ಏ.18 ವರೆಗೆ ಹೊಸ ಮೀಸಲಾತಿ ಅನ್ವಯ : ಮುಸ್ಲಿಮರು, ಒಕ್ಕಲಿಗ & ಲಿಂಗಾಯತರ ಪರ ವಾದ ಏನಿತ್ತು?

0

ವದೆಹಲಿ: ಏಪ್ರಿಲ್ 18 ವರೆಗೂ ಹೊಸ ಮೀಸಲಾತಿ (Reservation) ನಿಯಮದ ಅನ್ವಯ ನೇಮಕಾತಿ ಮತ್ತು ಶೈಕ್ಷಣಿಕ ಪ್ರವೇಶಾತಿ ನೀಡದಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ (Supreme Court) ಸೂಚನೆ ನೀಡಿದೆ.

 

ಮುಸ್ಲಿಂ (Muslims) ಸಮುದಾಯದ 4% ಮೀಸಲಾತಿ ರದ್ದು ಮಾಡಿದ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಸುದೀರ್ಘ ವಿಚಾರಣೆ ಇಂದು ನ್ಯಾ.ಕೆ.ಎಂ ಜೋಸೆಫ್ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ನಡೆಯಿತು.

ಅರ್ಜಿದಾರ ಗುಲಾಮ್ ರಸೂಲ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ದುಷ್ಯಂತ್ ದವೆ, ಮುಸ್ಲಿಂ ಮೀಸಲಾತಿ ರದ್ದು ಮಾಡಿ ಸರ್ಕಾರ ಈ‌ ಮೀಸಲಾತಿಯನ್ನು ಇತರೆ ಜಾತಿಗಳಿಗೆ ನೀಡಿದೆ. ಈ ಮೂಲಕ ಸರ್ಕಾರ ಸುಪ್ರೀಂಕೋರ್ಟ್ ಹಿಂದಿನ ಆದೇಶಗಳನ್ನು ಉಲ್ಲಂಘಿಸಿದೆ. ಇದೊಂದು ಅಸಾಂವಿಧಾನಿಕ ನಿರ್ಧಾರವಾಗಿದೆ. ರಾತ್ರೋರಾತ್ರಿ ಚುನಾವಣೆ ಸಂದರ್ಭದಲ್ಲಿ ಈ ನಿರ್ಧಾರ ಕೈಗೊಳ್ಳುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.

ಯಾವುದೇ ವರದಿಯನ್ನು ಪಡೆಯದೇ ಮೀಸಲಾತಿ ರದ್ದು ಮಾಡಿರುವುದು 1996ರ ಕಾಯ್ದೆಗೆ ವಿರುದ್ಧವಾಗಿದೆ. ಮುಸ್ಲಿಂ ಸಮುದಾಯವನ್ನು ಜನರಲ್‌ ಕೆಟಗರಿಗೆ ಸೇರ್ಪಡೆ ಮಾಡಿರುವುದು ಆಘಾತಕಾರಿ ಬೆಳವಣಿಗೆ ಎಂದು ವಾದ ಮಂಡಿಸಿದರು.

ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೊಹಟಗಿ, ಎಲ್ಲ‌ ಮುಸ್ಲಿಮರು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಆಧಾರದಲ್ಲಿ ಪರಿಗಣಿಸುವುದು ತಪ್ಪು. ಕರ್ನಾಟಕದ ಎಲ್ಲಾ ಮುಸ್ಲಿಮರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂದು ಹೇಗೆ ಹೇಳುತ್ತೀರಿ? ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಬಾರದು ಎಂದು ಎರಡು ಹೈಕೋರ್ಟ್‌ಗಳ ಸಾಂವಿಧಾನಿಕ ಪೀಠ ಹೇಳಿದೆ. ಇದು ಕೇವಲ ಮೀಸಲಾತಿ ರದ್ದು ವಿಚಾರ ಅಲ್ಲ. ಎರಡು ಸಮುದಾಯಗಳಿಗೆ ಮೀಸಲಾತಿ ನೀಡಿರುವ ವಿಚಾರ ಎಂದರು.

ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮುಸ್ಲಿಮರಿಗೆ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡಲಾಗಿದೆಯೇ ಹೊರತು ಯಾವುದೇ ಪ್ರಯೋಗಿಕ ದತ್ತಾಂಶ ಇಲ್ಲ ಎಂದು ವಾದಿಸಿದರು.

About Author

Leave a Reply

Your email address will not be published. Required fields are marked *

You may have missed