ಹೋಗೋರು ಇವತ್ತೇ ಹೋಗಿ-ಆರ್.ಅಶೋಕ್ ಹೇಳಿಕೆ

ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನೆಲೆ ಒಂದು ವಾರ ಬೆಂಗಳೂರು ಲಾಕ್ ಡೌನ್ ಮಾಡಲಾಗುತ್ತಿದೆ. ಈ ಹಿನ್ನೆಲೆ ಲಾಕ್‍ಡೌನ್ ಘೋಷಣೆ ಮಾಡಿದ ತಕ್ಷಣ ಸಾವಿರಾರು ಜನರು ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳತ್ತ ಹೋಗುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಆರ್.ಅಶೋಕ್, ದಯವಿಟ್ಟು ಬೆಂಗಳೂರು ಬಿಟ್ಟು ಯಾರೂ ಹೋಗಬೇಡಿ. ಒಂದು ವಾರ ಇಲ್ಲೇ ಇರಿ. ಅನಿವಾರ್ಯತೆ ಇದೆ ಹೋಗಲೇಬೇಕು ಅಂದರೆ ಮಾತ್ರ ಹೋಗಿ. ಆದರೆ ಹೋಗುವರು ಇವತ್ತೇ ಹೋಗಿ ಬಿಡಿ. ಇಲ್ಲಿಂದ ಜಿಲ್ಲೆಗಳಿಗೆ ಹೋಗುವರನ್ನು ಏನು ಮಾಡಬೇಕು ಅಂತ ಆಯಾ ಜಿಲ್ಲಾಡಳಿತ ನಿರ್ಧಾರ ಕೈಗೊಳ್ಳುತ್ತೆ ಎಂದಿದ್ದಾರೆ.

ಇವತ್ತು ಸಿಎಂ ನೇತೃತ್ವದಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಡಿಸಿಗಳ ಸಭೆ ಇದ್ದು, ಸದ್ಯಕ್ಕೆ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳನ್ನು ಲಾಕ್‍ಡೌನ್ ಮಾಡಲಾಗಿದೆ. ಬೇರೆ ಜಿಲ್ಲೆಗಳಲ್ಲೂ ಸಮಸ್ಯೆ ಗಂಭೀರ ಆಗಿದೆ. ಹೀಗಾಗಿ ಬೇರೆ ಜಿಲ್ಲೆಗಳಲ್ಲಿ ಯಾವ ತೀರ್ಮಾನ ಮಾಡಬೇಕು ಎಂದು ಸಿಎಂ ಚರ್ಚೆ ಮಾಡುತ್ತಾರೆ ಎಂದರು. ಇನ್ನೂ ಕೊರೊನಾ ಗಂಭೀರ ಇರುವ ಜಿಲ್ಲೆಗಳಲ್ಲಿ ಲಾಕ್‍ಡೌನ್ ವಿಚಾರವಾಗಿ ಪ್ರತಿಕ್ರಿಯಿಸಿದ ಅಶೋಕ್, ಆಯಾ ಜಿಲ್ಲೆಗಳ ಡಿಸಿಗಳು ಮತ್ತು ತಜ್ಞರಿಂದ ವರದಿ ಪಡೆದು ಸಿಎಂ ನಿರ್ಧರಿಸುತ್ತಾರೆ. ಈ ಜಿಲ್ಲೆಗಳಲ್ಲಿ ಏಕಾಏಕಿ ಲಾಕ್‍ಡೌನ್ ಮಾಡಲ್ಲ. ತಜ್ಞರ ಅಭಿಪ್ರಾಯವನ್ನು ಪಡೆದುಕೊಂಡು ಸರಿಯಾದ ಚರ್ಚೆ ಮಾಡಿಯೇ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

Add Comment