ನಟ ಸುಶಾಂತ್ ಸಿಂಗ್ ಸಾವಿನ ಕೇಸ್: ಅಕ್ಟೊಬರ್ 2ರವರೆಗೆ ರಿಯಾ ಚಕ್ರವರ್ತಿ ನ್ಯಾಯಾಂಗ ಬಂಧನ ವಿಸ್ತರಣೆ

ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಎನ್‍ಸಿಬಿ ವಿಚಾರಣೆಗೆ ಹಾಜರಾಗಿದ್ದ ರಿಯಾ ಚಕ್ರವರ್ತಿಯನ್ನು ಸೆಪ್ಟೆಂಬರ್ 8ರಂದು ಬಂಧಿಸಲಾಗಿತ್ತು. ಈಗಾಗಲೇ 14 ದಿನಗಳ ಜೈಲುವಾಸ ಅನುಭವಿಸಿರುವ ರಿಯಾ ಚಕ್ರವರ್ತಿ ಇನ್ನೂ 2 ವಾರ ಜೈಲಿನಲ್ಲಿರಬೇಕಾಗಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಬಂಧನಕ್ಕೊಳಗಾಗಿರುವ ಸುಶಾಂತ್​ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಮತ್ತು ಆಕೆಯ ಸೋದರ ಶೋವಿಕ್ ಚಕ್ರವರ್ತಿಯ ನ್ಯಾಯಾಂಗ ಬಂಧನದ ಅವಧಿಯನ್ನು ಅಕ್ಟೊಬರ್ 6ರವರೆಗೆ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇನ್ನೂ 2 ವಾರ ರಿಯಾ ಚಕ್ರವರ್ತಿ ಜೈಲಿನಲ್ಲೇ ಇರಬೇಕಾಗಿದೆ. ಇದರ ನಡುವೆ ರಿಯಾ ಮತ್ತು ಶೋವಿಕ್ ಚಕ್ರವರ್ತಿ ಜಾಮೀನು ಕೋರಿ ಬಾಂಬೆ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಆ ಜಾಮೀನು ಅರ್ಜಿಯ ವಿಚಾರಣೆ ನಾಳೆ ನಡೆಯಲಿದೆ.
34 ವರ್ಷದ ಸುಶಾಂತ್ ಸಿಂಗ್ ರಜಪೂತ್ ಜೂನ್ 14ರಂದು ಮುಂಬೈನ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ಸಾವನ್ನಪ್ಪಿದ್ದರು. ಮಾನಸಿಕ ಖಿನ್ನತೆಯಿಂದ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ, ಸುಶಾಂತ್​ನ ಕುಟುಂಬಸ್ಥರು, ಆಪ್ತ ವಲಯ ಸೇರಿದಂತೆ ಅಭಿಮಾನಿಗಳು ಕೂಡ ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಹೀಗಾಗಿ, ಸುಪ್ರೀಂಕೋರ್ಟ್ ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿತ್ತು. ಇನ್ನು ಸುಶಾಂತ್ ಸಾವು ಪ್ರಕರಣದಲ್ಲಿ ಡ್ರಗ್ಸ್ ಮಾಫಿಯಾ ಕೈವಾಡ ಇದೆ ಎಂಬ ಮಾತುಗಳು ಕೇಳಿಬಂದಿತ್ತು. ಈ ಬಗ್ಗೆ ಎನ್​ಸಿಬಿ ತನಿಖೆ ನಡೆಸುತ್ತಿದೆ.
ಇದೀಗ ನಟಿ ರಿಯಾ ಚಕ್ರವರ್ತಿ ಮತ್ತು ಶೋವಿಕ್ ಚಕ್ರವರ್ತಿಯ ನ್ಯಾಯಾಂಗ ಬಂಧನದ ಅವಧಿಯನ್ನು ಅಕ್ಟೋಬರ್ 6ರವರೆಗೆ ವಿಸ್ತರಿಸಿ ಮುಂಬೈನ ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ಈಗಾಗಲೇ 14 ದಿನಗಳ ಜೈಲುವಾಸ ಅನುಭವಿಸಿರುವ ರಿಯಾ ಚಕ್ರವರ್ತಿ ಇನ್ನೂ 2 ವಾರ ಜೈಲಿನಲ್ಲಿರಬೇಕಾಗಿದೆ. ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಎನ್‍ಸಿಬಿ ವಿಚಾರಣೆಗೆ ಹಾಜರಾಗಿದ್ದ ರಿಯಾ ಚಕ್ರವರ್ತಿಯನ್ನು ಸೆಪ್ಟೆಂಬರ್ 8ರಂದು ಬಂಧಿಸಲಾಗಿತ್ತು. ಇಂದಿನವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿತ್ತು. ಇಂದು ಮತ್ತೆ ನ್ಯಾಯಾಂಗ ಬಂಧನದ ಅವಧಿಯನ್ನು ಇನ್ನೆರಡು ವಾರಗಳಿಗೆ ವಿಸ್ತರಿಸಲಾಗಿದೆ.
ಕೆ ಟಿವಿ ನ್ಯೂಸ್ ಮುಂಬೈ

Add Comment