ವರಿಷ್ಠರ ಮುಂದೆ BJP ಸೋಲಿಗೆ ಕಾರಣಗಳನ್ನು ಬಿಚ್ಚಿಟ್ಟ ಹಂಗಾಮಿ ಸಿಎಂ ಬೊಮ್ಮಾಯಿ

0

ಬೆಂಗಳೂರು: ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಹಂಗಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರ್‌ಎಸ್‌ಎಸ್‌ ನಾಯಕರನ್ನು ಭೇಟಿ ಮಾಡಿ ಚುನಾವಣೆಯ ಸೋಲು ಮತ್ತು ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಬಲಪಡಿಸುವ ಸಂಬಂಧ ಚರ್ಚೆ ನಡೆಸಿದರು.

ಚಾಮರಾಜಪೇಟೆಯಲ್ಲಿರುವ ಸಂಘ ಪರಿವಾರದ ಕೇಂದ್ರ ‘ಕೇಶವ ಕೃಪ’ಕ್ಕೆ ಭೇಟಿ ಮಾಡಿದ ಬೊಮ್ಮಾಯಿ ಅವರು ಪರಿವಾರದ ಮುಖಂಡರ ಮುಂದೆ ಸೋಲಿನ ಕಾರಣಗಳನ್ನು ಒಂದೊಂದಾಗಿ ವಿವರಿಸಿದರು.

ಕಾಂಗ್ರೆಸ್ಸಿನ ಗ್ಯಾರಂಟಿ ಭರವಸೆಗಳು ಜನರ ಮನಸ್ಸು ಗೆದ್ದವು. ಅವುಗಳನ್ನು ಈಡೇರಿಸುವುದು ಕಷ್ಟಎಂದರೂ ಜನರು ಅವುಗಳನ್ನು ಒಪ್ಪಿದರು. ಜತೆಗೆ ಲಿಂಗಾಯತ ಸಮುದಾಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷ ಹಬ್ಬಿಸಿದೆ ಎನ್ನಲಾದ ಸುಳ್ಳು ಸುದ್ದಿಗಳು ಮತ್ತು ಟಿಕೆಟ್‌ ಹಂಚಿಕೆಯಲ್ಲಿನ ಗೊಂದಲ ಪಕ್ಷಕ್ಕೆ ಪೆಟ್ಟು ಕೊಟ್ಟಿತು. ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡಿದವು. ಜತೆಗೆ ನಮ್ಮ ಸರ್ಕಾರದ ವಿರುದ್ಧ ಸತತವಾಗಿ ಭ್ರಷ್ಟಾಚಾರ ಆರೋಪವನ್ನು ಮಾಡುತ್ತಲೇ ನಷ್ಟತಂದೊಡ್ಡಿದರು ಎಂಬ ಮಾಹಿತಿಯನ್ನು ಬೊಮ್ಮಾಯಿ ನೀಡಿದರು ಎನ್ನಲಾಗಿದೆ.

ಇದೇ ವೇಳೆ ಬೊಮ್ಮಾಯಿ ಅವರ ಸಮಜಾಯಿಷಿಗೆ ಸಂಘ ಪರಿವಾರದ ಮುಖಂಡರು ಅಷ್ಟಾಗಿ ಸಮ್ಮತಿಸದಿದ್ದರೂ ಮುಂಬರುವ ಲೋಕಸಭಾ ಚುನಾವಣೆ ಗುರಿಯಾಗಿಸಿಕೊಂಡು ಈಗಿನಿಂದಲೇ ಪಕ್ಷ ಸಂಘಟನೆ ಬಲಪಡಿಸುವತ್ತ ಗಮನಹರಿಸಬೇಕು. ಯಾವುದೇ ಕಾರಣಕ್ಕೂ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದರು ಎಂದು ತಿಳಿದು ಬಂದಿದೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬೊಮ್ಮಾಯಿ ಅವರು, ಆರ್‌ಎಸ್‌ಎಸ್‌ ಮುಖಂಡರೊಂದಿಗೆ ಚುನಾವಣೆ ಫಲಿತಾಂಶದ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಬರುವಂತಹ ದಿನಗಳಲ್ಲಿ ಪಕ್ಷವನ್ನು ಮುಂದೆ ಹೇಗೆ ಸಂಘಟಿಸಬೇಕು ಎಂಬುದರ ಬಗ್ಗೆ ಚರ್ಚೆಯಾಗಿದೆ ಎಂದರು. ರಾಜ್ಯಾಧ್ಯಕ್ಷರು, ವರಿಷ್ಠರು ಜತೆಗೆ ಹಲವಾರು ಬಾರಿ ಚರ್ಚಿಸಿ ಬಿಜೆಪಿಯನ್ನು ಹೇಗೆ ಸಂಘಟನೆ ಮಾಡಬೇಕು ಎನ್ನುವ ತೀರ್ಮಾನ ಮಾಡುತ್ತೇವೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶಾಸಕರ ಸಭೆಯನ್ನು ಕರೆದಿಲ್ಲ. ಶಾಸಕರ ಸಭೆಯನ್ನು ರಾಜ್ಯಾಧ್ಯಕ್ಷರು ಕರೆಯಲಿದ್ದಾರೆ ಎಂದು ತಿಳಿಸಿದರು.

About Author

Leave a Reply

Your email address will not be published. Required fields are marked *

You may have missed