ದೇವರು ಬರಲಿಲ್ಲ, ಭಕ್ತರು ಬಿಡಲಿಲ್ಲ, ಪುತ್ತೂರಲ್ಲಿ ನಡೆದಿದ್ದೇನು?

1 Star2 Stars3 Stars4 Stars5 Stars (1 votes, average: 1.00 out of 5)
Loading...

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಈಗ ಜಾತ್ರೋತ್ಸವ. ಕೊರೋನಾ ಒಂದು ಬಾರದೇ ಹೋಗಿದ್ದರೆ, ಪುತ್ತೂರಿನ ಸಂಭ್ರಮವನ್ನು ನೋಡಲು ಎರಡೂ ಕಣ್ಣು ಸಾಲುತ್ತಿರಲಿಲ್ಲ. ಹತ್ತೂರಿನ ಒಡೆಯನೆಂದೇ ಖ್ಯಾತಿ ಪಡೆದಿರೋ ಇಲ್ಲಿ ಮಹತೋಭಾರ ಮಹಾಲಿಂಗೇಶ್ವರನ ದರ್ಶನ ಪಡೆಯಲು ಪಕ್ಕದ ರಾಜ್ಯಗಳಿಂದಲೂ ಜನ ಬರುತ್ತಾರೆ. 10 ದಿನ ಒಂದೊಂದು ಅಲಂಕಾರದಲ್ಲಿ ದರ್ಶನ ನೀಡೋ ಮಹಾಲಿಂಗೇಶ್ವರನ ವೈಭವ ನೋಡುವುದು ಜನ್ಮಾಂತರದ ಪುಣ್ಯ. ಪುತ್ತೂರಿನಲ್ಲಿ ಹುಟ್ಟಿದವರು, ಅಮೆರಿಕಕ್ಕೇ ಹೋಗಲಿ, ಆಸ್ಟ್ರೇಲಿಯಕ್ಕೇ ಹೋಗಲಿ, ಅಂಡಮಾನ್‍ನಲ್ಲೇ ಇರಲಿ, ಮಹಾಲಿಂಗೇಶ್ವರ ಜಾತ್ರೆಗೆ ಬಾರದೇ ಇರುವುದಿಲ್ಲ.

ಅಂತಹ ಸಂಭ್ರಮದ ವಾತಾವರಣ ಈಗ ಪುತ್ತೂರಿನಲ್ಲಿಲ್ಲ. ಭಕ್ತಿಯ ಪರಾಕಾಷ್ಟೆಯಲ್ಲಿ ಮಿಂದೇಳುತ್ತಿದ್ದ ಮಹಾಲಿಂಗೇಶ್ವರನ ಭಕ್ತರು ಈ ಬಾರಿ ಮನೆಯಲ್ಲೇ ಕಣ್ಣೀರು ಹಾಕುತ್ತಿದ್ದಾರೆ. ಪುತ್ತೂರಿನಲ್ಲಿ ಜಾತ್ರೆಯೇನೋ ನಡೀತಿದೆ. ಅದು ದೇಗುಲದ ಒಳಗೆ ಮಾತ್ರ. ಸಂಪ್ರದಾಯಕ್ಕೆ ಚ್ಯುತಿಯಾಗದಂತೆ ಜಾತ್ರೆಯೇನೋ ನಡೀತಿದೆ. ಆದರೆ, ಭಕ್ತರ ಪಾಲ್ಗೊಳ್ಳುವಿಕೆಯಿಲ್ಲ. ಕಣ್ಣು ಕೋರೈಸೋ ದೀಪಗಳ ಬೆಳಕಿಲ್ಲ. ಕಪ್ಪು ಆಗಸದಲ್ಲಿ ಚಿತ್ತಾರ ಬರೆಯೋ ಸಿಡಿಮದ್ದಿಲ್ಲ. ಮೇಲಾಗಿ ದೇವರು ಜನರ ಬಳಿಗೆ ಬರಲಿಲ್ಲ. ಆದರೆ ಭಕ್ತರು ಬಿಡಬೇಕಲ್ಲ.

ಹೌದು ಪುತ್ತೂರಿನಲ್ಲಿ ಯಾರೂ ಊಹಿಸದ ಬೆಳವಣಿಗೆಗಳು ನಡೆಯುತ್ತಿವೆ. ಪುತ್ತೂರು ಜಾತ್ರೆ ವೇಳೆ ಪಟ್ಟಣ ಸವಾರಿ ನಡೆಯುತ್ತದೆ. ಅಂದರೆ ದೇವರು ಪ್ರತಿ ದಿನವೂ ಪುತ್ತೂರಿನ ದಶದಿಕ್ಕುಗಳಿಗೆ ಸವಾರಿ ಹೊರಡುತ್ತಾರೆ. ಭಕ್ತರು ಪ್ರೀತಿಯಿಂದ ಕಟ್ಟಿಸಿದ ಕಟ್ಟೆಗಳಲ್ಲಿ ಕುಳಿತು ಪೂಜೆ ಪಡೆಯುತ್ತಾರೆ. ದಾರಿಯಲ್ಲಿ ಭಕ್ತರು ಕರೆಯೋ ಪ್ರತಿಮನೆಗೂ ದೇವರು ಹೋಗುತ್ತಾರೆ, ಪಂಚಕಜ್ಜಾಯ, ಆರತಿ ಸ್ವೀಕರಿಸುತ್ತಾರೆ. ಪುತ್ತೂರು ಜಾತ್ರೆಯ ಸೊಬಗೇ ಅಲ್ಲಿನ ಪಟ್ಟಣ ಸವಾರಿ. ದೇವರು ಬರುವ ಕಡೆಯಲ್ಲೆಲ್ಲಾ ಹಬ್ಬದ ವಾತಾವರಣ. ತಳಿರು ತೋರಣ, ಕೇಸರಿ ಬಾವುಟಗಳ ಸಿಂಗಾರ. ದೇವರೊಂದಿಗೆ ಹೋಗುವ ಸಾವಿರ ಸಾವಿರ ಜನರಿಗೂ ಅಲ್ಲಲ್ಲಿ ಪಾನೀಯ, ಲಘು ಉಪಹಾರ, ಉಳ್ಳವರ ಮನೆಗಳಲ್ಲಿ ಊಟೋಪಚಾರ. ಕನಿಷ್ಟವೆಂದರೂ ಮಜ್ಜಿಗೆ ಪಾನಕ, ಅವಲಕ್ಕಿ. ರಾತ್ರಿ 8 ಗಂಟೆಗೆಲ್ಲಾ ಸವಾರಿ ಹೊರಡುವ ಮಹಾಲಿಂಗೇಶ್ವರ, ಅಂದ ಚಂದದೊಂದಿಗೆ ಊರೆಲ್ಲಾ ಸುತಾಡಿಕೊಂಢು ವಾಪಸ್ ದೇವಸ್ಥಾನಕ್ಕೆ ಬರುವ ವೇಳೆಗೆ ಮಧ್ಯರಾತ್ರಿ ಕಳೆದು ಮೂರೋ ನಾಲ್ಕೋ ಗಂಟೆಯಾಗಿರುತ್ತದೆ. ದೇವರ ಹಿಂದೆ ಹೋದವರಲ್ಲಿ ದಣಿವಿನ ಲಕ್ಷಣವೂ ಇರುವುದಿಲ್ಲ. ಅದು ಭಕ್ತರ ಪ್ರೀತಿ, ದೇವರ ಶಕ್ತಿಯ ಸಂಯೋಗದ ಸಂಕೇತ.

(ಚಿತ್ರ : ಮಹಾಲಿಂಗೇಶ್ವರನಿಗಾಗಿ ಬನ್ನೂರಿನಲ್ಲಿ ಪೂಜೆ)

ಕೊರೋನಾದಿಂದಾಗಿ ಈ ಬಾರಿ ದೇವರು ಸವಾರಿಗೆ ಬರಲಿಲ್ಲ. ಆದರೆ ಭಕ್ತರು ಬಿಡಲಿಲ್ಲ. ಪಾಮರನಿಂದ ಹಿಡಿದು ಮುತ್ತಪ್ಪ ರೈವರೆಗೆ ಮಹಾಲಿಂಗೇಶ್ವರನೆಂದರೆ ಮನೆಯ ನೆಂಟನಂತಹ ಪ್ರೀತಿ. ದೇವರು ಸವಾರಿಗೆ ಅಂತ ಮನೆಮನೆಗೆ ಬರದಿದ್ದರೇನಂತೆ. ಭಕ್ತರು ತಮ್ಮ ಮಾನಸ ಲೋಕದಲ್ಲೇ ಮಹಾಲಿಂಗೇಶ್ವರನನ್ನು ಬರಮಾಡಿಕೊಳ್ತಿದ್ದಾರೆ. ಪುತ್ತೂರಿನ ಹಲವು ರಸ್ತೆಗಳಲ್ಲಿ ದೇವರು ಹೋಗುವ ದಿನದಂದು ದೇವರು ಬಾರದೇ ಇದ್ದರೂ ದೀಪ ಹಚ್ಚಿದ್ದಾರೆ. ಸಂಪ್ರದಾಯ ಪಾಲಿಸಿ, ತುಳಸಿಕಟ್ಟೆಯ ಬಳಿಯೇ ಹಣ್ಣುಕಾಯಿ ಇಟ್ಟು ಆರತಿ ಬೆಳಗಿ, ಮಾಹಾಲಿಂಗೇಶ್ವರನ ಕೃಪೆ ಬೇಡುತ್ತಿದ್ದಾರೆ.

ಇದಕ್ಕೇ ಅಲ್ಲವೇ ಭಕ್ತಿ ಎನ್ನುವುದು. ಈ  ದೈವ-ಭಕ್ತನ ಸಂಬಂಧ ಬಹುಶ: ಬೇರೆ ಯಾವ ಊರಲ್ಲೂ ಸಿಗದು. 10 ದಿನಗಳ ಕಾಲ ಮನೆಯದ್ದೇ ಹಬ್ಬವೆಂಬಂತೆ ದೇವರ ಜಾತ್ರೆಯನ್ನು ಸಂಭ್ರಮಿಸುವ ಭಕ್ತರು ಮಹಾಲಿಂಗೇಶ್ವರನಿಗಲ್ಲದೆ ಬೇರೆ ಯಾವ ದೇವರಿಗೂ ಸಿಗಲು ಸಾಧ್ಯವಿಲ್ಲ. ಹಾಗೇ ಭಕ್ತರು ಕರೆದೆಡೆ ಬರುವ ಬೇರೆ ಮಹಾಲಿಂಗೇಶ್ವರ ಪುತ್ತೂರಿನವರಿಗಲ್ಲದೆ ಬೇರೆ ಯಾರಿಗೂ ಸಿಗಲು ಸಾಧ್ಯವಿಲ್ಲ.

Add Comment