ಎತ್ತಿನಹೊಳೆ ಮೊದಲ ಹಂತಕ್ಕೆ ಶೀಘ್ರ ಚಾಲನೆ – ರಮೇಶ್ ಜಾರಕಿಹೊಳಿ

1 Star2 Stars3 Stars4 Stars5 Stars (No Ratings Yet)
Loading...

ಕೊರೋನಾ ಲಾಕ್ ಡೌನ್ ಇರುವುದರಿಂದ ಎತ್ತಿನಹೊಳೆ ಯೋಜನೆಯ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ಮುಂದಿನ ಮಾರ್ಚ್ ಒಳಗೆ 37 ಕಿಲೋ ಮೀಟರ್ ದೂರದ ವರೆಗೆ ನೀರು ಹರಿಸುವ ಕೆಲಸವನ್ನು ಮಾಡುತ್ತೇವೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಭರವಸೆ ನೀಡಿದರು.

ಹಾಸನದ ಸಕಲೇಶಪುರದಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿಯ ವೀಕ್ಷಣೆ ಮಾಡಿ ಬಳಿಕ ಮಾತನಾಡಿದ ಅವರು ನೀರಿನ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ. ಅನುದಾನ ಒದಗಿಸುವ ವಿಚಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ಆದರೆ ಮುಂದಿನ ದಿನಗಳಲ್ಲಿ ಎಲ್ಲವನ್ನು ಬಗೆಹರಿಸುವುದಾಗಿ ತಿಳಿಸಿದ ಸಚಿವರು, ಮುಂದಿನ ಮಾರ್ಚ್ ಒಳಗೆ ಎತ್ತಿನಹೊಳೆ ಮೊದಲನೇ ಹಂತ ದ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದರು.

ಕಳೆದ ಫೆಬ್ರವರಿಯಲ್ಲಿ ನಾನು ಜಲಸಂಪನ್ಮೂಲ ಇಲಾಖೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದು, ಅಂದಿನಿಂದ ಪ್ರತಿ ಜಲಾಶಯಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದೇನೆ. ಜೊತೆಗೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ರಾಜ್ಯದಲ್ಲಿ ನೀರಿನ ಸಮಸ್ಯೆ ಉಲ್ಬಣವಾಗದಂತೆ ನೋಡಿಕೊಳ್ಳಲು ಆದೇಶ ನೀಡಿದ್ದೇನೆ ಎಂದರು.

ರಾಜ್ಯದ ಎಲ್ಲ ರೈತರು ನಮ್ಮವರೇ. ಹಾಗಾಗಿ ಅವರ ಹಿತ ಕಾಪಾಡಬೇಕಾಗಿರುವುದು ನಮ್ಮ ಜವಾಬ್ದಾರಿ. ರಾಜ್ಯದಲ್ಲಿ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಲಾಗುವುದು ಎಂದರು.

ರಾಜ್ಯದ ಮುಖ್ಯಮಂತ್ರಿಗಳಿಗೆ ನೀರಾವರಿ ಕ್ಷೇತ್ರದ ಬಗ್ಗೆ ಹೆಚ್ಚಿನ ಕಾಳಜಿ ಇರುವುದರಿಂದ ಯಾವುದೇ ರೀತಿಯ ಸಮಸ್ಯೆ ಆಗಲಾರದು. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು ಆದಷ್ಟು ಬೇಗ ಅವರಿಗೆ ಪರಿಹಾರ ನೀಡುವ ಮೂಲಕ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಬೇಕಾಗುವಂತಹ ಎಲ್ಲಾ ರೀತಿಯ ಅನುದಾನ ನೀಡುತ್ತೇವೆ. ಜೊತೆಗೆ ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೀಲನಕ್ಷೆ ಸಿದ್ದಪಡಿಸಿಕೊಂಡಿದ್ದೇವೆ.
ಮುಖ್ಯಮಂತ್ರಿಗಳೊಂದಿಗೆ ಈ ತಿಂಗಳ ಅಂತ್ಯದೊಳಗೆ ವಿಶೇಷ ಸಭೆ ನಡೆಸಿ ಯೋಜನೆಗಳ ಅನುಷ್ಠಾನಕ್ಕೆ ಮತ್ತಷ್ಟು ಹೆಚ್ಚಿನ ಒತ್ತು ನೀಡುತ್ತೇವೆ ಎಂದರು.

ನಮ್ಮ ಇಲಾಖೆಯಿಂದ ಈಗಾಗಲೇ ಇಲ್ಲಿ ಸಮೀಕ್ಷೆ ಮಾಡಿಸಿದ್ದೇವೆ. ಇಲ್ಲಿ 24.1 ಟಿಎಂಸಿ ನೀರು ಬರುವ ಎಲ್ಲಾ ಸಾಧ್ಯತೆಗಳು ಇದೆ. ಈಗಾಗಲೇ ಚೆಕ್ ಡ್ಯಾಮ್ ಗಳ ಕಾಮಗಾರಿ ಕೆಲಸ ಮುಗಿಯುವ ಹಂತಕ್ಕೆ ತಲುಪಿದ್ದು 100 ಮೀಟರ್ ಎತ್ತರದಿಂದ ನೀರನ್ನು ಹರಿಸಲಾಗುವುದು ಎಂದು ರಮೇಶ್ ಜಾರಕಿಹೊಳಿ‌ ಹೇಳಿದರು.

ಕೊರೋನಾ ಲಾಕ್ ಡೌನ್ ಇರುವುದರಿಂದ ಕೆಲಸಗಾರರು ಈಗಾಗಲೇ ಹಾಸನ ಜಿಲ್ಲೆಯಿಂದ ತಮ್ಮ ಸ್ವಂತ ರಾಜ್ಯಗಳಿಗೆ ತೆರಳಿದ್ದಾರೆ. ಆದರೆ ಯೋಜನೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಪರಿಹಾರ ಮಾರ್ಗಗಳನ್ನು ಕಂಡುಕೊಂಡು ಯೋಜನೆಯನ್ನು ಮುಂದುವರೆಸಿ ಕಾಮಗಾರಿಯನ್ನು ಪೂರ್ಣಗೊಳಿಸುವ ಕೆಲಸ ಮಾಡುತ್ತೇವೆ ಎಂದು ಜಲಸಂಪನ್ಮೂಲ ಸಚಿವರು ಹೇಳಿದರು.
*******
ಪ್ರಗತಿ ಪರಿಶೀಲನಾ ಸಭೆ ಗೂ ಮುನ್ನ ಜಲಸಂಪನ್ಮೂಲ ಸಚಿವರು ಎತ್ತಿನಹೊಳೆ
ಯೋಜನೆಯಿಂದ‌ ಭಾದಿತವಾಗಿರುವ ಸಕಲೇಶಪುರ ಮತ್ತು ಆಲೂರು ತಾಲ್ಲೂಕಿನ ಕುಂಬರಡಿ,ಕಾಡುಮನೆ ,ಹೆಬ್ಬನಳ್ಳಿ ಗ್ರಾಮಗಳ ಯೋಜನಾ ಸ್ಥಳಗಳಿಗೆ ಭೇಟಿ‌ ನೀಡಿ ರೈತ ಮುಖಂಡರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಜೊತೆಗೆ ಸಂವಾದ ನಡೆಸಿದರು.

Add Comment