ಜಗತ್ತಿನ ಶ್ರೀಮಂತ ದೇವರ ಅಸ್ತಿ ಯಾರಿಗೆ ?

ಜಗತ್ತಿನ ಶ್ರೀಮಂತ ದೇವರು ಯಾರಿಗೆ ಸೇರಿದ್ದು ಅನ್ನೋ ವ್ಯಾಜ್ಯವೊಂದು ಬಗೆಹರಿದಿದೆ. ಹಿಂದೂಗಳ ದೊಡ್ಡ ದೇವಸ್ಥಾನವೊಂದನ್ನು ಸುಪರ್ದಿಗೆ ತೆಗೆದುಕೊಳ್ಳೋ ಕೇರಳ ಸರಕಾರದ ಆಸೆಗೆ ಸುಪ್ರೀಂ ಕೋರ್ಟ್ ತನ್ನೆರೆರಚಿದೆ.

ಕೇರಳ ರಾಜ್ಯದ ತಿರುವನಂತಪುರದಲ್ಲಿರುವ ಪ್ರಖ್ಯಾತ ಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತದ ಹಕ್ಕು ತಿರುವಾಂಕೂರು ರಾಜಮನೆತನಕ್ಕೆ ಸೇರಿದ್ದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಇಂದು ಮಲ್ಹೋತ್ರಾ ಮತ್ತು ಉದಯ್ ಲಲಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪನ್ನು ಪ್ರಕಟಿಸಿದ್ದು ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಆಡಳಿತಾತ್ಮಕ ಸಮಿತಿ ದೇವಸ್ಥಾನದ ಆಡಳಿತ ನಿರ್ವಹಣೆಯನ್ನು ನೋಡಿಕೊಳ್ಳಲಿದೆ. ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಹೊಸ ಆಡಳಿತಾತ್ಮಕ ಸಮಿತಿ ರಚಿಸಲಾಗುವುದು, ಅಲ್ಲಿಯವರೆಗೆ ಈಗಿರುವ ಆಡಳಿತ ಸಮಿತಿಯೇ ಮುಂದುವರಿಯಲಿದೆ ಎಂದು ಹೇಳಿದೆ.

ಕೇರಳ ಹೈಕೋರ್ಟ್ 2011ರ ಜನವರಿ 31ರಂದು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ತಿರುವಾಂಕೂರು ರಾಜ ಮನೆತನದ ಕಾನೂನು ಪ್ರತಿನಿಧಿಗಳು ಸೇರಿದಂತೆ ಹಲವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ 9 ವರ್ಷಗಳ ನಂತರ ಇಂದು ತೀರ್ಪು ನೀಡಿದೆ.

ಇಂದು 300 ಪುಟಗಳ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಇಷ್ಟು ದಿನ ಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತ ನೋಡಿಕೊಳ್ಳುತ್ತಿದ್ದ ತಿರುವಾಂಕೂರು ರಾಜಮನೆತನದ ಹಕ್ಕನ್ನು ಎತ್ತಿಹಿಡಿದಿದೆ.

ತಿರುವಾಂಕೂರು ರಾಜಮನೆತನದ ಕೊನೆಯ ಆಡಳಿತಗಾರ 1991ರಲ್ಲಿ ತೀರಿಕೊಂಡ ನಂತರ ಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತ ರಾಜಮನೆತನದ ಸುಪರ್ದಿಗೆ ಕೊನೆಯಾಗುತ್ತದೆ ಎಂದು ಕೇರಳ ಹೈಕೋರ್ಟ್ ಆದೇಶ ನೀಡಿತ್ತು. ಇದೀಗ ಸುಪ್ರೀಂ ಕೋರ್ಟ್ ಕೇರಳ ಹೈಕೋರ್ಟ್ ನ ತೀರ್ಪನ್ನು ತಳ್ಳಿಹಾಕಿದೆ.

ಇಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿದ ಕೇರಳ ಸರ್ಕಾರ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಿಲ್ಲ. ನ್ಯಾಯಾಲಯದ ತೀರ್ಪಿಗೆ ಶರಣಾಗುವುದು ಸರ್ಕಾರದ ಕರ್ತವ್ಯ ಎಂದು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪನ್ನು ಖುಷಿಯಿಂದ ಸ್ವೀಕರಿಸಿದ ತಿರುವಾಂಕೂರು ರಾಜಮನೆತನ ದೇವಸ್ಥಾನದ ಸಂಪತ್ತು ದೇವರಿಗೆ ಸೇರಿದ್ದು, ಮನೆತನಕ್ಕಲ್ಲ, ಸುಪ್ರೀಂ ಕೋರ್ಟ್ ತೀರ್ಪಿನ ಮೂಲಕ ಪದ್ಮನಾಭ ಸ್ವಾಮಿ ದೇವಸ್ಥಾನದ ಜೊತೆಗಿನ ರಾಜಮನೆತನದ ಸಂಬಂಧ ಇನ್ನಷ್ಟು ಗಟ್ಟಿಯಾಗಿ ಮುಂದುವರಿಯಲಿದೆ ಎಂದು ತಿರುವಾಂಕೂರು ರಾಜಮನೆತನದ ಸದಸ್ಯ ಆದಿತ್ಯ ವರ್ಮ ಪ್ರತಿಕ್ರಿಯಿಸಿದ್ದಾರೆ.

2011ರಲ್ಲಿ ಕೇರಳ ಹೈಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್ 2011ರಲ್ಲಿ ತೀರ್ಪು ನೀಡಿದ್ದ ಕೇರಳ ಹೈಕೋರ್ಟ್ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ ಮತ್ತು ಅದರ ಅಪಾರವಾದ ಸಂಪತ್ತನ್ನು ರಾಜ್ಯ ಸರ್ಕಾರ ಸ್ವಾಧೀನ ಮಾಡಿಕೊಳ್ಳಬೇಕು. 1 ಲಕ್ಷ ಕೋಟಿ ಬೆಲೆಯ ಖಜಾನೆ ರಹಸ್ಯವಾಗಿದ್ದು ಈ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಹೇಳಿತ್ತು. ಇದರೊಂದಿಗೆ ಲಕ್ಷ ಕೋಟಿ ಆಸ್ತಿಯುಳ್ಳ ಜಗತ್ತಿನ ಅತ್ಯಂತ ಶ್ರೀಮಂತ ದೇಗುಲದ ಬಗೆಗಿನ ಗೊಂದಲಗಳು ಪರಿಹಾರವಾಗಿವೆ.

Add Comment