ಕಾಂಗ್ರೆಸ್ ಪಕ್ಷವನ್ನು ಹಿರಣ್ಯಕಶಿಪುಗೆ ಹೋಲಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

0

ಬೆಂಗಳೂರು: ಘಟಬಂಧನ್ ಸಭೆಗೆ ಆಗಮಿಸಿರುವ ಹೊರರಾಜ್ಯದ ರಾಜಕೀಯ ನಾಯಕರ ಆತಿಥ್ಯಕ್ಕೆ ಐಎಎಸ್ ನಿಯೋಜನೆ ಮಾಡಿರುವ ರಾಜ್ಯ ಸರ್ಕಾರ ಹಾಗೂ ಆಡಳಿತ ಪಕ್ಷ ಕಾಂಗ್ರೆಸ್ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು; ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಐಎಎಸ್ ಜೀತ ಪದ್ಧತಿಯನ್ನು ಜಾರಿಗೆ ತಂದು ಕರ್ನಾಟಕದ ಹೆಮ್ಮೆ, ಪರಂಪರೆಗೆ ಘಟಶ್ರಾದ್ಧ ಮಾಡಿದೆ ಎಂದು ಕಿಡಿಕಾರಿದೆ.

ಅಧಿಕಾರ ಬಂಧನಕ್ಕಾಗಿ ಘಟಬಂಧನಕ್ಕೆ ಒಳಗಾದ ಕಾಂಗ್ರೆಸ್ ಪಕ್ಷವು ಕರ್ನಾಟಕದ ಹೆಮ್ಮೆ, ಪರಂಪರೆ,ಸ್ವಾಭಿಮಾನಕ್ಕೆ ಘಟಶ್ರಾದ್ಧ ಮಾಡಿದೆ. ಘಟಬಂಧನಕ್ಕೆ ಬಂದ ಹೊರರಾಜ್ಯದ ರಾಜಕಾರಣಿಗಳ ಸೇವೆಗೆ ರಾಜ್ಯದ ಹೆಮ್ಮೆಯ ಐಎಎಸ್ ಅಧಿಕಾರಿಗಳನ್ನು ಕಳಿಸಿದ ಕಾಂಗ್ರೆಸ್ ಸರಕಾರದ ನಡೆ ತಪ್ಪು. ನುಡಿದಂತೆ ನಡೆಯುವುದು ಎಂದರೆ ಇದೇನಾ? ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ಇದು ರಾಜ್ಯ ಸರಕಾರಿ ಕಾರ್ಯಕ್ರಮ ಅಲ್ಲ, ಹೊಸ ಸರಕಾರದ ಪ್ರಮಾಣ ಸ್ವೀಕಾರವೂ ಅಲ್ಲ. ಕೇವಲ ರಾಜಕೀಯ ಸಭೆಯಷ್ಟೇ. ಇಂಥ ಸಭೆಗೆ ಬಂದ ರಾಜಕೀಯ ನಾಯಕರಿಗೆ ಆಥಿತ್ಯ ನೀಡಲು ಜವಾಬ್ದಾರಿಯುತ ಅಧಿಕಾರಿಗಳನ್ನು ಕಳಿಸಿದ್ದು ಆರೂವರೆ ಕೋಟಿ ಕನ್ನಡಿಗರಿಗೆ ಎಸಗಿದ ಘೋರ ಅಪಚಾರ ಹಾಗೂ ರಾಜ್ಯದ ಪಾಲಿಗೆ ಮಹಾ ದುರಂತ ಎಂದು ಮಾಜಿ ಮುಖ್ಯಮಂತ್ರಿ ಅವರು ಹೇಳಿದ್ದಾರೆ.

ಯಾವುದೇ ಒಂದು ರಾಜ್ಯದ ಅಭಿವೃದ್ಧಿ, ಆಡಳಿತ, ಮುನ್ನಡೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಐಎಎಸ್ ಅಧಿಕಾರಿಗಳು ಕೇವಲ ಅಧಿಕಾರಿಗಳಷ್ಟೇ ಅಲ್ಲ; ಆಯಾ ರಾಜ್ಯಗಳ ಕ್ಷಮತೆ, ದಕ್ಷತೆಯ ಪ್ರತೀಕ. ಅಂಥವರನ್ನು ಇನ್ನೊಬ್ಬರ ಆಜ್ಞಾಪಾಲಕರನ್ನಾಗಿ ಮಾಡಿ, ಬಾಗಿಲು ಕಾಯುವ ಕೆಲಸ ಹಚ್ಚಿದ್ದು ಆಡಳಿತ ಪಕ್ಷದ ಅಹಂಕಾರದ ಪರಮಾವಧಿ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed