ಮಾತಂದ್ರೆ ಯಡಿಯೂರಪ್ಪ – ಸಿಎಂ ಮಾಸ್ಟರ್ ಸ್ಟ್ರೋಕ್ ಗೆ ಕಾಂಗ್ರೆಸ್ ಶೇಕ್ ಶೇಕ್

1 Star2 Stars3 Stars4 Stars5 Stars (No Ratings Yet)
Loading...

ಡಿಕೆಶಿವಕುಮಾರ್ ಅಧ್ಯಕ್ಷರಾದ ಬಳಿಕ ಹುಮ್ಮಸ್ಸು ಪಡೆದುಕೊಂಡಿರುವ ಕಾಂಗ್ರೆಸ್ ಗೆ ಸಿಎಂ ಯಡಿಯೂರಪ್ಪ ಭರ್ಜರಿ ಶಾಕ್ ನೀಡಿದ್ದಾರೆ. ಒಂದೇ ಏಟಿಗೆ, ಪಕ್ಷದೊಳಗಿನ ಭಿನ್ನಮತೀಯರನ್ನು, ಅವಕಾಶಕ್ಕಾಗಿ ಎದುರು ನೋಡುತ್ತಿದ್ದ ಕಾಂಗ್ರೆಸ್ ನಾಯಕರನ್ನು ಅಚ್ಚರಿಗೆ ತಳ್ಳಿದ್ದಾರೆ. ಅಷ್ಟೇ ಅಲ್ಲ, ಒಳಗೊಳಗೇ ಎರಡೂ ಪಾಳಯದವರು ನಡುಗುವಂತೆ ಮಾಡಿದ್ದಾರೆ.

ದಿಢೀರ್ ಬೆಳವಣಿಗೆಯೊಂದರಲ್ಲಿ, ಸರಕಾರ ಸ್ಥಾಪಿಸಲು ಕಾರಣವಾದ ರಮೇಶ್ ಜಾರಕಿಹೊಳಿಗೆ ದೊಡ್ಡ ಹುದ್ದೆಯೊಂದನ್ನು ಸಿಎಮ್ ಯಡಿಯೂರಪ್ಪ ನೀಡಿದ್ದಾರೆ. ಯಾರೂ ಊಹಿಸಿರದ ಸಂಧರ್ಭದಲ್ಲಿ ಜಾರಕಿಹೊಳಿಗೆ ತಾವು ಹಿಂದೆ ಕೊಟ್ಟ ಮಾತಿನಂತೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಪಟ್ಟಾಭಿಷೇಕ ಮಾಡಿದ್ದಾರೆ. ಅಲ್ಲದೆ, ಮತ್ತೊಬ್ಬ ಸಚಿವ ಕೆ.ಗೋಪಾಲಯ್ಯ ಅವರಿಗೆ ಹಾಸನದ ಉಸ್ತುವಾರಿ ನೀಡಿದ್ದಾರೆ. ರೇವಣ್ಣ ಪಾಳೇಪಟ್ಟಿನಲ್ಲಿ ಗೌಡರ ಗರಡಿಯಲ್ಲೇ ಬೆಳೆದಿರೋ ಗೋಪಾಲಯ್ಯರನ್ನೇ ಯುದ್ಧಕ್ಕೆ ಕಳುಹಿಸಿದ್ದಾರೆ.

ಆದರೆ, ಬೆಳಗಾವಿ ಜಿಲ್ಲಾ ರಾಜಕಾರಣದ ಕುಸ್ತಿ ನೋಡಿದವರಿಗೆ, ರಮೇಶ್ ಆಯ್ಕೆ ಅಚ್ಚರಿ ಜೊತೆ ಶಾಕ್ ಗು ಕಾರಣವಾಗಿದೆ. ಡಿಸಿಎಂ ಸವದಿ ಸೇರಿದಂತೆ, ಜಿಲ್ಲೆಯ ರಾಜಕಾರಣದಲ್ಲಿ ಹಿಡಿತ ಸಾಧಿಸಲು ಮೂಲ ಬಿಜೆಪಿಗರು ಪ್ರಯತ್ನ ಪಡುತ್ತಲೇ ಇದ್ದರು. ಈ ಮಧ್ಯೆ ಉಮೇಶ್ ಕಟ್ಟಿ ಟೀಮ್ ಕೂಡ ಬೇರೆಯದ್ದೇ ಆತ ಹೆಣೆದಿತ್ತು. ಇದಕ್ಕೆಲ್ಲ ಸರಿಯಾಗಿ ಏಟು ಕೊಟ್ಟ ಯಡಿಯೂರಪ್ಪನವರು, ಪಕ್ಷದಲ್ಲಿ ತಾವೇ ನಂಬರ್ ೧ ಎಂದು ಮತ್ತೆ ಘೋಷಿಸಿದ್ದಾರೆ. ತಮ್ಮ ತೀರ್ಮಾನವೇ ಅಂತಿಮ ಎನ್ನುವುದನ್ನು ಮತ್ತೊಮ್ಮೆ ಪಕ್ಷದ ಭಿನ್ನಮತೀಯ ಗುಂಪಿಗೆ ನೇರವಾಗಿ ತಿಳಿಸಿದ್ದಾರೆ.

ಹಾಗೆ ನೋಡಿದರೆ ರಮೇಶ್ ಜಾರಕಿಹೊಳಿಯವರಿಗೆ ಬೆಳಗಾವಿ ಉಸ್ತುವಾರಿ ನೀಡುವ ಬಗ್ಗೆ ಬಿಜೆಪಿಯಲ್ಲಿ ಭಾರೀ ವಿರೋಧವಿತ್ತು. ಆದರೆ, ಜಾರಕಿಹೊಳಿ, ಕಾಂಗ್ರೆಸ್ ತ್ಯಜಿಸುವ ಮೊದಲೇ, ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್ ಜಾರಕಿಹೊಳಿಗೆ ನೀರಾವರಿ ಖಾತೆ ಮತ್ತು ಜಿಲ್ಲಾ ಉಸ್ತುವಾರಿಯ ಭರವಸೆ ನೀಡಿತ್ತು. ಇದೀಗ ಎರಡನೆಯ ಭರವಸೆಯನ್ನು ಸಿಎಂ ಈಡೇರಿಸಿದ್ದಾರೆ.

ಕಳೆದ ವಾರವಷ್ಟೇ ಯಡಿಯೂರಪ್ಪ ಮತ್ತು ಹೈಕಮಾಂಡ್ ಹೇಳಿದರೆ ೨೦ ಕಾಂಗ್ರೆಸ್ ಶಾಸಕರ ರಾಜೀನಾಮೆ ಕೊಡಿಸುವುದಾಗಿ ಜಾರಕಿಹೊಳಿ ಘೋಷಿಸಿದ್ದು ಇಲ್ಲಿ ಗಮನಾರ್ಹ. ಇದೀಗ ಜಾರಕಿಹೊಳಿಗೆ ಬೆಳಗಾವಿ ಉಸ್ತುವಾರಿ ವಹಿಸಿರುವುದರಿಂದ ಬಿಜೆಪಿಯಲ್ಲಿ ಜಾರಕಿಹೊಳಿ ಪವರ್ ಜಾಸ್ತಿಯಾಗಿದೆ, ಅಷ್ಟೇ ಅಲ್ಲ, ಸರಕಾರದ ಸಂಪೂರ್ಣ ಭಾರವನ್ನು ಅವರ ಹೆಗಲ ಮೇಲೆ ಹೊರಿಸಿದಂತಾಗಿದೆ. ಅಷ್ಟೇ ಅಲ್ಲ, ಅಗತ್ಯ ಬಿದ್ದರೆ ಆಪರೇಷನ್ ನಡೆಸಲು ಜಾರಕಿಹೊಳಿಗೆ ಅಗತ್ಯ ಪದವಿ ಕೊಟ್ಟಂತಾಗಿದೆ. ಯಡಿಯೂರಪ್ಪ ಕೊಟ್ಟ ಮಾತು ಉಳಿಸ್ಕೊತಾರೆ ಅನ್ನೋ ಸಂದೇಶ ಇದೀಗ ಸ್ಪಷ್ಟವಾಗಿ ರವಾನೆಯಾಗಿದ್ದು, ಬಿಜೆಪಿ ಸೇರಲು ಕಾಯುತ್ತಿರುವ ಕಾಂಗ್ರೆಸ್ ಶಾಸಕರಿಗೆ ಉತ್ಸಾಹ ತುಂಬಿದಂತಾಗಿದೆ. ಸಹಜವಾಗಿಯೇ, ಕಾಂಗ್ರೆಸ್ ನಲ್ಲಿ ನಡುಕು ಶುರುವಾಗಿದೆ.

Add Comment