ಬೆಂಗಳೂರು: ಗಬ್ಬು ನಾರುತ್ತಿದೆ ಹೆಗ್ಗನಹಳ್ಳಿ ಹೆಬ್ಬಾಗಿಲು

ಬೆಂಗಳೂರಿನ ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿ ಪಕ್ಕ ಕಸದ ಕೊಂಪೆಯ ರಾಶಿ ಮತ್ತು ರಾಜಾರೋಷವಾಗಿ ದನದ ಮಾಂಸ ಮಾರಾಟ‌ ಮಾಡಲಾಗುತ್ತಿದೆ.
ಹೌದು, ಇದು ಇಂತದ್ದೊಂದು ಅಸಲಿ ಕರಾಳ ಸತ್ಯ ಹೆಗ್ಗನಹಳ್ಳಿ, ಪೀಣ್ಯ 2ನೇ ಹಂತ ಪ್ರದೇಶಗಳ ಜನರಿಗೆ ಬಹಳ ವರ್ಷಗಳಿಂದ ಗೊತ್ತಿದೆ.
ಈ ಮೊದಲು ಹಿಂದಿನ ದಾಸರಹಳ್ಳಿ ನಗರಸಭೆಗೆ ಸೇರಿದ್ದ ಹೆಗ್ಗನಹಳ್ಳಿ ವಾರ್ಡ್ ಬಳಿಕ ಬಿಬಿಎಂಪಿ ವ್ಯಾಪ್ತಿಗೆ ಸೇರಿತು. ಇಷ್ಟಾದರೂ ಹೆಗ್ಗನಹಳ್ಳಿ ವಾರ್ಡ್ ವ್ಯಾಪ್ತಿಯಲ್ಲಿ ಅನೇಕ ಮೂಲಭೂತ ಸೌಕರ್ಯಗಳು ಸಮರ್ಪಕವಾಗಿ ಇಲ್ಲವೇ ಇಲ್ಲ! ಕಾರಣ ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿ ಪಕ್ಕದಲ್ಲೇ ಇರುವ ಖಾಲಿ ಮೈದಾನದಲ್ಲಿ ರಾಶಿ ರಾಶಿ ಕಸ ಕೊಳೆತು ಗಬ್ಬು ನಾರುತ್ತಾ ಅನಾರೋಗ್ಯಕರ ವಾತಾವರಣ ಸೃಷ್ಟಿಸಿದೆ. ಜೊತೆಗೆ ಯಶವಂತಪುರ ಮೂಲದ ಮೂವರು ಮಾಂಸದ ವ್ಯಾಪಾರಿಗಳು ಇಲ್ಲಿ ಅಕ್ರಮವಾಗಿ ದನದ ಮಾಂಸವನ್ನು ಮಾರಾಟ ಮಾಡುವ ದಂಗೆಯನ್ನು ರಾಜಾರೋಷವಾಗಿ ನಡೆಸುತ್ತಿದ್ದಾರೆ. ಒಂದು ದನದ ಮಾಂಸ ಮಾರಾಟ ದಂಧೆ ಕೊರೊನಾ ವೈರಸ್ ಸೋಂಕು ಮತ್ತು ಗೋಹತ್ಯೆ ನಿಷೇಧ ಕಾನೂನು ಜಾರಿಯಾದ ಕಾಲದಲ್ಲೂ ಎಗ್ಗಿಲ್ಲದೆ ಜೋರಾಗಿ ನಡೆಯುತ್ತಿದೆ! ಈ ಬಗ್ಗೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಮತ್ತು ಸ್ಥಳೀಯ ರಾಜಗೋಪಾಲನಗರ ಠಾಣೆ ಪೊಲೀಸರಿಗೆ ಅಕ್ರಮ ದನದ ಮಾಂಸ ಮಾರಾಟ ದಂಧೆ ಬಗ್ಗೆ ಚೆನ್ನಾಗಿ ಗೊತ್ತಿದ್ದರೂ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ.
ಕೊರೊನಾ ಸೋಂಕಿನ ಕಷ್ಟಕಾಲದಲ್ಲೂ ಹೆಗ್ಗನಹಳ್ಳಿ ವಾರ್ಡ್ ಬಿಬಿಎಂಪಿ ಕಚೇರಿ ಬಳಿ 3 ಮಾಂಸದಂಗಡಿಗಳು ದುಬಾರಿ ಬೆಲೆಗೆ ಮಾಂಸ ಮಾರಾಟ ಮಾಡುತ್ತಿದ್ದ ಬಗ್ಗೆ ಪ್ರಶ್ನಿಸಿದ ಇಮ್ರಾನ್ ಎಂಬ ಯುವಕನಿಗೆ ಇಲ್ಲಿನ ಮಾಂಸದ ವ್ಯಾಪಾರಿಗಳು ಯದ್ವಾತದ್ವಾ ಹೊಡೆದು ಗಾಯಗೊಳಿಸಿದ್ದರೂ ಪೊಲೀಸರು ಆ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ!
ಇದರಿಂದ ಇಲ್ಲಿನ ಸ್ಥಳೀಯ ಜನರಿಗೆ ಮತ್ತು ವ್ಯಾಪಾರಸ್ಥರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಹೆಗ್ಗನಹಳ್ಳಿ ಬಿಬಿಎಂಪಿ ಕಚೇರಿ ಎದುರಿನ ವರ್ತಕ ನಾಗಭೂಷಣ್ ಪತ್ರಿಕೆಗೆ ತಿಳಿಸಿದರು.
ಅಲ್ಲದೆ ಇಲ್ಲಿ ಒಳಚರಂಡಿ ವ್ಯವಸ್ಥೆಯೇ ಸಮರ್ಪಕವಾಗಿ ಇಲ್ಲ, ಪರಿಣಾಮ ಮಳೆಗಾಲದ ಸಮಯದಲ್ಲಿ ಸೊಳ್ಳೆ,ನೊಣ ಕಾಟ ವಿಪರೀತವಾಗಿರುತ್ತದೆ.
ಈ ಎಲ್ಲಾ ಸಮಸ್ಯೆಗಳ ಬಗ್ಗೆ ಸ್ಥಳೀಯ ನಿಕಟಪೂರ್ವ ಕಾರ್ಪೊರೇಟರ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಮತ್ತು ಇಲಾಖೆಗೆ ಯಾವುದೇ ದೂರು ನೀಡಿಲ್ಲ ಮತ್ತು ಸ್ಥಳೀಯ ದಾಸರಹಳ್ಳಿ ಶಾಸಕರೂ ಸಹ ತಮ್ಮ 3 ವರ್ಷಗಳ ಅಧಿಕಾರದ ವೇಳೆ ಈ ಬಗ್ಗೆ ಗಮನಹರಿಸಿಲ್ಲ,ಇದರಿಂದ ಸ್ಥಳೀಯ ಜನರು ಮತ್ತು ವರ್ತಕರು ಬಹಳ ಅನಾರೋಗ್ಯದ ವಾತಾವರಣದಲ್ಲೇ ಇರಬೇಕಾಗಿದೆ ಎಂದು ವರ್ತಕ ನಾಗಭೂಷಣ್ ಅವರು ಇಲ್ಲಿನ ಜನರ ಸಂಕಷ್ಟಗಳ ಬಗ್ಗೆ ಪತ್ರಿಕೆಗೆ ದೂರು ನೀಡಿದರು.‌
ಬಿಬಿಎಂಪಿ ಚುನಾವಣೆಯಲ್ಲಿ ಈ ಎಲ್ಲಾ ಸಮಸ್ಯೆಗಳ ಬಗ್ಗೆ ಗಮನಹರಿಸದ ಸ್ಥಳೀಯ ಜನಪ್ರತಿನಿಧಿಗಳ ಬಗ್ಗೆ ಇಲ್ಲಿನ ಜನರು ಕೋಪತಾಪ ಪ್ರದರ್ಶಿಸುತ್ತಿದ್ದಾರೆ. ಆದರೆ ಬಿಬಿಎಂಪಿಗೆ ಮತ್ತು ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಮಾತ್ರ ಹೆಗ್ಗನಹಳ್ಳಿ ವಾರ್ಡ್ ಕಚೇರಿ ಬಳಿಯ ಅನಾರೋಗ್ಯಕರ ವಾತಾವರಣ ಮಾತ್ರ ಕಾಣಿಸುತ್ತಿಲ್ಲ ಎಂದು ಸ್ಥಳೀಯರು ಸಿಡಿಮಿಡಿಗೊಳ್ಳುತ್ತಿದ್ದಾರೆ.
ಈ ಎಲ್ಲಾ ಸಮಸ್ಯೆಗಳ ಬಗ್ಗೆ ಇನ್ನಾದರೂ ಬಿಬಿಎಂಪಿ ಮತ್ತು ಸ್ಥಳೀಯ ಶಾಸಕರು ಗಮನಹರಿಸಲಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಅಶೋಕ ಡಿ.ಎಂ
KTVKANNADA
ಬೆಂಗಳೂರು

Add Comment