ಪಾಕ್ ಆಕ್ರಮಿತ ಕಾಶ್ಮೀರ ವಶಕ್ಕೆ ಭಾರತ ರೆಡಿ- ಭಾರೀ ಸೇನಾ ಜಮಾವಣೆ ರಹಸ್ಯ ಬಯಲು

 

ಅಖಂಡ ಕಾಶ್ಮೀರದ ಭರವಸೆ ಕೊಟ್ಟಿರೋ ಬಿಜೆಪಿ ಅದನ್ನು ಈಡೇರಿಸಲು ಮುಂದಾಗಿದ್ಯಾ ? ಪಾಕಿಸ್ತಾನ ವಶಪಡಿಸಿಕೊಂಡಿರೋ ಭಾರತದ ಭೂಭಾಗವನ್ನು ಮತ್ತೆ ವಶಕ್ಕೆ ಪಡೆಯಲು ಮೋದಿ ಸರ್ಕಾರ ತೀರ್ಮಾನಿಸಿದ್ಯಾ ? ಅಂತಹದ್ದೊಂದು ಬಲವಾದ ಗುಮಾನಿ ಈಗ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಕಾರ್ಗಿಲ್ ವಿಜಯ್ ದಿವಸ್ ವೇಳೆ, ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ನೀಡಿರೋ ಹೇಳಿಕೆಯೇ ಇಷ್ಟಕ್ಕೆಲ್ಲಾ ಕಾರಣ.

ಪಾಕ್ ಆಕ್ರಮಿತ ಕಾಶ್ಮೀರ ನಮ್ಮದೇ, ಅದನ್ನು ವಾಪಸ್ ಪಡೆಯಲು ಸರ್ಕಾರ ಬಯಸಿದರೆ, ನಾವು ರೆಡಿ ಎಂದು ರಾವತ್ ಹೇಳಿದ್ದಾರೆ. ರಾಜತಾಂತ್ರಿಕ ಮಾರ್ಗವಾದರೂ ಸರಿಯೇ, ಮಿಲಿಟರಿ ಕಾರ್ಯಾಚರಣೆಯಾದರೂ ಸರಿಯೇ, ಅದನ್ನು ವಶಪಡಿಸಿಕೊಂಡೇ ಸಿದ್ಧ ಎಂದು ಸೇನಾ ಮುಖ್ಯಸ್ಥರು ಘೋಷಿಸಿದ್ದಾರೆ.

ರಾವತ್ ಹೇಳಿಕೆ ಬೆನ್ನಲ್ಲೇ ಕೇಂದ್ರ ಸರಕಾರ ಕಣಿವೆ ರಾಜ್ಯಕ್ಕೆ 10 ಸಾವಿರ ಪ್ಯಾರಾಮಿಲಿಟರಿ ಸಿಬ್ಬಂದಿಯನ್ನು ರವಾನಿಸಿದೆ. ಈ ಸೇನಾಪಡೆಗಳನ್ನು ಗಡಿಭಾಗದಲ್ಲಿ ನಿಯೋಜಿಸಲು ಗೃಹಸಚಿವಾಲಯ ಅದೇಶ ನೀಡಿದೆ. ಕಾಶ್ಮೀರ ಪ್ರವಾಸದಿಂದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ವಾಪಸ್​ ಆಗ್ತಿದ್ದಂತೆ ಕೇಂದ್ರ ಗೃಹ ಇಲಾಖೆ ಗೃಹ ಇಲಾಖೆ ಸಿಆರ್​ಪಿಎಫ್​ನ 50, ಎಸ್ಎಸ್ ಬಿಯ 30 ಹಾಗೂ ಬಿಎಸ್ ಎಫ್ ಮತ್ತು ಐಟಿಬಿಪಿಯ ತಲಾ 10 ತುಕಡಿಗಳನ್ನು ಕಾಶ್ಮೀರ ಕಣಿವೆಕ್ಕೆ ಕಳುಹಿಸಿದೆ.

ಇತ್ತ, ದಿಢೀರ್ ಎಂದು ಸಂಸತ್ ಅಧಿವೇಶನವನ್ನೂ ಕೇಂದ್ರ ಸರ್ಕಾರ ಆಗಸ್ಟ್ 7ರವರೆಗೆ ವಿಸ್ತರಿಸಿದೆ. ರಾಜಕೀಯ ಪಂಡಿತರ ಪ್ರಕಾರ, ಕಾಶ್ಮೀರದ ವಿಚಾರದಲ್ಲಿ ಮಹತ್ವದ ತೀರ್ಮಾನವೊಂದು ಈ ವಾರದಲ್ಲಿ ಹೊರಬೀಳೋದು ನಿಶ್ಚಿತವಂತೆ. ಒಂದೋ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರೋ ಆರ್ಟಿಕಲ್ 35ಎ ಹಿಂದಕ್ಕೆ ಪಡೆಯಬಹುದು, ಇಲ್ಲವೇ, ಪಿಒಕೆ ವಶಕ್ಕೆ ಮುಂದಾಗಬಹುದು ಎನ್ನಲಾಗ್ತಿದೆ. ಹೀಗಾಗಿ ಕಾಶ್ಮೀರದಲ್ಲಿ ಹೆಚ್ಚುವರಿ ಸೇನೆ ನಿಯೋಜಿಸಲಾಗ್ತಿದೆಯಂತೆ. ಅತ್ತ, ಗಡಿಯಾಚೆಗಿನ ದೇಶದಲ್ಲಿ ಸಣ್ಣದೊಂದು ಕಂಪನ ಸೃಷ್ಟಿಯಾಗಿದೆ.

Add Comment