ನಿಖಿಲ್ ಗೆಲುವಿಗಾಗಿ ಆ ದೇವರಿಗೆ 80 ಕೋಟಿ ಖರ್ಚು ಮಾಡ್ತಾರಾ ಸಿಎಂ?

1 Star2 Stars3 Stars4 Stars5 Stars (No Ratings Yet)
Loading...

 

ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿಯ ರಾಜಕೀಯ ಭವಿಷ್ಯ ತೂಗುಯ್ಯಾಲೆಗೆ ಸಿಲುಕಿದೆ. ಗೆದ್ದೇ ಗೆಲ್ತಾರೆ ಎಂದು ಮಂಡ್ಯದಿಂದ ಲೋಕಸಭೆಗೆ ಸ್ಪರ್ಧಿಸಿದ್ದ, ನಿಖಿಲ್ ಗೆ ಮಂಡ್ಯದ ಗೆಲುವು ಇನ್ನೂ ನಿಶ್ಚಿತವಾಗಿಲ್ಲ. ಬಹುತೇಕ ಸೋಲು ಖಚಿತ ಎನ್ನುವ ಪರಿಸ್ಥಿತಿ ಇದ್ದರೂ, ಸಾವಿರಾರು ಮತಗಳ ಅಂತರದಲ್ಲಾದರೂ ಗೆಲ್ಲಬಹುದು ಎನ್ನುವ ದೂರದ ನಿರೀಕ್ಷೆಯೊಂದು ಸಿಎಂ ಕುಮಾರಸ್ವಾಮಿ ಮನದಲ್ಲಿದೆ. ವಂಶೋದ್ಧಾರಕನ ಮೊದಲ ಯತ್ನವೇ ಇಷ್ಟೊಂದು ಇಕ್ಕಟ್ಟಿಗೆ ಸಿಲುಕಿರುವಾಗ, ಕುಮಾರಸ್ವಾಮಿಯವರಿಗೆ ಆ ದೇವರೊಬ್ಬರು ನೆನಪಾಗಿದ್ದಾರೆ.

ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದಾಗ, ಮುಜರಾಯಿ ಸಚಿವ ನಾಗರಾಜ ಶೆಟ್ಟಿ ಮನವಿ ಮೇರೆಗೆ ಕುಕ್ಕೆ ಸುಬ್ರಮಣ್ಯ ಸ್ವಾಮಿಗೆ ಚಿನ್ನದ ರಥ ನಿರ್ಮಿಸುವುದಾಗಿ ಕುಮಾರಸ್ವಾಮಿ ಒಪ್ಪಿಗೆ ನೀಡಿದ್ದರು. ಆಗ 15 ಕೋಟಿ ರೂಪಾಯಿ ಅಂದಾಜು ಪ್ರಸ್ತಾಪಕ್ಕೆ ಸರಕಾರಿ ಆದೇಶವನ್ನೂ ಹೊರಡಿಸಿದ್ದರು. ಅದಾದ ಬಳಿಕ, ಆ ವಿಚಾರ ಸಂಪೂರ್ಣ ನೆನೆಗುದಿಗೆ ಬಿದ್ದಿತ್ತು.

ಮಂಡ್ಯದ ತಳಮಳಕ್ಕೆ ಕಾರಣವೇನು ಎಂದು ಮುಖ್ಯಮಂತ್ರಿಗಳು ಒಂದಿಷ್ಟು ಜ್ಯೋತಿಷಿಗಳನ್ನು ಸಂಪರ್ಕಿಸಿದ್ದರಂತೆ. ಈ ವೇಳೆ, ಸುಬ್ರಮಣ್ಯ ಸ್ವಾಮಿಗೆ ಸ್ವರ್ಣರಥ ನಿರ್ಮಿಸುವ ಸಂಕಲ್ಪ ಬಾಕಿ ಇದೆ. ಅದರ ಪರಿಣಾಮವೇ ಮಗನ ಭವಿಷ್ಯ ಡೋಲಾಯಮಾನಕ್ಕೆ ಸಿಲುಕಿರುವುದು. ಅಷ್ಟೇ ಅಲ್ಲ, ಸರಕಾರವೂ ಪದೇಪದೇ ಅಸ್ಥಿರತೆಗೆ ಸಿಲುಕುತ್ತಿರುವುದು ಎಂದು ತಿಳಿದುಬಂದಿದೆ. ಸಿಎಂ ಕೊಟ್ಟ ಮಾತು ರಾಜ ಕೊಟ್ಟ ಮಾತಿಗೆ ಸಮ. ಹೀಗಾಗಿ, ರಾಜಧರ್ಮ ಪಾಲಿಸಬೇಕು ಎಂದು ನಿನ್ನೆ ಕೂಡಾ ರಾಜಗುರು ದ್ವಾರಕನಾಥ್ ಜೀಯವರು ಸಿಎಂಗೆ ಸಲಹೆ ನೀಡಿದ್ದಾರೆ. ಇದರ ಬೆನ್ನಲ್ಲೇ, ಕುಕ್ಕೆ ಆಡಳಿತ ಮಂಡಳಿ ರಥ ನಿರ್ಮಾಣಕ್ಕೆ ಬೇಕಾದ ಸಿದ್ಧತೆ ಆರಂಭಿಸಲು ಹೊರಟಿದೆ. 80 ಕೋಟಿ ಅಂದಾಜು ಮೊತ್ತದಲ್ಲಿ ಚಿನ್ನದ ರಥ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ. ಈ ಪೈಕಿ ಕನಿಷ್ಟ ಅರ್ಧದಷ್ಟು ಮೊತ್ತ ಭಕ್ತರ ದೇಣಿಗೆಯಿಂದ ಸಂಗ್ರಹವಾಗಲಿದೆ. ಉಳಿದ ಖರ್ಚನ್ನು ಸರಕಾರ ಭರಿಸುವ ಸಾಧ್ಯತೆ ಇದೆ.

Add Comment