ಪಶ್ಚಿಮ ಬಂಗಾಳದಲ್ಲಿ ಬೃಹತ್ ಪ್ರಮಾಣದಲ್ಲಿ ಆಪರೇಷನ್ ಕಮಲ ನಡೆದಿದೆ. ಬಂಗಾಳದಲ್ಲಿ ಭಾರೀ ದಿಗ್ವಿಜಯ ಸಾಧಿಸಿದ ಬಿಜೆಪಿ ಸೇರ್ಪಡೆಗೆ ಮಮತಾ ಬೆಂಬಲಿಗರು ತಾಮುಂದು ತಾಮುಂದು ಅಂತ ಕ್ಯೂ ನಿಂತಿದ್ದಾರೆ. ಇಂದು ನಡೆದ ಸಡನ್ ಬೆಳವಣಿಗೆಯಲ್ಲಿ 2 ಟಿಎಂಸಿ ಶಾಸಕರು, ಓರ್ವ ಸಿಪಿಎಂ ಶಾಸಕ ಬಿಜೆಪಿ ಸೇರಿದ್ದಾರೆ. ಅಷ್ಟೇ ಅಲ್ಲ, ಸುಮಾರು 50ರಷ್ಟು ಕಾರ್ಪೋರೇಟರ್ಗಳೂ ಬಿಜೆಪಿ ಸೇರಿದ್ದಾರೆ.
ಲೋಕಸಭಾ ಚುನಾವಣೆ ಫಲಿತಾಂಶದ ಮೂಲಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬಿಜೆಪಿ ಶಾಕ್ ಕೊಟ್ಟಿತ್ತು. ಈ ಬೆನ್ನಲ್ಲೆ ಟಿಎಂಸಿಯ ನಾಯಕರು, ಕಾರ್ಯಕರ್ತರು ಬಿಜೆಪಿ ಸೇರಲು ಮುಂದಾಗುತ್ತಿದ್ದಾರೆ. ಟಿಎಂಸಿಯ ಮಹಿಳಾ ಕೌನ್ಸಿಲರ್ಗಳು ನಿನ್ನೆಯೇ ದೆಹಲಿಗೆ ತಲುಪಿದ್ದರು. ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಈ ಮೂಲಕ, ಬಿಜೆಪಿ ನಾರ್ತ್ ಪರಗಣ ಜಿಲ್ಲೆಯ 2 ನಗರ ಪಾಲಿಕೆಗಳಲ್ಲಿ ಅಧಿಕಾರವನ್ನು ಕಿತ್ತುಕೊಂಡಂತಾಗಿದೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಪಶ್ಚಿಮ ಬಂಗಾಳದ 18 ಸ್ಥಾನಗಳನ್ನು ಪಡೆದಿದೆ. ಈ ಗೆಲುವು ನಮ್ಮನ್ನು ಬಿಜೆಪಿ ಸೇರುವಂತೆ ಪ್ರೇರಣೆ ನೀಡಿತು. ರಾಜ್ಯದ ಜನರು ಬಿಜೆಪಿ ಕಾರ್ಯಕರ್ತರಾಗಿ ಕೆಲಸ ಮಾಡಲು ಉತ್ಸುಕರಾಗಿದ್ದಾರೆ ಎಂದು ಬಿಜೆಪಿ ಸೇರಿರೋ ಕೌನ್ಸಿಲರ್ಗಳು ತಿಸಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ದೀದಿ ನಿಮ್ಮ 40 ಶಾಸಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ಚುನಾವಣೆ ಮುಗಿದ ಬಳಿಕ, ನಿಮ್ಮ ಜೊತೆ ಯಾರೂ ಇರೋದಿಲ್ಲ ಅಂತ ಪ್ರಧಾನಿ ಮೋದಿ ಬಾಂಬ್ ಸಿಡಿಸಿದ್ದರು. ಇದೀಗ, ಫಲಿತಾಂಶದ ಬೆನ್ನಲ್ಲೇ, ಶಾಸಕರು ಕಮಲ ಪಾಳಯಕ್ಕೆ ಜಿಗಿಯುತ್ತಿರುವುದು ದೀದಿಯ ನಿದ್ದೆಗೆಡಿಸಿದೆ.