ಅಸ್ಸಾಂನ ಲೇಡಿ ಸಿಂಗಂ ಎಂದೇ ಖ್ಯಾತಿಯಾಗಿದ್ದ SI ಸಾವು

0

ದಿಸ್ಪುರ: ಕಂಟೈನರ್ ಟ್ರಕ್‌ಗೆ (Container Truck) ಕಾರು ಡಿಕ್ಕಿ ಹೊಡೆದ ಪರಿಣಾಮ ಲೇಡಿ ಸಿಂಗಂ ಎಂದೇ ಖ್ಯಾತಿಯಾಗಿದ್ದ ಅಸ್ಸಾಂನ ಮಹಿಳಾ ಸಬ್ ಇನ್ಸ್ಪೆಕ್ಟರ್ (SI) ಜುನ್ಮೋನಿ ರಾಭಾ (Junmoni Rabha) ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲಿಯಾಬೋರ್ ಉಪವಿಭಾಗದ ಜಖಲಬಂಧ ಪೊಲೀಸ್ ಠಾಣೆ ವ್ಯಾಪ್ತಿಯ ಸರುಭುಗಿಯಾ ಗ್ರಾಮದಲ್ಲಿ ಅಪಘಾತ (Accident) ಸಂಭವಿಸಿದ್ದು, ಹಿಂದಿ ಪೊಲೀಸ್ ಸಿನಿಮಾಗಳ ನಂತರ ‘ಲೇಡಿ ಸಿಂಗಂ’ ಹಾಗೂ ‘ದಬಂಗ್ ಕಾಪ್’ ಎಂಬ ಹೆಸರುಗಳಿಂದ ಜನಪ್ರಿಯವಾಗಿರುವ ಜುನ್ಮೋನಿ ರಾಭಾ (30) ಮೃತಪಟ್ಟಿದ್ದಾರೆ. ಅಪಘಾತ ಸಂಭವಿಸಿದ ವೇಳೆ ರಾಭಾ ತಮ್ಮ ಖಾಸಗಿ ಕಾರಿನಲ್ಲಿ ಏಕಂಗಿಯಾಗಿ ಹೋಗುತ್ತಿದ್ದು, ಪೊಲೀಸ್ ಸಮವಸ್ತ್ರ ಧರಿಸಿರಲಿಲ್ಲ. ನಸುಕಿನ ಜಾವ 2:30ರ ಸುಮಾರಿಗೆ ಮಾಹಿತಿ ತಿಳಿದ ಪೋಲಿಸ್ ತಂಡವು ಕೂಡಲೇ ಘಟನೆ ನಡೆದ ಸ್ಥಳಕ್ಕೆ ಧಾವಿಸಿ ರಾಭಾ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರನ್ನು ಪರೀಕ್ಷಿಸಿದ ವೈದ್ಯರು ರಾಭಾ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

ಮೊರಿಕೊಲಾಂಗ್ ಪೊಲೀಸ್ ಔಟ್‌ಪೋಸ್ಟ್‌ನ ಉಸ್ತುವರಿಯಾಗಿದ್ದ ರಾಭಾ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಹೆಸರುವಾಸಿಯಾಗಿದ್ದರು. ಅಲ್ಲದೇ ಹಣಕಾಸಿನ ಅಕ್ರಮಗಳಲ್ಲಿ ತೊಡಗಿಕೊಂಡಿದ್ದಾರೆ ಎಂಬ ಆರೋಪದ ಮೇಲೆ ಭಾರೀ ಸುದ್ದಿಯಾಗಿದ್ದರು.

2022ನೇ ವರ್ಷದ ಜೂನ್ ತಿಂಗಳಿನಲ್ಲಿ ತನ್ನ ಮಾಜಿ ಪ್ರಿಯಕರನೊಂದಿಗೆ ಸೇರಿಕೊಂಡು ರಭಾ ಲೀಗ್ ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಸೇವೆಯಿಂದ ಅಮಾನತುಗೊಳಿಸಲಾಗಿತ್ತು. ಬಳಿಕ ಅಮಾನತು ಹಿಂಪಡೆದುಕೊಂಡು ಮತ್ತೆ ಸೇವೆಯಲ್ಲಿ ತೊಡಗಿಕೊಳ್ಳುವಂತೆ ಆದೇಶ ಹೊರಡಿಸಿತು. ನಂತರ ರಾಭಾ ಮತ್ತೆ ಸೇವೆಗೆ ಸೇರಿದರು. ಇಂತಹ ಹಲವಾರು ಅಕ್ರಮ ಹಾಗೂ ಅಪರಾಧಗಳನ್ನು ರಾಭಾ ಮಾಡಿದ್ದಾರೆ ಎಂಬ ಆರೋಪ ಅವರ ಮೇಲಿತ್ತು.

ಘಟನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ರಾಭಾ ತಾಯಿ ಸುಮಿತ್ರಾ ರಾಭಾ, ಇದೊಂದು ಪೂರ್ವ ನಿಯೋಜಿತ ಕೊಲೆ ಎಂದು ಆರೋಪಿಸಿದ್ದು, ಯಾವುದೋ ಅಪರಿಚಿತ ತಂಡದಿಂದ ನಡೆದಿದೆ ಎಂದು ಹೇಳಿದ್ದಾರೆ. ಘಟನೆ ನಡೆಯುವ ಹಿಂದಿನ ದಿನ ರಾತ್ರಿ ಉನ್ನತ ಪೊಲೀಸ್ ಅಧಿಕಾರಿಗಳ ತಂಡವು ನಾಗಾನ್‌ನಲ್ಲಿರುವ ರಾಭಾ ಅವರ ಅಧಿಕೃತ ಕ್ವಾರ್ಟರ್‌ಗೆ ದಾಳಿ ನಡೆಸಿ ಸುಮಾರು 1 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಈ ವೇಳೆ ರಾಭಾ ತಾಯಿ ಸಹಾ ಅಲ್ಲೇ ಇದ್ದು, ಆ ಹಣ ತಾನು ಕೋಳಿ ಮತ್ತು ಹಂದಿ ಸಾಕಾಣಿಕೆ ಮಾಡಿ ಗಳಿಸಿರುವ ಹಣ ಎಂದು ಹೇಳಿದ್ದಾರೆ.

ಅಪಘಾತದ ಬಳಿಕ ಉತ್ತರ ಪ್ರದೇಶ (Uttar Pradesh) ನೋಂದಣಿ ಹೊಂದಿದ್ದ ಕಂಟೈನರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ನಾಗಾಂವ್ ಸಿವಿಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ರಾಭಾ ದೇಹವನ್ನು ಗುವಾಹಟಿಯಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಮೃತ ರಾಭಾ ಕುಟುಂಬಸ್ಥರು ಈ ಘಟನೆ ಕುರಿತು ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ನಾಗಾಂವ್ (Nagaon) ಪೊಲೀಸ್ ಅಧೀಕ್ಷಕಿ ಲೀನಾ ಡೋಲಿ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed