ದಾಸ್ತಾನು ಮೇಲೆ ಕೇಂದ್ರಸರ್ಕಾರ ಮಿತಿ ಹೇರಿಕೆ-ಇಳಿಕೆಯಾಗ್ತಿದೆ ಈರುಳ್ಳಿ ಬೆಲೆ

ಈರುಳ್ಳಿ ದಾಸ್ತಾನಿನ ಮೇಲೆ ಕೇಂದ್ರಸರ್ಕಾರ ಮಿತಿ ವಿಧಿಸಿದ ಪರಿಣಾಮ ಈರುಳ್ಳಿ ದರ ದೇಶಾದ್ಯಂತ ಇಳಿಕೆಯಾಗಿದೆ.
ಏಷ್ಯಾದ ಅತಿ ದೊಡ್ಡ ಸಗಟು ಮಾರುಕಟ್ಟೆಯಾಗಿರುವ ಮಹಾರಾಷ್ಟ್ರದ ಲಸಲ್ಗಾಂವ್ ನಲ್ಲಿ ಒಂದು ಕೆ.ಜಿ. ಈರುಳ್ಳಿ ಬೆಲೆ 46 ರೂ.ಗೆ ಇಳಿದಿದೆ. ಇದರಿಂದ ಈಗ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಈರುಳ್ಳಿ ಲಭ್ಯವಾಗುತ್ತಿದೆ. ಇದೇ ವೇಳೆ ಮುಂಬೈನಲ್ಲಿ ಈರುಳ್ಳಿ ಬೆಲೆ ಕೆ.ಜಿಗೆ 70 ರೂ. ಇದೆ. ನೆರೆಯ ತಮಿಳುನಾಡಿನ ಚೆನ್ನೈನಲ್ಲಿ ಈರುಳ್ಳಿ ಕೆ‌.ಜಿಗೆ ಗರಿಷ್ಠ 76 ರೂ.ನಿಂದ ಕನಿಷ್ಟ 66 ರೂ‌.ಗೆ ಮಾರಾಟವಾಗುತ್ತಿದೆ.‌ ಬೆಂಗಳೂರಿನಲ್ಲಿ ಈರುಳ್ಳಿ ದರ ಕೆ.ಜಿಗೆ 64 ರೂ. ಇದೆ. ಮಂಡಿಗಳಲ್ಲಿ ಈರುಳ್ಳಿ ಆವಕ ಪ್ರಮಾಣ ಹೆಚ್ಚಾಗಿದೆ.
ಇತ್ತೀಚಿಗೆ ಭಾರಿ ಮಳೆ-ನೆರೆ ಪ್ರವಾಹದಿಂದ ಮಹಾರಾಷ್ಟ್ರ ಮತ್ತು ಉತ್ತರಕರ್ನಾಟಕ-ಮಧ್ಯಕರ್ನಾಟಕದಲ್ಲಿ ಈರುಳ್ಳಿ ಬೆಳೆ ಸಂಪೂರ್ಣವಾಗಿ ಹಾಳಾಗಿತ್ತು. ಪರಿಣಾಮ ದೇಶಾದ್ಯಂತ ಈರುಳ್ಳಿ ದರ ಕೆ.ಜಿ.ಗೆ ಕನಿಷ್ಟ 100 ರೂ.ನಿಂದ 150 ರೂ.ವರೆಗೆ ಏರಿತ್ತು.‌ ಆದ್ದರಿಂದ ಕೇಂದ್ರಸರ್ಕಾರ ಅಕ್ಟೋಬರ್ 23 ರಂದು ಈರುಳ್ಳಿ ದಾಸ್ತಾನಿನ ಮೇಲೆ ಮಿತಿ ಹೇರಿತ್ತು. ಚಿಲ್ಲರೆ ವ್ಯಾಪಾರಿಗಳಿಗೆ 2 ಟನ್ ಹಾಗೂ ಸಗಟು ವ್ಯಾಪಾರಿಗಳಿಗೆ 25 ಟನ್ ಮಿತಿ ಹೇರಲಾಗಿದೆ.
ಇಷ್ಟಾದರೂ ಚಿಲ್ಲರೆ ವ್ಯಾಪಾರಿಗಳು ಈಗಲೂ ಸಹ ರಾಜ್ಯದ ಹಲವೆಡೆ ಕೆ.ಜಿ ಈರುಳ್ಳಿಯನ್ನು 75 ರೂ.ನಿಂದ 90 ರೂ. ವರೆಗೂ ಮಾರುತ್ತಿರುವುದು ಕಂಡುಬಂದಿದೆ. ಆದಾಗ್ಯೂ ಈರುಳ್ಳಿ ದರ ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ.
ಕೆ ಟಿವಿ ನ್ಯೂಸ್

Add Comment