ಸಿಕ್ಸರ್, ಬೌಂಡರಿ ಆಟ – ಹರ್ಮನ್‌ಪ್ರೀತ್ ಕೌರ್ ಫಿಫ್ಟಿ; ಮುಂಬೈಗೆ 8 ವಿಕೆಟ್‌ಗಳ ಜಯ

0

ಮುಂಬೈ: ನಾಯಕಿ ಹರ್ಮನ್ ಪ್ರೀತ್ ಕೌರ್ (Harmanpreet Kaur) ಜವಾಬ್ದಾರಿ ಅರ್ಧಶತಕ ಹಾಗೂ ನಾಟ್ ಸ್ಕಿವರ್ ಬ್ರಂಟ್, ಯಸ್ತಿಕಾ ಭಾಟಿಯ ಸಾಂಘಿಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ (Mumbai Indians) ತಂಡವು ಯುಪಿ ವಾರಿಯರ್ಸ್ (UP Warriorz) ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

 

ಸಿಕ್ಸರ್ ಬೌಂಡರಿಗಳ ಆಟದಲ್ಲಿ ಬರೋಬ್ಬರಿ 45 ಬೌಂಡರಿ, 5 ಸಿಕ್ಸರ್‌ಗಳು ದಾಖಲಾದವು. ಮುಂಬೈ ಇಂಡಿಯನ್ಸ್ ಪರ 25 ಬೌಂಡರಿ, 3 ಸಿಕ್ಸರ್ ಸಿಡಿದರೆ, ವಾರಿಯರ್ಸ್ ಪರ 20 ಬೌಂಡರಿ 2 ಸಿಕ್ಸರ್‌ಗಳಷ್ಟೇ ದಾಖಲಾದವು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿರ್ಸ್ ತಂಡ ನಿಗದಿತ ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು. 160 ಗುರಿ ಬೆನ್ನತ್ತಿದ್ದ ಹರ್ಮನ್‌ಪ್ರೀತ್‌ಕೌರ್ ಪಡೆ 17.3 ಓವರ್‌ಗಳಲ್ಲೇ 2 ವಿಕೆಟ್ ನಷ್ಟಕ್ಕೆ 164 ರನ್ ಸಿಡಿಸಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಇದನ್ನೂ ಓದಿ: ಕಿಂಗ್ ಕೊಹ್ಲಿ ಶತಕದ ವೈಭವ – ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ 88 ರನ್ ಮುನ್ನಡೆ

ಚೇಸಿಂಗ್ ಆರಂಭಿಸಿದ ಮುಂಬೈ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಯಸ್ತಿಕಾ ಭಾಟಿಯಾ ಹಾಗೂ ಹೇಲಿ ಮ್ಯಾಥಿವ್ಸ್ ಜೋಡಿ ಮೊದಲ ವಿಕೆಟ್ ಪತನಕ್ಕೆ 6.5 ಓವರ್‌ಗಳಲ್ಲಿ 58 ರನ್ ಕಲೆಹಾಕಿತ್ತು. ಈ ವೇಳೆ ಯಸ್ತಿಕಾ ವಿಕೆಟ್ ಒಪ್ಪಿಸಿ ಹೊರನಡೆದರು. ಈ ಬೆನ್ನಲ್ಲೇ ಹೇಲಿ ಮ್ಯಾಥಿವ್ಸ್ ಸಹ ವಿಕೆಟ್ ಕೈಚೆಲ್ಲಿ ಪೆವಿಲಿಯನ್ ಸೇರಿದರು.

ಮುರಿಯದ ಮೂರನೇ ವಿಕೆಟಿಗೆ ಒಂದಾದ ನಾಟ್ ಸ್ಕಿವರ್ ಬ್ರಂಟ್ (Nat Sciver-Brunt) ಹಾಗೂ ಹರ್ಮನ್ ಪ್ರೀತ್‌ಕೌರ್ ಜೋಡಿ, ಸಿಕ್ಸರ್, ಬೌಂಡರಿಗಳ ಭರ್ಜರಿ ಬ್ಯಾಟಿಂಗ್ ನಡೆಸಿದರು. ಕೌರ್ 33 ಎಸೆತಗಳಲ್ಲಿ 53 ರನ್ (9 ಬೌಂಡರಿ, 1 ಸಿಕ್ಸರ್) ಚಚ್ಚಿದರೆ, ಸ್ಕಿವರ್ 31 ಎಸೆತಗಳಲ್ಲಿ 45 ರನ್ (6 ಬೌಂಡರಿ, 1 ಸಿಕ್ಸರ್) ಚಚ್ಚಿ ತಂಡದ ಗೆಲುವಿಗೆ ನೆರವಾದರು.

ಯುಪಿ ವಾರಿಯರ್ಸ್ ಪರ ರಾಜೇಶ್ವರಿ ಗಾಯಕ್ವಾಡ್ ಸೋಫಿ ಎಕ್ಲಿಸ್ಟೋನ್ ತಲಾ ಒಂದೊಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಗೆದ್ದು ಕ್ರೀಸ್‌ಗಿಳಿದ ವಾರಿಯರ್ಸ್ ಪಡೆ 2ನೇ ಓವರ್‌ನಲ್ಲೇ 8 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ನಂತರ ನಾಯಕಿ ಅಲಿಸ್ಸಾ ಹೀಲಿ ಹಾಗೂ ತಾಲಿಯಾ ಮೆಕ್‌ಗ್ರಾತ್ ಅರ್ಧಶತಕಗಳ ಬ್ಯಾಟಿಂಗ್ ನೆರವಿನಿಂದ 150 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ಹೀಲಿ 46 ಎಸೆತಗಳಲ್ಲಿ 58 ರನ್ (7 ಬೌಂಡರಿ, 1 ಸಿಕ್ಸರ್ ಗಳಿಸಿದರೆ), ತಾಲಿಯಾ 37 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 50 ರನ್ ಬಾರಿಸಿದರು. ಉಳಿದ ಅಗ್ರಕ್ರಮಾಂಕದ ಬ್ಯಾಟರ್‌ಗಳ ಕಳಪೆ ಬ್ಯಾಟಿಂಗ್ ಪ್ರದರ್ಶನದಿಂದ ಯುಪಿ ವಾರಿಯರ್ಸ್ ತಂಡ 159 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಮುಂಬೈ ಪರ ಸೈಕಾ ಇಶಾಕ್ 3 ವಿಕೆಟ್ ಪಡೆದರೆ, ಅಮೆಲಿಯಾ ಕೆರ್, ಹೇಲಿ ಮ್ಯಾಥಿವ್ಸ್ 1 ವಿಕೆಟ್ ಪಡೆದರು.

About Author

Leave a Reply

Your email address will not be published. Required fields are marked *

You may have missed