ಹೆರಿಗೆಗೂ ಮುನ್ನ ದೇಶಕ್ಕೆ ಕೊರೊನಾ ಟೆಸ್ಟಿಂಗ್ ಕಿಟ್ ಕೊಟ್ಟ ಗಟ್ಟಿಗಿತ್ತಿ

1 Star2 Stars3 Stars4 Stars5 Stars (1 votes, average: 3.00 out of 5)
Loading...

ಇದು ಇಡೀ ದೇಶಕ್ಕೆ ದೇಶವೇ ಖುಷಿ ಪಡೋ ಸುದ್ದಿ, ದೇಶಭಕ್ತಿ ಹೇಗೆಲ್ಲಾ ಪ್ರಕಟಗೊಳ್ಳುತ್ತೆ ಅಂತ ಓದಿ ಹೆಮ್ಮೆ ಪಡೋ ಸುದ್ದಿ. ಕೊರೋನಾ ವೈರಸ್ ದೇಶವನ್ನೇ ಅತಿ ಭಯಂಕರ ಸ್ಥಿತಿಯಲ್ಲಿ ಕಾಡುತ್ತಿರುವಾಗ ಪುಣೆಯ ವೈರಲಾಜಿಸ್ಟ್ ಒಬ್ಬರು, ಜೀವದ ಹಂಗು ತೊರೆದು ದೇಶಕ್ಕೆ ಈ ಅತ್ಯಗತ್ಯವಾಗಿ ಬೇಕಾಗಿರೋ ಕೊರೊನಾ ಟೆಸ್ಟಿಂಗ್ ಕಿಟ್ ತಯಾರಿಸಿದ್ದಾರೆ.

ಪುಣೆಯ ಮೈಲ್ಯಾಬ್ ಡಿಸ್ಕವರಿಯ ವೈರಾಣು ಶಾಸ್ತçಜ್ಞೆ ಮಿನಾಲ್ ಡಾಖವೆ ಭೋಸ್ಲೆ ಕೋವಿಡ್-೧೯ ಟೆಸ್ಟಿಂಗ್ ಕಿಟ್ ತಯಾರಿಸಿದ್ದಾರೆ. ಈ ಸಂಸ್ಥೆ ಇದೀಗ ಕಿಟ್ ತಯಾರಿಕೆ ಹಾಗೂ ಮಾರಾಟದ ಮಾನ್ಯತೆ ಪಡೆದ ದೇಶದ ಮೊದಲ ಸಂಸ್ಥೆಯಾಗಿದೆ. ಸಂಸ್ಥೆ ತಯಾರಿಸಿದ ಮೊದಲ ೧೫೦ ಕಿಟ್‌ಗಳನ್ನು ಮುಂಬೈ, ಪುಣೆ ಮತ್ತು ಬೆಂಗಳೂರಿಗೆ ಕಳುಹಿಸಲಾಗಿದೆ. ಸೋಮವಾರದ ಹೊತ್ತಿಗೆ ಮತ್ತಷ್ಟು ಕಿಟ್‌ಗಳು ರೆಡಿಯಾಗಲಿವೆ.

ಪೂರ್ಣ ಪ್ರಮಾಣದಲ್ಲಿ ಕಿಟ್ ಉತ್ಪಾದನೆಯಾದರೆ, ವಾರಕ್ಕೆ ಒಂದು ಲಕ್ಷ ಕಿಟ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಈ ಸಂಸ್ಥೆಗಿದೆ. ಅಂದ ಹಾಗೆ ಕೋವಿಡ್ ೧೯ ಟೆಸ್ಟ್ಗೆ ಕೇವಲ ೬ ವಾರದಲ್ಲಿ ಕಿಟ್ ಕಂಡುಹಿಡಿದ ಜಗತ್ತಿನ ಮೊದಲ ಸಂಸ್ಥೆ ಎಂಬ ಖ್ಯಾತಿಗೂ ಇದು ಪಾತ್ರವಾಗಿದೆ. ಸಂಸ್ಥೆಯ ಕಿಟ್‌ಗೆ ೧೨೦೦ ರೂಪಾಯಿ ಮೊತ್ತವಿದ್ದು ಒಂದು ಕಿಟ್‌ನಲ್ಲಿ ೧೦೦ ಟೆಸ್ಟ್ ಮಾಡಬಹುದಾಗಿದೆ. ವಿದೇಶದಿಂದ ತರಿಸುತ್ತಿರೋ ಕಿಟ್‌ಗಳಿಗೆ ಭಾರತ ೪-೬ ಸಾವಿರ ರೂಪಾಯಿಗಳನ್ನು ವೆಚ್ಚಮಾಡುತ್ತಿದೆ.

ಮೊದಲ ಕಿಟ್, ಮೊದಲ ಮಗು !
ಅಂದ ಹಾಗೆ ಈ ಕಿಟ್ ತಯಾರಿಸಿದ ತಂಡದ ಮುಖ್ಯಸ್ಥೆ ತುಂಬು ಗರ್ಭಿಣಿಯಾಗಿದ್ದರು. ಆರೋಗ್ಯದ ವಿಚಾರದಲ್ಲಿ ಮಧ್ಯೆ ಆಸ್ಪತ್ರೆಗೂ ದಾಖಲಾಗಿದ್ದರು. ಆದರೂ ದೇಶಕ್ಕಾಗಿ ಮತ್ತೆ ಸಂಶೋಧನೆಯಲ್ಲಿ ತೊಡಗಿಕೊಂಡ ಮಿನಾಲ್ ಹೆರಿಗೆಗೂ ಮುನ್ನವೇ ದೇಶ ನೂರು ಕಾಲ ನೆನಪಿಡೋ ಕಾಣಿಕೆ ನೀಡಿದ್ದಾರೆ. ಸಾವಿರಾರು ಜನರ ಪ್ರಾಣ ಉಳಿಸಿದ್ದಾರೆ. ಈ ಕಿಟ್‌ನಿಂದ ಕೇವಲ ಎರಡೂವರೆ ಗಂಟೆಗಳಲ್ಲಿ ರಿಸಲ್ಟ್ ಪಡೆಯಬಹುದಾಗಿದೆ.

ಅಚ್ಚರಿಯೆಂದರೆ, ಈ ಕಿಟ್ ತಯಾರಿಸಿ ಪರಿಶೀಲನೆಗಾಗಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ ಹಾಗೂ ವಾಣಿಜ್ಯ ಬಳಕೆಗಾಗಿ ಭಾರತದ ಆಹಾರ ಮತ್ತು ಔಷಧ ಸುರಕ್ಷಾ ಮಂಡಳಿಗೆ ಕಳುಹಿಸಿದ ಕೆಲವೇ ಗಂಟೆಗಳಲ್ಲಿ ಅವರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾದರು. ಇದೀಗ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಅಮ್ಮ-ಮಗಳು ಚೆನ್ನಾಗಿರಲಿ ಅಂತ ಹಾರೈಸೋಣ.

Add Comment