ಐಪಿಎಲ್-20: ಡೆಲ್ಲಿ ವಿರುದ್ಧ ಕೊಲ್ಕತ್ತಾಗೆ 59 ರನ್ ಜಯ

ಭಾರತದಲ್ಲಿ ಕೊರೊನಾ ವೈರಸ್ ಸೋಂಕು ತೀವ್ರವಾಗಿರುವ ಹಿನ್ನೆಲೆಯಲ್ಲಿ ಯುಎಇ ದೇಶದಲ್ಲಿ ನಡೆಯುತ್ತಿರುವ ಐಪಿಎಲ್-20 ಟೂರ್ನಿಯ ಇಂದಿನ ಲೀಗ್ ಪಂದ್ಯ ಕೆಕೆಆರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಅಬುಧಾಬಿಯಲ್ಲಿ ಜರುಗಿತು. ಶನಿವಾರದ ಈ ಮೊದಲ ಐಪಿಎಲ್ ಲೀಗ್ ಪಂದ್ಯದಲ್ಲಿ ಕೊಲ್ಕತಾ ನೈಟ್ ರೈಡರ್ಸ್ ತಂಡ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 59 ರನ್ ಗಳಿಂದ ಸದೆಬಡಿಯಿತು.
ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬೌಲಿಂಗ್ ಆರಿಸಿಕೊಂಡರು.‌
ಆದರೆ ಕೊಲ್ಕತಾ ನೈಟ್ ರೈಡರ್ಸ್ ಆರಂಭದ ಕುಸಿತದ ಬಳಿಕ ನಿತೀಶ್ ರಾಣಾ 81 ರನ್(53 ಎಸೆತ,13 ಬೌಂಡರಿ,1 ಸಿಕ್ಸರ್) ಹಾಗೂ ಸುನಿಲ್ ನರೈನ್ 64 ರನ್ (32 ಎಸೆತ,6 ಬೌಂಡರಿ,4 ಸಿಕ್ಸರ್) ಅವರ 115 ರನ್ ಗಳ ಮಹತ್ವದ ಜೊತೆಯಾಟದಿಂದ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 194 ರನ್ ಗಳ ಬೃಹತ್ ಮೊತ್ತ ಪೇರಿಸಿತು.
ಡೆಲ್ಲಿ ಪರ ನರ್ತ್ ಜೆ-ರಬಾಡ-ಸ್ಟುನಿಸ್ ತಲಾ 2 ವಿಕೆಟ್ ಪಡೆದರು.
ಬಳಿಕ ಬ್ಯಾಟಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟ್ಸ್ ಮನ್ ಗಳು ಕೆಕೆಆರ್ ವೇಗಿ ಪ್ಯಾಟ್ ಕಮ್ಮಿನ್ಸ್ ಅವರಿಗೆ
ಮೊದಲ 3 ವಿಕೆಟ್ ಒಪ್ಪಿಸಿದರು. ಆಗ ಡೆಲ್ಲಿ ಸ್ಕೋರ್ 3 ವಿಕೆಟ್ ಗೆ 13 ರನ್ ಆಗಿತ್ತು. ಆದರೆ ನಂತರ ನಾಯಕ ಶ್ರೇಯಸ್ ಅಯ್ಯರ್ 47 ರನ್(38 ಎಸೆತ) ಹಾಗೂ ರಿಷಬ್ ಪಂತ್ 27 ರನ್(33) ಜೊತೆಯಾಟದಿಂದ ಡೆಲ್ಲಿ ಚೇತರಿಸಿಕೊಂಡಿತ್ತು. ಆದರೆ ಸ್ಕೋರ್ 76 ರನ್ ಆಗಿದ್ದಾಗ ವರುಣ್ ಚಕ್ರವರ್ತಿ ಬೌಲಿಂಗ್ ಎದುರಿಸಲಾಗದೆ ಡೆಲ್ಲಿಯ ಉಳಿದ 5 ವಿಕೆಟ್ ಗಳು ಉರುಳಿದ ಪರಿಣಾಮ ಡೆಲ್ಲಿ ಅಂತಿಮವಾಗಿ 20 ಓವರ್ ಗಳಲ್ಲಿ 9 ವಿಕೆಟ್ ಗೆ 135 ರನ್ ಗಳಿಸಲಷ್ಟೇ ಶಕ್ತವಾಯಿತು.
ಕೆಕೆಆರ್ ಪರ ವರುಣ್ ಚಕ್ರವರ್ತಿ 4 ಓವರ್ ಗಳಲ್ಲಿ 20 ರನ್ ನೀಡಿ 5 ವಿಕೆಟ್ ಪಡೆದು ಶ್ರೇಷ್ಠ ಸಾಧನೆ ಮೆರೆದರು. ಜೊತೆಗೆ ವೇಗಿ ಪ್ಯಾಟ್ ಕುಮ್ಮಿನ್ಸ್ ಸಹ 4 ಓವರ್ ಗಳಲ್ಲಿ 17 ರನ್ ಮಾತ್ರ ನೀಡಿ ಆರಂಭದ 3 ವಿಕೆಟ್ ಗಳಿಸಿದರು.
ಅಂತಿಮವಾಗಿ 20 ರನ್ ನೀಡಿ 5 ವಿಕೆಟ್ ಗಳಿಸಿದ ವರುಣ್ ಚಕ್ರವರ್ತಿ ಸಹಜವಾಗೇ ‘ಪಂದ್ಯಶ್ರೇಷ್ಠ’ ಪ್ರಶಸ್ತಿಗೆ ಭಾಜನರಾದರು.
ಈ ಮೂಲಕ ಕೊಲ್ಕತಾ ನೈಟ್ ರೈಡರ್ಸ್ 11 ಪಂದ್ಯಗಳಲ್ಲಿ 6 ಜಯ,5 ಸೋಲು ಕಂಡು 12 ಪಾಯಿಂಟ್ ಪಡೆದು ಅಂಕಪಟ್ಟಿಯಲ್ಲಿ 4ನೇ ಸ್ಥಾನವನ್ನು ಉಳಿಸಿಕೊಂಡಿದೆ.
ಡೆಲ್ಲಿ ಕ್ಯಾಪಿಟಲ್ಸ್ ಸೋಲಿನ ಹೊರತಾಗಿಯೂ 11 ಪಂದ್ಯಗಳಲ್ಲಿ 7 ಜಯ,4 ಸೋಲು ಕಂಡು 14 ಪಾಯಿಂಟ್ ಗಳಿಸಿ ಸದ್ಯಕ್ಕೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲೇ ಇದೆ.
ಕೆ ಟಿವಿ ನ್ಯೂಸ್ ಅಬುಧಾಬಿ

Add Comment