ತಮ್ಮ ವಿರುದ್ಧ ಮಾನಹಾನಿ ಸುದ್ದಿ‌ ಪ್ರಸಾರ ಮಾಡದಂತೆ .ಮಾಧ್ಯಮಗಳಿಗೆ ನಿರ್ಬಂಧಿಸಲು ಕೋರಿ 6 ಸಚಿವರಿಂದ ಕೋರ್ಟ್ ಗೆ ಅರ್ಜಿ

ಉತ್ತರಕರ್ನಾಟಕ ಮೂಲದ ಸುಂದರ ಯುವತಿಯೊಂದಿಗೆ ರಾಸಲೀಲೆ ನಡೆಸಿದ ಸಿಡಿ ವೈರಲ್ ಆದ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಕಳೆದುಕೊಂಡ ರಮೇಶ್ ಜಾರಕಿಹೊಳಿ ಅವರ ಪ್ರಕರಣದಿಂದ ವಲಸೆ ಬಿಜೆಪಿ ಸಚಿವರು ಎಚ್ಚೆತ್ತುಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ವೀಡಿಯೋ ಅಥವಾ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲು ಆದೇಶಿಸುವಂತೆ ಇಂದು 6 ಬಿಜೆಪಿ ವಲಸೆ ಸಚಿವರು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ “ಹಿಂದಿನ ಸಮ್ಮಿಶ್ರ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಲ್ಲಾ 15 ವಲಸೆ ಬಿಜೆಪಿ ಸಚಿವರು,ಶಾಸಕರನ್ನು ಇದೀಗ ರಾಜಕೀಯವಾಗಿ ತುಳಿಯಲು ಷಡ್ಯಂತ್ರ ರೂಪಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಆದ್ದರಿಂದ ಈಗ ಸಿಡಿ ಕೇಸಿನಲ್ಲಿ ಸಚಿವ ಸ್ಥಾನ ಕಳೆದುಕೊಂಡ ರಮೇಶ್ ಜಾರಕಿಹೊಳಿ ಅವರಂತೆ ನಾವ್ಯಾರೂ ನಮ್ಮ 20, 25 ವರ್ಷಗಳ ರಾಜಕೀಯ ಶಕ್ತಿಯನ್ನು ಕೆಲವೇ ಕ್ಷಣಗಳ ವೀಡಿಯೊ ಅಥವಾ ಸುದ್ದಿ ಮೂಲಕ ಕಳೆದುಕೊಳ್ಳುವುದು ಬೇಡ ಎಂದು ಮುಂಜಾಗ್ರತೆ ವಹಿಸಿ ಕೋರ್ಟ್ ಮೊರೆ ಹೋಗಿದ್ದೇವೆ.
ಹಾಗೆಂದು ನಾವ್ಯಾರೂ ಇಂತಹ ಅಶ್ಲೀಲ ಸಿಡಿ ಪ್ರಕರಣಗಳಲ್ಲಿ ಸಿಲುಕುವ ಆತಂಕವಿಲ್ಲ, ಆದರೆ ನಮ್ಮನ್ನು ಯಾವುದಾದರೂ ಭ್ರಷ್ಟಾಚಾರ ಅಥವಾ ಅಕ್ರಮ ನಡೆಸಿದ್ದಾರೆಂದು ಎಂದು ಸುಳ್ಳು ಮಾಹಿತಿ ನೀಡುವ ಸಿಡಿ ಅಥವಾ ಸುದ್ದಿಯನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಿ ನಾವು ಹೋರಾಡಿ ಪಡೆದಿರುವ ಸಚಿವ ಸ್ಥಾನದಿಂದ ಕೆಳಗಿಳಿಸುವ ದೊಡ್ಡ ರಹಸ್ಯವಾದ ಷಡ್ಯಂತ್ರ ನಡೆಯುತ್ತಿದೆ ಎಂಬ ಮಾಹಿತಿ ಪಡೆದಿದ್ದೇವೆ. ಆದ್ದರಿಂದ ಇಂದು ನಾನು ಮತ್ತು ಆರೋಗ್ಯ ಸಚಿವರಾದ ಡಾ.ಕೆ.ಸುಧಾಕರ್,ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು,ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ ಸೇರಿ ಮಾನಹಾನಿಕರ ವೀಡಿಯೋ ಅಥವಾ ಸುದ್ದಿ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಲು ಆದೇಶಿಸಬೇಕೆಂದು ಕೋರಿ ಕೋರ್ಟ್ ಮೊರೆ ಹೋಗಿದ್ದೇವೆ‌. ನಮ್ಮ ಈ 6 ಸಚಿವರ ಜೊತೆ ಸಚಿವರಾದ ಕೆ‌.ಗೋಪಾಲಯ್ಯ,ಎಂ.ಟಿ‌.ಬಿ.ನಾಗರಾಜ್ ಸೇರಿದಂತೆ ಇತರೆ ಮೂವರು ಸಚಿವರೂ ಮಾನಹಾನಿಕರ ಸುದ್ದಿ ಅಥವಾ ವೀಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ಹೇರಬೇಕೆಂದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಿದ್ದಾರೆ” ಎಂದು ಹೇಳಿದರು.
KTVKANNADA ಬೆಂಗಳೂರು

Add Comment