ನಾಮಪತ್ರ ಸಲ್ಲಿಕೆ ವೇಳೆ ಬಯಲಾಯ್ತು ಅಭ್ಯರ್ಥಿಗಳ ಕೋಟಿ-ಕೋಟಿ ಆಸ್ತಿ ವಿವರ!

0

ಬೆಂಗಳೂರುರಾಜಧಾನಿಯಲ್ಲಿ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಏಪ್ರಿಲ್ 15 ರಂದು ರಾಜಕೀಯ ಅತಿರಥ ಮಹಾರಥರು ಉಮೇದುವಾರಿಕೆ ಸಲ್ಲಿಸಿದರು. ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಕುಟುಂಬ ಸದಸ್ಯರು, ಹಿತೈಷಿಗಳು, ಬೆಂಬಲಿಗರು ಹಾಗೂ ಕಾರ್ಯಕರ್ತರ ದೊಡ್ಡ ಪಡೆಯೊಂದಿಗೆ ಬಂದು ನಾಮಪತ್ರ ಸಲ್ಲಿಸಿದರು.

ಮತ್ತೊಂದೆಡೆ ಪಕ್ಷೇತರರು ಪರಸ್ಪರ ಪೈಪೋಟಿಗಿಳಿದು ನಾಮಪತ್ರ ಹಾಕಿದರು. ಒಟ್ಟಾರೆ 41 ಮಂದಿ ಉಮೇದುವಾರಿಕೆ ಸಲ್ಲಿಸಿದರು. ನಾಮಪತ್ರ ಸ್ವೀಕಾರ ಪ್ರಕ್ರಿಯೆ ನಡೆದ ಚುನಾವಣಾಧಿಕಾರಿ ಕಚೇರಿಗಳ ಬಳಿ ಜನಜಾತ್ರೆಯೇ ಸೇರಿತ್ತು. ನಾಮಪತ್ರ ಸಲ್ಲಿಕೆಗೂ ಮುನ್ನ ಮತ್ತು ನಂತರ ಬೆಂಬಲಿಗರು ತಮ್ಮ ಅಭ್ಯರ್ಥಿಗಳ ಪರ ಜಯಘೋಷ ಮೊಳಗಿಸಿದರು.

ಯಶವಂತಪುರ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿ ಜವರಾಯಿಗೌಡ, ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿಯ ಎನ್‌.ಚಂದ್ರ ಮತ್ತು ಬಿಟಿಎಂ ಲೇಔಟ್‌ ಕ್ಷೇತ್ರದಲ್ಲಿ ಬಿಜೆಪಿಯ ಕೆ.ಆರ್‌.ಶ್ರೀಧರ್‌, ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬಿಜೆಪಿಯ ಎಚ್‌.ಸಿ.ತಮ್ಮೇಶ್‌ ಗೌಡ ನಾಮಪತ್ರ ಸಲ್ಲಿಸಿದವರಲ್ಲಿ ಪ್ರಮುಖರು. ಕರ್ನಾಟಕ ರಾಷ್ಟ್ರ ಸಮಿತಿ, ಆಪ್‌, ಉತ್ತಮ ಪ್ರಜಾಕೀಯ ಪಕ್ಷ, ಸಾರ್ವಜನಿಕ ಆದರ್ಶ ಸೇನಾ, ಇಂಡಿಯನ್‌ ಮೂವ್‌ಮೆಂಟ್‌ ಪಾರ್ಟಿ ಅಭ್ಯರ್ಥಿಗಳು ಸಹ ನಾಮಪತ್ರ ಸಲ್ಲಿಸಿದರು. ಅಭ್ಯರ್ಥಿಗಳು ಇದಕ್ಕೂ ಮುನ್ನ ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು.

ಕೋಟ್ಯಧಿಪತಿಜವರಾಯಿಗೌಡ
ಯಶವಂತಪುರ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ ಟಿ.ಎನ್‌.ಜವರಾಯಿಗೌಡ, ತಮ್ಮ ಬಳಿ 5.13 ಲಕ್ಷ ರೂ., ಪತ್ನಿ ಬಳಿ 2.33 ಲಕ್ಷ ರೂ. ಮತ್ತು ಕುಟುಂಬ ಸದಸ್ಯರ ಬಳಿ 2.29 ಲಕ್ಷ ರೂ. ನಗದು ಇದೆ. ತಾವು ಪಾಲುದಾರರಾಗಿರುವ ಸಂತೋಷ್‌ ಎಂಟರ್‌ಪ್ರೈಸಸ್‌ನಲ್ಲಿ2.99 ಲಕ್ಷ ರೂ. ಇದೆ. ತಮ್ಮ ವಿರುದ್ಧ 3 ಕ್ರಿಮಿನಲ್‌ ಪ್ರಕರಣಗಳಿವೆ ಎಂದು ನಾಮಪತ್ರದ ಜತೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.

ವಿವಿಧ ಬ್ಯಾಂಕ್‌ಗಳಲ್ಲಿನ ತಮ್ಮ ಖಾತೆಗಳಲ್ಲಿ15.56 ಕೋಟಿ ರೂ., ಪತ್ನಿಯ ಖಾತೆಗಳಲ್ಲಿ11.61 ಕೋಟಿ ರೂ. ಮತ್ತು ಕುಟುಂಬ ಸದಸ್ಯರ ಖಾತೆಗಳಲ್ಲಿ6.26 ಕೋಟಿ ರೂ., ಸಂತೋಷ್‌ ಎಂಟರ್‌ಪ್ರೈಸಸ್‌ನಲ್ಲಿ14.33 ಕೋಟಿ ರೂ. ಠೇವಣಿ ಹಾಗೂ ಷೇರು ಹೂಡಿಕೆಯಿದೆ. ತಮ್ಮ ಬಳಿ 21.22 ಲಕ್ಷ ರೂ. ಬೆಲೆ ಬಾಳುವ 685 ಗ್ರಾಂ ಚಿನ್ನಾಭರಣ, ಪತ್ನಿ ಬಳಿ 2.67 ಕೋಟಿ ರೂ. ಮೌಲ್ಯದ ಸುಮಾರು ಎಂಟೂವರೆ ಕೆ.ಜಿ. ಚಿನ್ನಾಭರಣ ಇವೆ ಎಂದು ಘೋಷಿಸಿದ್ದಾರೆ.

ಕೃಷಿಯೇತರ ಭೂಮಿ, ವಾಣಿಜ್ಯ ಮತ್ತು ವಸತಿ ಕಟ್ಟಡಗಳು ಸೇರಿದಂತೆ ತಮ್ಮ ಹೆಸರಿನಲ್ಲಿ56.71 ಕೋಟಿ ರೂ. ಬೆಲೆ ಬಾಳುವ ಮತ್ತು ಪತ್ನಿ ಹೆಸರಿನಲ್ಲಿ87.10 ಕೋಟಿ ರೂ. ಹಾಗೂ ಕುಟುಂಬ ಸಂಬಂಧಿ ಹೆಸರಿನಲ್ಲಿ 5.33 ಕೋಟಿ ರೂ., ಸಂತೋಷ್‌ ಎಂಟರ್‌ ಪ್ರೈಸಸ್‌ ಹೆಸರಿನಲ್ಲಿ8.94 ಕೋಟಿ ರೂ. ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ 5.33 ಕೋಟಿ ರೂ. ಬೆಲೆ ಬಾಳುವ ಸ್ಥಿರಾಸ್ತಿ ಇದೆ. ಕುಟುಂಬ ಸದಸ್ಯರು ಸೇರಿದಂತೆ ಒಟ್ಟಾರೆ 71.48 ಕೋಟಿ ರೂ. ಸಾಲ ಇದೆ. ಬೆಂಜ್‌ ಕಾರ್‌ ಸೇರಿದಂತೆ 2 ಕಾರುಗಳಿವೆ ಎಂದು ಜವರಾಯಿಗೌಡ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಶ್ರೀಧರ್‌ 180 ಕೋಟಿಒಡೆಯ
ಬಿಟಿಎಂ ಲೇಔಟ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಕೆ.ಆರ್‌.ಶ್ರೀಧರ್‌ 180 ಕೋಟಿ ರೂ.ಗೂ ಅಧಿಕ ಆಸ್ತಿಯ ಒಡೆಯ. ತಮ್ಮ ಬಳಿ 3.76 ಲಕ್ಷ ರೂ. ನಗದು ಮತ್ತು 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಇದೆ. ಜತೆಗೆ ಬ್ಯಾಂಕ್‌ಗಳಲ್ಲಿ 13 ಕೋಟಿ ರೂ. ಠೇವಣಿ ಇಟ್ಟಿದ್ದೇನೆ. ಪತ್ನಿ ಬಳಿಯೂ 1 ಕೋಟಿಗೂ ಅಧಿಕ ಮೊತ್ತದ ಒಡವೆಗಳಿವೆ. ಒಟ್ಟಾರೆ 43.83 ಕೋಟಿ ರೂ.ಗೂ ಅಧಿಕ ಮೊತ್ತದ ಚರಾಸ್ತಿ ಹೊಂದಿದ್ದೇನೆ ಎಂದು ಶ್ರೀಧರ್‌ ಪ್ರಮಾಣಪತ್ರದಲ್ಲಿ ಘೋಷಿಸಿದ್ದಾರೆ.

ಎಂ.ಚಂದ್ರಆಸ್ತಿವಿವರ
ಶಿವಾಜಿನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಎಂ.ಚಂದ್ರ ಅವರು ವಸತಿ ಕಟ್ಟಡ ಸೇರಿದಂತೆ 7.20 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಪತ್ನಿ ಹೆಸರಿನಲ್ಲಿ 2.95 ಕೋಟಿ ರೂ. ಬೆಲೆ ಬಾಳುವ ಆಸ್ತಿ ಇದೆ. ಅಲ್ಲದೆ, ಠೇವಣಿ, ಚಿನ್ನಾಭರಣ ಸೇರಿ ಬಳಿ 44.88 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪತ್ನಿ ಹೆಸರಿನಲ್ಲಿ17.61 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ. ಚಂದ್ರ ಅವರ ವಿರುದ್ಧ 2 ಕ್ರಿಮಿನಲ್‌ ಕೇಸ್‌ ಇವೆ. ಅವರು 60.79 ಲಕ್ಷ ರೂ. ಸಾಲ ಮಾಡಿದ್ದಾರೆ.

ಶಿವಾಜಿಆರ್‌.ಲಮಾಣಿಆಸ್ತಿ
ಮಹದೇವಪುರ ಕ್ಷೇತ್ರದಲ್ಲಿ ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ ಶಿವಾಜಿ ಆರ್‌.ಲಮಾಣಿ ಅವರು 1.76 ಕೋಟಿ ರೂ.ಗೂ ಅಧಿಕ ಮೊತ್ತದ ಚರಾಸ್ತಿ ಹಾಗೂ 2.35 ಕೋಟಿ ರೂ. ಬೆಲೆ ಬಾಳುವ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಪತ್ನಿಯ ಬಳಿ 3.52 ಲಕ್ಷ ರೂ. ಚರಾಸ್ತಿ ಇದೆ.

ತಮ್ಮೇಶ್ಗೌಡಆಸ್ತಿಎಷ್ಟು?
ಬ್ಯಾಟರಾಯನಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಎಚ್‌.ಸಿ.ತಮ್ಮೇಶ್‌ಗೌಡ ಅವರು, ತಮ್ಮ ಹಾಗೂ ಪತ್ನಿ, ಕುಟುಂಬ ಸದಸ್ಯರ ಬಳಿ 87.88 ಲಕ್ಷ ರೂ. ಮೌಲ್ಯದ ಚರಾಸ್ತಿ ಹಾಗೂ 3.74 ಕೋಟಿ ರೂ. ಬೆಲೆ ಬಾಳುವ ಸ್ಥಿರಾಸ್ತಿ ಇದೆ. ಒಟ್ಟಾರೆ 57.69 ಲಕ್ಷ ರೂ. ಸಾಲವಿದೆ ಎಂದು ಘೋಷಿಸಿಕೊಂಡಿದ್ದಾರೆ.

About Author

Leave a Reply

Your email address will not be published. Required fields are marked *

You may have missed