ನಾಳೆ ದಕ್ಷಿಣ ಕನ್ನಡ ಓಪನ್ ಆಗಲು ಇವರೇ ಕಾರಣ

1 Star2 Stars3 Stars4 Stars5 Stars (No Ratings Yet)
Loading...

ನಾಳೆ ದಕ್ಷಿಣ ಕನ್ನಡ ಓಪನ್ ಆಗಲು ಇವರೇ ಕಾರಣ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆ ಪ್ರತಿನಿಧಿಸೋ ಮಂಗಳೂರು ಸಂಸದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೆಲಸ ಮಾಡಲ್ಲ ಅನ್ನೋ ಆರೋಪ ಇದೆ. ಮಂಗಳೂರು ಪಂಪ್‍ವೆಲ್ ಕಾಮಗಾರಿಯಂತೂ ಸಂಸದರ ತಲೆಬಿಸಿಗೆ ಕಾರಣವಾಗಿತ್ತು. ಸಂಸದರು ಮಾಡೋ ಎಲ್ಲಾ ಕೆಲಸಗಳೂ ಪಂಪ್`ವೆಲ್’ನ ಮಣ್ಣುಪಾಲಾಗುತ್ತಿದ್ದವು. ಆದರೆ, ಅದೆಲ್ಲವನ್ನೂ ಮರೆಸುವಂತಹ ಕೆಲಸವನ್ನು ಈಗ ಕಟೀಲ್ ಮಾಡಿದ್ದಾರೆ. ಕೊರೊನಾ ಪರಿಸ್ಥಿತಿ ನಿಭಾಯಿಸಲು ಜೋಡೆತ್ತಿನಂತೆ ದುಡಿದಿದ್ದಾರೆ. ಮತ್ತೊಂದು ಜೋಡೆತ್ತು ಯಾರು ಅಂತೀರಾ ? ಅವರೇ ಕೋಟಾ ಶ್ರೀನಿವಾಸ ಪೂಜಾರಿ. ಹಾಗಿದ್ದರೆ ಅವರಿಬ್ಬರು ಮಾಡಿದ ಕೆಲಸವೇನು ?

ಮಂಗಳೂರಿನಲ್ಲಿ ಆಗಷ್ಟೇ ಮೊದಲ ಕೊರೋನಾ ಪ್ರಕರಣ ದಾಖಲಾಗಿತ್ತು. ತಕ್ಷಣವೇ ಮಂಗಳೂರಿಗೆ ಧಾವಿಸಿ ಬಂದ ಕಟೀಲ್ ಮತ್ತು ಪೂಜಾರಿ, ಮುಂದೇನು ಮಾಡಬೇಕು ಎಂದು ಚರ್ಚೆ ನಡೆಸಿದರು. ರಾಜ್ಯ ಸರಕಾರದಿಂದ ಆಗಬೇಕಾದ ಕೆಲಸಗಳನ್ನು ಪೂಜಾರಿ ನಿಭಾಯಿಸಿದ್ರೆ, ಕೇಂದ್ರದಿಂದ ಆಗಬೇಕಾದ್ದನ್ನು ಕಟೀಲ್ ನಿಭಾಯಿಸಿದ್ರು. ದಕ್ಷಿಣ ಕನ್ನಡ ಜಿಲ್ಲೆಯ ಅಧಿಕಾರಿಗಳು ಎಲ್ಲಾ ತಾಲೂಕಿನ ಅಧಿಕಾರಿಗಳು, ರಾಜಕಾರಣಿಗಳು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ಮೀಟಿಂಗ್ ಮೇಲೆ ಮೀಟಿಂಗ್ ಮಾಡಿದ್ರು. ತೆಗೆದುಕೊಳ್ಳಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಂಡ್ರು.

ಯಾವಾಗ ಪರಿಸ್ಥಿತಿ ಕೈಮೀರ ತೊಡಗಿತೋ, ತಕ್ಷಣವೇ ಮೂರು ದಿನ ಕಂಪ್ಲೀಟ್ ಲಾಕ್‍ಡೌನ್‍ಗೆ ಆದೇಶಿಸಿದ್ರು. ಪೂಜಾರಿಯವರು ನೆರೆ ಜಿಲ್ಲೆಯವರಾದರೂ, ಮಂಗಳೂರಿನಲ್ಲೇ ಉಳಿದುಕೊಂಡು ಎಲ್ಲವನ್ನೂ ನಿಯಂತ್ರಿಸಿದ್ರು. ನಿರಾಶ್ರಿತರಿಗೆ, ನಿರ್ಗತಿಕರಿಗೆ ಆಹಾರದ ವ್ಯವಸ್ಥೆ ಮಾಡಿದ್ರು. ಸಂಸದರ ಕಚೇರಿಯಲ್ಲಿ ವಾರ್ ರೂಂ ಕೂಡಾ ಓಪನ್ ಆಯಿತು. ಇದರಲ್ಲೇನು ವಿಶೇಷ, ಈ ಕೆಲಸ ಎಲ್ಲಾ ಜಿಲ್ಲೆಗಳಲ್ಲೂ ಆಗಿದ್ಯಲ್ಲ ಅಂತ ಪ್ರಶ್ನಿಸಬೇಡಿ. ಇನ್ನೊಂದು ವಿಚಾರ ಮೊದಲು ತಿಳ್ಕೊಳ್ಳಿ.

ಮಂಗಳೂರಿಗೂ ಕೊರೋನಾ ಲ್ಯಾಬ್!

ಇದು ಮಂಗಳೂರಿಗೆ ಮೋದಿ ಸರಕಾರ ಕೊಟ್ಟಿರೋ ಗಿಫ್ಟ್. ಸಂಸದ ನಳಿನ್ ಕಟೀಲ್ ಪರಿಶ್ರಮದಿಂದಾಗಿ ಮಂಗಳೂರಿಗೆ ಕೊರೋನಾ ಟೆಸ್ಟಿಂಗ್ ಲ್ಯಾಬನ್ನು ಕೇಂದ್ರ ಸರಕಾರ ಕೊಟ್ಟಿದೆ. ಬೆಂಗಳೂರು, ಕಲಬುರಗಿ ಬಳಿಕ ರಾಜ್ಯದಲ್ಲಿ ಓಪನ್ ಆಗಿರೋ ಮೂರನೇ ಲ್ಯಾಬ್ ಮಂಗಳೂರಿನದ್ದು. ಜಿಲ್ಲೆಗೆ ಲ್ಯಾಬ್ ಪಡೆದುಕೊಳ್ಳುವಲ್ಲಿ ಕೇಂದ್ರದ ಸಚಿವರ ಮನವೊಲಿಸಿದ್ದು ಕಟೀಲ್ ಸಾಧನೆ. ಈ ಲ್ಯಾಬ್ ಮಂಗಳವಾರ ಅಂದರೆ ಇಂದು ಮಧ್ಯರಾತ್ರಿಯಿಂದಲೇ ಕಾರ್ಯಾರಂಭಿಸಲಿದೆ.

ಈ ಲ್ಯಾಬ್ ಓಪನ್ ಆಗಿರೋ ಕಾರಣಕ್ಕೆ ನಾಳೆಯಿಂದ ದಕ್ಷಿಣ ಕನ್ನಡದಲ್ಲಿ ಲಾಕ್‍ಡೌನ್ ಸಡಿಲಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡಿ ಅಗತ್ಯ ದಿನಸಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಈ ಲ್ಯಾಬ್ ಬಾರದೇ ಹೋಗಿದ್ದರೆ, ನಾಳೆಯೂ ಜಿಲ್ಲೆ ಬಂದ್ ಆಗ್ತಿತ್ತು. ಅಷ್ಟರ ಮಟ್ಟಿಗೆ ಜಿಲ್ಲೆಯ ಜನ ಈ ಇಬ್ಬರಿಂದಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಇಲ್ಲದಿದ್ದರೆ ಆರಂಭದಲ್ಲೇ ಅಬ್ಬರಿಸಿದ ಕೊರೋನಾ ಇಷ್ಟೊತ್ತಿಗಾಗಲೇ ಮಂಗಳೂರಿನಲ್ಲಿ ಮಾರಣ ಹೋಮ ನಡೆಸಿಯಾಗ್ತಿತ್ತು. ಕೊರೋನಾ ಪರಿಸ್ಥಿತಿ ನಿಭಾಯಿಸಲು ಜೋಡೆತ್ತಿನಂತೆ ಕೆಲಸ ಮಾಡ್ತಿರೋ ಇವರಿಗೆ ಜನರ ಬೆಂಬಲವೂ ಬೇಕಾಗಿದೆ, ಪಕ್ಷಾತೀತವಾಗಿ.

Add Comment