ಕ್ಷೇತ್ರದ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಶುಲ್ಕ ನಾನೇ ಭರಿಸ್ತೇನೆ : ಶಾಸಕ ಕೆ.ಎಂ.ಉದಯ್

0

ಮಂಡ್ಯ : ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಮದ್ದೂರು ವಿಧಾನ ಸಭಾ ಕ್ಷೇತ್ರದ ಸರ್ಕಾರಿ ಶಾಲೆಯ ( 1 ರಿಂದ 10 ನೇ ತರಗತಿವರೆಗಿನ ) ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಭರಿಸಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

 

ಮದ್ದೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಚುನಾವಣಾ ಪೂರ್ವದಲ್ಲಿ ಟ್ರಸ್ಟ್ ವತಿಯಿಂದ ಮಾರ್ಚ್ ತಿಂಗಳಲ್ಲಿ ಹಮ್ಮಿಕೊಂಡಿದ್ದ ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಶುಲ್ಕವನ್ನು ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಭರಿಸಲಾಗುವುದು ಎಂದು ಭರವಸೆ ನೀಡಿದ್ದೆ. ಅದರಂತೆ ಕ್ಷೇತ್ರದ ಸರ್ಕಾರಿ ಶಾಲೆಯ ಮಕ್ಕಳ ಶಾಲಾ ಶುಲ್ಕವನ್ನು ಟ್ರಸ್ಟ್ ವತಿಯಿಂದ ಭರಿಸಲಾಗುವುದು. ಆದ್ದರಿಂದ ಪಾಲಕರು ಸರ್ಕಾರಿ ಶಾಲೆಗಳಿಗೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ನನ್ನ ಅಧಿಕಾರವಧಿಯಲ್ಲಿ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಹಾಗೂ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ, ಶಿಥಿಲ ಕಟ್ಟಡಗಳು, ಶೌಚಗೃಹಗಳ, ಕ್ರೀಡಾಂಗಣ, ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದೆ.

ಆದರೆ, ಈಗಾಗಲೇ ಕೆಲ ಶಾಲೆಗಳ ಸಮಸ್ಯೆಗಳಿಗೆ ಟ್ರಸ್ಟ್ ವತಿಯಿಂದ ಪರಿಹಾರ ಒದಗಿಸಲಾಗಿದೆ. ಅತೀ ಅವಶ್ಯಕ ಇರುವ ಶಾಲೆಗಳಿಗೆ ಶಿಕ್ಷಕರ ಕೊರತೆ ನೀಗಿಸಲು ನನ್ನ ಸ್ವಂತ ಖರ್ಚಿನಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ನೀಡಲು ತೀರ್ಮಾನಿಸಲಾಗಿದೆ.

ಹಾಗೂ ಮುಂದಿನ ದಿನಗಳಲ್ಲಿ ಈ ಸಂಬಂಧ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ವಿಶೇಷ ಅನುದಾನ ತರುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಇನ್ನು ಕ್ಷೇತ್ರದಾದ್ಯಂತ ಮೀತಿ ಮೀರಿದ ಭ್ರಷ್ಟಾಚಾರ ನಡೆಯುತ್ತಿತ್ತು. ಆದರೆ, ಇನ್ನು ಮುಂದೆ ಇಂತಹ ಭ್ರಷ್ಟಾಚಾರ ಆಡಳಿತ ನಡೆಯಲ್ಲ. ಇದಕ್ಕೆಲ್ಲ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೆಲ ದಿನಗಳಲ್ಲಿಯೇ ತಾಲೂಕು ಕಛೇರಿಯಲ್ಲಿ ಶಾಸಕರ ಕಛೇರಿ ತೆರಯಲಾಗುತ್ತಿದ್ದು, ಹೆಚ್ಚಿನ ಸಮಯವನ್ನು ಅಲ್ಲೆ ಮೀಸಲಿಡಲಾಗುವುದು. ಸಾರ್ವಜನಿಕರು ಮುಕ್ತವಾಗಿ ಭೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಅಧಿಕಾರಿಗಳು ರೈತರಿಗೆ ಮತ್ತು ಸಾರ್ವಜನಿಕರಿಗೆ ತ್ವರಿತ ಗತಿಯಲ್ಲಿ ಕೆಲಸ ಮಾಡಿಕೊಡಬೇಕು. ಯಾವುದೇ ಅಧಿಕಾರಿಯೂ ಸರ್ಕಾರಿ ಕೆಲಸ ಮಾಡಿ ಕೊಡಲು ಲಂಚಕ್ಕೆ ಬೇಡಿಕೆ ಇಡಬಾರದು. ಒಂದು ವೇಳೆ ಅಂತಹ ದೂರುಗಳು ಕೇಳಿ ಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಲೂಕಿನಲ್ಲಿ ನಡೆಯುತ್ತಿರುವ ಬೆಟ್ಟಿಂಗ್ ದಂಧೆಯನ್ನು ನಿಯಂತ್ರಿಸುವಂತೆ ಈಗಾಗಲೇ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ನು ಕೆಲ ದಿನಗಳಲ್ಲಿಯೇ ಅಧಿಕಾರಿಗಳ ಜೊತೆಗೂಡಿ ಗ್ರಾಮ ಸಭೆ ನಡೆಸಿ ಸಾರ್ವಜನಿಕರ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು‌ ಆದಷ್ಟು ಬೇಗ ಸಮಸ್ಯೆಗಳಿಗೆ ಮುಕ್ತಿ ನೀಡಲಾಗುವುದು ಎಂದರು.

ಕಾಂಗ್ರೆಸ್ ಪಕ್ಷ ಚುನಾವಣಾ ಪೂರ್ವದಲ್ಲಿ ನೀಡಿದ ಗ್ಯಾರಂಟಿಗಳನ್ನು ಈಡೇರಿಸುವುದು ಶತಸಿದ್ಧವಾಗಿದೆ. ಈ ಬಗ್ಗೆ ರಾಜ್ಯದ ಜನತೆಗೆ ಯಾವುದೇ ಗೊಂದಲ ಬೇಡ. ಇದೀಗ ತಾನೇ ಸರ್ಕಾರ ರಚನೆಯಾಗಿ ಪೂರ್ಣ ಪ್ರಮಾಣದ ಮಂತ್ರಿಮಂಡಲ ಅಸ್ತಿತ್ವಕ್ಕೆ ಬಂದಿದೆ. ಗ್ಯಾರಂಟಿಗಳನ್ನು ಜಾರಿ ಮಾಡಲು ಕಾಲಾವಕಾಶ ಬೇಕಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಜಿ.ಪಂ ಮಾಜಿ ಸದಸ್ಯ ಚಂದೂಪುರ ಪಾಪಣ್ಣ, ಗ್ರಾ.ಪಂ. ಅಧ್ಯಕ್ಷ ಹರೀಶ್, ತಾ.ಪಂ.ಮಾಜಿ ಸದಸ್ಯ ತೈಲೂರು ಚಲುವರಾಜು, ಮುಖಂಡರಾದ ಮಧು, ಸತೀಶ್, ಯರಗನಹಳ್ಳಿ ಹರೀಶ್, ಯತೀಶ್, ಶಿವು ಮತ್ತಿತರರು ಇದ್ದರು.

About Author

Leave a Reply

Your email address will not be published. Required fields are marked *

You may have missed