ವಿಶ್ವಕಪ್ ತಂಡದಲ್ಲಿ ಎಡಗೈ ಯುವ ಬ್ಯಾಟರ್ ಗೆ ಸ್ಥಾನ ಕಲ್ಪಿಸಲೇಬೇಕು: ಸೌರವ್ ಗಂಗೂಲಿ

0

ಬೆಂಗಳೂರು: ಕೆರಿಬಿಯನ್ ನಾಡಿನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 171 ರನ್ ಸಿಡಿಸಿ ಭರ್ಜರಿಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದರ್ಪಣೆ ಮಾಡಿರುವ ಯುವ ಎಡಗೈ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಏಷ್ಯನ್ ಗೇಮ್ಸ್ ತಂಡದಿಂದ ಹೊರಗಿಟ್ಟು ಏಕದಿನ ವಿಶ್ವಕಪ್ ತಂಡದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದಲ್ಲಿ ಸ್ಥಾನ ಕಲ್ಪಿಸಬೇಕೆಂದು ಮಾಜಿ ನಾಯಕ ಸೌರವ್ ಗಂಗೂಲಿ ಆಗ್ರಹಿಸಿದ್ದಾರೆ.
ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ವೆಸ್ಟ್ ಇಂಡೀಸ್ ಸರಣಿಗೆ ಆಯ್ಕೆಯಾಗಿರುವ ಯಶಸ್ವಿ ಜೈಸ್ವಾಲ್, ಡೊಮಿನಿಕಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ 171 ರನ್ ಸಿಡಿಸಿ, ಸೌರವ್ ಗಂಗೂಲಿ ಪಾದರ್ಪಣೆ ಪಂದ್ಯದಲ್ಲಿ ಶತಕ ಬಾರಿಸಿ ನಿರ್ಮಿಸಿದ್ದ ದಾಖಲೆ ಮುರಿದು ಗಮನ ಸೆಳೆದಿದ್ದಾರೆ. ಯುವ ಎಡಗೈ ಆಟಗಾರನನ್ನು ಬಿಸಿಸಿಐ ಮಾಜಿ ಅಧ್ಯಕ್ಷ ಗುಣಗಾಣ ಮಾಡಿದ್ದಾರೆ.
ಮುಂಬರುವ ವಿಶ್ವಕಪ್ ಟೂರ್ನಿಯ ಕುರಿತು ಟೆಲಿಗ್ರಾಫ್ ಇಂಡಿಯಾ ಜತೆ ಮಾತನಾಡಿರುವ ಮಾಜಿ ನಾಯಕ ಸೌರವ್ ಗಂಗೂಲಿ, “ಅಂತಾರಾಷ್ಟ್ರೀಯ ಕ್ರಿಕೆಟ್ ಪಾದರ್ಪಣೆ ಪಂದ್ಯದಲ್ಲೇ ಶತಕ ಸಿಡಿಸುವುದು ದೊಡ್ಡ ಸಾಧನೆ ಹಾಗೂ ಸ್ಮರಣೀಯ ಆಗಿರುತ್ತದೆ. ನಾನು ಕೂಡ ಈ ದಾಖಲೆ ನಿರ್ಮಿಸಿದ್ದೇನೆ. ಆದ್ದರಿಂದ ಅದರ ಮಹತ್ವವನ್ನು ನಾನು ಚೆನ್ನಾಗಿ ಅರಿತಿದ್ದೇನೆ. ಕೌಶಲ್ಯ ಆಧಾರದ ಮೇಲೆ ಹೇಳುವುದಾದರೆ ಯುವ ಜೈಸ್ವಾಲ್ ತುಂಬಾ ಒಳ್ಳೆ ಆಟಗಾರನಾಗಿದ್ದಾನೆ. ತಂಡದಲ್ಲಿ ಎಡಗೈ ಆಟಗಾರರ ಉಪಸ್ಥಿತಿ ಮುಖ್ಯ ಆಗುತ್ತದೆ. ಆದ್ದರಿಂದ ವಿಶ್ವಕಪ್ ತಂಡದಲ್ಲಿ ಎಡಗೈ ಯುವ ಬ್ಯಾಟರ್ ಗೆ ಸ್ಥಾನ ಕಲ್ಪಿಸಲೇಬೇಕು” ಎಂದು ಮಾಜಿ ನಾಯಕ ಆಗ್ರಹಿಸಿದ್ದಾರೆ.
“ನಾನು ಐಪಿಎಲ್ ಅವಧಿಯಿಂದಲೂ ಜೈಸ್ವಾಲ್ ಅವರ ಬ್ಯಾಟಿಂಗ್ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೇನೆ. ಆದರೆ ರೆಡ್ ಬಾಲ್ ಕ್ರಿಕೆಟ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಮತ್ತೊಂದು ಬ್ಯಾಟಿಂಗ್ ಝಲಕ್ ಅನ್ನು ಪ್ರದರ್ಶಿಸಿರುವ ಎಡಗೈ ಆಟಗಾರ ಇಲ್ಲೂ ಯಶಸ್ಸು ಕಾಣುವ ಭರವಸೆ ಮೂಡಿಸಿದ್ದು, ಅವರು ದೀರ್ಘ ಕಾಲದವರೆಗೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳುವ ಭರವಸೆ ನನಗಿದೆ,” ಎಂದು ಬಿಸಿಸಿಐ ಮಾಜಿ ಅಧ್ಯಕ್ಷ ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed