ಏಕಾಏಕಿ ಬ್ಲಾಸ್ಟ್ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಆರೋಗ್ಯ ಸಚಿವ ಹಾಗೂ ಸ್ಥಳೀಯ ಶಾಸಕರೂ ಆದ ಡಾ.ಕೆ.ಸುಧಾಕರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪೊಲೀಸರಿಂದ ಮಾಹಿತಿ ಕಲೆಹಾಕಿದ್ದಾರೆ.
KTVKANNADA ಚಿಕ್ಕಬಳ್ಳಾಪುರ

Add Comment