ಸರ್ಕಾರಿ ಬಸ್ ಗಳಿಲ್ಲದೆ ಜನರ ಪರದಾಟ ಖಾಸಗಿ ವಾಹನಗಳಿಗೆ ದುಬಾರಿ ಬೇಡಿಕೆ: ಸಂಧಾನ ಮಾತುಕತೆಗೆ ಸಿದ್ಧವೆಂದ ಸಿಎಂ

ಏಪ್ರಿಲ್ 7, ಬುಧವಾರ ಇಡೀ ದಿನ‌ ರಾಜ್ಯಾದ್ಯಂತ ಬಿಎಂಟಿಸಿ-ಕೆ.ಎಸ್.ಆರ್.ಟಿ.ಸಿ ಬಸ್ ಗಳ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದಿಂದ ಜನರು ಖಾಸಗಿ ವಾಹನಗಳು, ಖಾಸಗಿ ಬಸ್ ಗಳು, ಆಟೋರಿಕ್ಷಾಗಳಿಗೆ ದುಪ್ಪಟ್ಟು ಬೆಲೆ ತೆತ್ತು ಕಣ್ಣೀರುವುಡುವಂತಹ ಹೃದಯವಿದ್ರಾವಕ ಪರಿಸ್ಥಿತಿ ಕಂಡುಬಂದಿದೆ.
ಇಷ್ಟಾದರೂ ಇಂದು 4 ನಿಗಮಗಳ ಸಾರಿಗೆ ನೌಕರರು ತಮ್ಮನ್ನೂ ಸಹ ಸರ್ಕಾರಿ ನೌಕರರು ಎಂದು ಪರಿಗಣಿಸಿ ರಾಜ್ಯಸರ್ಕಾರ 6ನೇ ವೇತನ ಆಯೋಗವನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕೆಲಸಕ್ಕೆ ಗೈರುಹಾಜರಾಗಿದ್ದರು.
ಮೊದಲು ಮುಷ್ಕರಕ್ಕೆ ಬಗ್ಗದ ಸರ್ಕಾರ ಕೊನೆಗೆ ಸಿಎಂ ಯಡಿಯೂರಪ್ಪ ಅವರೇ ಮುಷ್ಕರ ನಿಲ್ಲಿಸಿ ಮಾತುಕತೆಗೆ ಬನ್ನಿ ಎಂದು ಆಹ್ವಾನ ನೀಡಿದರು.
ಅಲ್ಲದೆ ರಾಜ್ಯಸರ್ಕಾರ ಸಾರಿಗೆ ನೌಕರರ 9 ಬೇಡಿಕೆಗಳ ಪೈಕಿ 8 ನ್ನು ಈಡೇರಿಸಿದೆ. ಜೊತೆಗೆ ಶೇ.8ರಷ್ಟು ವೇತನವನ್ನೂ ಹೆಚ್ಚಿಸಿ ಸಾರಿಗೆ ನೌಕರರ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದೇವೆ,ಆದ್ದರಿಂದ ಮುಷ್ಕರ ಕೈಬಿಟ್ಟು ಮಾತುಕತೆಗೆ ಬನ್ನಿ ಎಂದು ಸಿಎಂ ಯಡಿಯೂರಪ್ಪ ಅವರು ಮುಷ್ಕರನಿರತ ಸಾರಿಗೆ ನೌಕರರಿಗೆ ಕರೆ ನೀಡಿದರು.
ಆದರೆ ಇದನ್ನು ತಿರಸ್ಕರಿಸದೇ ಸಾರಿಗೆ ನೌಕರರ ಗೌರವಾಧ್ಯಕ್ಷ(KSRTC employees honourary president) ಕೋಡಿಹಳ್ಳಿ ಚಂದ್ರಶೇಖರ್ “ಸಾರಿಗೆ ನೌಕರರು ಮಾತುಕತೆಗೆ ನಾವೂ ಸಿದ್ದರಿದ್ದೇವೆ. ಆದರೆ ರಾಜ್ಯಸರ್ಕಾರ ಮೊದಲು ಮುಷ್ಕರ ನಡೆಸಿದಾಗ 6ನೇ ವೇತನ ಆಯೋಗದ ಜಾರಿಗೆ ಒಪ್ಪಿತ್ತು. ಆದರೆ ಈಗ ನಮಗೆ ಈ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ ಎಂದು ಸಿಎಂ ಹೇಳಿದ್ದಾರೆ. ಇಷ್ಟಾದರೂ ನಾವು ಸಿಎಂ ಜೊತೆ ಮಾತುಕತೆಗೆ ಸಿದ್ಧರಿದ್ದೇವೆ” ಎಂದು ಸ್ಪಷ್ಟಪಡಿಸಿದರು.
ಇತ್ತ ರಾಜ್ಯದ ಉದ್ದಗಲಕ್ಕೂ ಇಂದು ಜನರು ಸಾರಿಗೆ ಬಸ್ ಗಳಿಲ್ಲದೇ ನಡೆಸುತ್ತಿದ್ದ ಪಡಿಪಾಟಲು ಹೇಳತೀರದು, ಕೆಲವು ಕಡೆ ಬಾಣಂತಿಯರು,ಮಹಿಳೆಯರು,ಗಂಭೀರ ಖಾಯಿಲೆಗಳಿಂದ ನರಳುತ್ತಿರುವವರು ಆಸ್ಪತ್ರೆಗಳಿಗೆ ಬಸ್ ಸಿಗದೇ ಪೇಚಾಡಿದರು.‌
ಇದೇ ಬಂಡವಾಳ ಎಂದುಕೊಂಡು ಖಾಸಗಿ ಬಸ್ ಗಳು,ಆಟೋರಿಕ್ಷಾಗಳು ಹಾಗೂ ಇತರೆ ಖಾಸಗಿ ವಾಹನಗಳು ದುಪ್ಪಟ್ಟು ಬೆಲೆಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದದ್ದು ಕಂಡುಬಂತು.
ಬೆಂಗಳೂರಿನಲ್ಲಂತೂ ಮೆಟ್ರೊ ರೈಲುಗಳಿಗೆ ಪಾಸ್ ಸಿಗದೇ ಜನರು ಒದ್ದಾಡಿದ್ದು ಕಂಡುಬಂತು.
ಕೆಲವೆಡೆ ಖಾಸಗಿ ಬಸ್ ಗಳು ಮತ್ತು ಖಾಸಗಿ ವಾಹನಗಳು ಪ್ರಯಾಣಿಕರಿಂದ ದುಪ್ಪಟ್ಟು ಬೆಲೆಗಿಂತ ಹಲವು ಪಟ್ಟು ಬೆಲೆಗೆ ಪ್ರಯಾಣದ ಸೇವೆ ನೀಡುತ್ತಿದ್ದದ್ದು ಕಂಡುಬಂತು.
ಇದರಿಂದ ಇಂದು ಖಾಸಗಿ ನೌಕರರು ಕೆಲಸಕ್ಕೆ ಹೋಗದೆ Work from home ಅಥವಾ ಕೆಲಸಕ್ಕೆ ಗೈರುಹಾಜರಾಗಿದ್ದು ಎದ್ದುಕಾಣುತ್ತಿತ್ತು.
ಆದರೆ ಸಾರಿಗೆ ನೌಕರರ ಸಂಘದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರ ಪ್ರಕಾರ ನಾಳೆಯೂ ಸಹ ರಾಜ್ಯಾದ್ಯಂತ ಸಾರಿಗೆ ಬಸ್ ಗಳು ರಸ್ತೆಗಿಳಿಯದೇ ಸಾರಿಗೆ ನೌಕರರು ಮುಷ್ಕರ ಮುಂದುವರೆಸಲಿದ್ದಾರೆ.‌
ಇದರಿಂದ ರಾಜ್ಯಸರ್ಕಾರ ಮತ್ತು ಮುಷ್ಕರನಿರತ ಸಾರಿಗೆ ನೌಕರರ ನಡುವಿನ ತಿಕ್ಕಾಟದಿಂದ ರಾಜ್ಯದಲ್ಲಿ ಮಹಿಳೆಯರು,ಶಾಲಾಮಕ್ಕಳು,ವಿದ್ಯಾರ್ಥಿಗಳು,ಎಲ್ಲಾ ರೀತಿಯ ನೌಕರರು,ಗಂಭೀರ ರೋಗಗಳಿಂದ ಬಳಲುತ್ತಿರುವ ರೋಗಿಗಳು ಸಾರಿಗೆ ಬಸ್ ಗಳಿಲ್ಲದೆ ಹೇಳತೀರದಷ್ಟು ಕಷ್ಟ ಅನುಭವಿಸುತ್ತಿದ್ದಾರೆ.
ಇದು ಖಾಸಗಿ ವಾಹನಗಳ ದುಪ್ಪಟ್ಟು ಸೇವೆ ಮಾಮೂಲು ಎನ್ನುವಂತಾಗಿದೆ!
KTVKANNADA
ಬೆಂಗಳೂರು ಮತ್ತು ಜಿಲ್ಲೆಗಳ ವರದಿ

Add Comment