ಆರ್.ಆರ್.ನಗರ ಉಪಚುನಾವಣೆ-ಮುನಿರತ್ನ ಪರ ನಟ ದರ್ಶನ್ ರೋಡ್ ಶೋ

ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಾಗಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಬಹಿರಂಗ ಪ್ರಚಾರ ನಡೆಸಲು ಇಂದು ಬೆಳಗ್ಗೆ 11:30ಕ್ಕೆ ಸರಿಯಾಗಿ ನಟ ದರ್ಶನ್ ತೂಗುದೀಪ ಆಗಮಿಸಿದರು.
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಜೊತೆ ಕಾರಿನಲ್ಲಿ ಆಗಮಿಸಿದ ನಟ ದರ್ಶನ್ ಅವರನ್ನು ಬಿಜೆಪಿ ಅಭ್ಯರ್ಥಿ ಮುನಿರತ್ನ ಆಹ್ವಾನಿಸಿ ರೋಡ್ ಶೋಗಾಗಿ ತೆರೆದ ವಾಹನದಲ್ಲಿ ಪ್ರಚಾರ ನಡೆಸಲು ಕರೆದೊಯ್ದರು.
ನಟ ದರ್ಶನ್ ಅವರು ಇಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಯಶವಂತಪುರ ರೈಲ್ವೆ ನಿಲ್ದಾಣದಿಂದ ತೆರೆದ ವಾಹನದಲ್ಲಿ ಭಾರಿ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಮತ್ತು ತಮ್ಮ ಅಭಿಮಾನಿಗಳೊಂದಿಗೆ ರೋಡ್ ಶೋ ನಡೆಸಲು ಹೊರಟರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್,ಕಂದಾಯ ಸಚಿವ ಆರ್.ಅಶೋಕ್,ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸಹ ನಟ ದರ್ಶನ್ ಜೊತೆ ರೋಡ್ ಶೋನಲ್ಲಿ ಬಿಜೆಪಿ ಪರ ಮತ ಯಾಚಿಸುತ್ತಿದ್ದಾರೆ.
ಈ ವೇಳೆ ಮಾತನಾಡಿದ ನಟ ದರ್ಶನ್ “ನಾನು ಪಕ್ಷ ನೋಡಿ ಪ್ರಚಾರ ಮಾಡುವುದಿಲ್ಲ,ವ್ಯಕ್ತಿ ನೋಡಿ ಪ್ರಚಾರ ಮಾಡುತ್ತೇನೆ,ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕೆಲಸಗಳಿಲ್ಲದೆ ಹಣವಿಲ್ಲದೆ ಪರದಾಡುತ್ತಿದ್ದ ಜನರಿಗೆ ಮುನಿರತ್ನ ಅವರು ಮಾಡಿದ ದಾಸೋಹ ಕಾರ್ಯವನ್ನು ನೋಡಿದ್ದೇನೆ,ಹಾಗಾಗಿ ಇಂದು ಮಾನವೀಯತೆಯ ದೃಷ್ಟಿಯಿಂದ ಅವರ ಪರವಾಗಿ ಪ್ರಚಾರ ನಡೆಸಲು ಬಂದಿದ್ದೇನೆ” ಎಂದು ಹೇಳಿದರು.
ನಟ ದರ್ಶನ್ ಅವರು ಇಂದು ಆರ್.ಆರ್.ನಗರ ಕ್ಷೇತ್ರದ 9 ವಾರ್ಡ್ ಗಳಲ್ಲಿ ಇಂದು ಮತಯಾಚಿಸಲಿದ್ದಾರೆ.
ಜೆ.ಪಿ.ಪಾರ್ಕ್ ವಾರ್ಡ್,ಜಾಲಹಳ್ಳಿ ವಿಲೇಜ್,ಎಚ್.ಎಂ.ಟಿ,
ಪೀಣ್ಯ ಮಾರ್ಗವಾಗಿ ಗೊರಗುಂಟೆಪಾಳ್ಯ,ಲಕ್ಷ್ಮಿದೇವಿನಗರದ ಕೂಲಿನಗರ ಸೇತುವೆಯ ಮೂಲಕ ಲಗ್ಗೆರೆಯ ಆಲದಮರ ಸರ್ಕಲ್,ಕೊಟ್ಟಿಗೆಪಾಳ್ಯದ ಪೈಪ್ ಲೈನ್,ಸುಂಕದಕಟ್ಟೆ,ಬಿಡಿಎ ಕಾಂಪ್ಲೆಕ್ಸ್,ಜ್ಞಾನಭಾರತಿಯ ಕೆಂಗುಂಟೆ,ಮಲ್ಲತ್ತಹಳ್ಳಿ ಪ್ರದೇಶಗಳಲ್ಲಿ ನಟ ದರ್ಶನ್ ಆರ್.ಆರ್.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ರೋಡ್ ಶೋ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಹಲವು ಕಡೆ ನಟ ದರ್ಶನ್ ಭಾಷಣ ಮಾಡಲಿದ್ದಾರೆ. ತಮ್ಮ ಮೆಚ್ಚಿನ ಸ್ಟಾರ್ ನಟ ದರ್ಶನ್ ತೂಗುದೀಪ್ ಅವರನ್ನು ನೋಡಲು ಮಕ್ಕಳು,ಮಹಿಳೆಯರು,
ಯುವಜನರು,ಹಿರಿಯ ನಾಗರಿಕರು ರಸ್ತೆಗಳಲ್ಲಿ ನೋಡಲು
ಮುಗಿಬೀಳುತ್ತಿರುವ ಕಾರಣ ಕೊರೊನಾ ಮಾರ್ಗಸೂಚಿಯಂತೆ ನಡೆಯಬೇಕಿದ್ದ ಆರ್.ಆರ್‌.ನಗರ ಉಪಚುನಾವಣೆಯಲ್ಲಿ ಇಂದು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಜನರು ತಳ್ಳಾಟ-ನೂಕಾಟ ನಡೆಸುತ್ತಿದ್ದದು ಕಂಡುಬಂತು.
ಆದರೆ ಪೊಲೀಸರು ಮಾತ್ರ ಜನಜಂಗುಳಿಯನ್ನು ನಿಯಂತ್ರಿಸಲು ಪರದಾಡುತ್ತಿರುವುದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಆತಂಕ ಮೂಡಿಸಿದೆ.
ಕೆ ಟಿವಿ ನ್ಯೂಸ್ ಬೆಂಗಳೂರು

Add Comment