ಶಕ್ತಿ ಯೋಜನೆ ಜಾರಿ ಬೆನ್ನಲ್ಲೇ KSRTC ಸರ್ವರ್ ಡೌನ್

0

ಬೆಂಗಳೂರು : ರಾಜ್ಯದಲ್ಲಿ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಘೋಷಿಸಿ ಐದು ದಿನಗಳು ಕಳೆದಿವೆ. ಇದರ ಬೆನ್ನಲ್ಲಿಯೇ ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ ಮತ್ತು ಆಪ್‌ ಕೆಲಸ ಮಾಡುತ್ತಿಲ್ಲ. ತಾಂತ್ರಿಕ ಕಾರಣಗಳಿಂದ ಸರ್ವರ್‌ ಡೌನ್‌ ಆಗಿದ್ದು, ಪ್ರಯಾಣಿಕರಿಗೆ ಭಾರೀ ಸಮಸ್ಯೆಯಾಗಿದೆ.

ಸೀಟ್‌ ಬುಕ್ಕಿಂಗ್‌ ಆಗುತ್ತಿಲ್ಲ. ಬ್ಯಾಂಕ್‌ನಿಂದ ಹಣ ಕಡಿತಗೊಂಡರೂ ಟಿಕೆಟ್‌ ಬುಕ್‌ ಆಗುತ್ತಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ ಹಾಗೂ ಆಪ್‌ ಕೆಲಸ ಮಾಡುತ್ತಿಲ್ಲ ಎಂದು ಪ್ರಯಾಣಿಕರು ಟ್ವಿಟರ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮ ಬ್ಯಾಂಕ್‌ ಅಕೌಂಟ್‌ನಿಂದ ಹಣ ಕಡಿತಗೊಳ್ಳುತ್ತಿದೆ. ಆದರೆ, ಟಿಕೆಟ್‌ ಮಾತ್ರ ಬುಕ್‌ ಆಗುತ್ತಿಲ್ಲ ಎಂದು ಟ್ವಿಟರ್‌ನಲ್ಲಿ ಕೆಎಸ್‌ಆರ್‌ಟಿಸಿಗೆ ಟ್ಯಾಗ್‌ ಮಾಡಿ ಸ್ಕ್ರೀನ್‌ ಶಾಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹಲವರ ಹಣ ಕಡಿತಗೊಂಡಿದ್ದು, ಹಣ ವಾಪಸ್‌ ಬರುತ್ತೋ ಇಲ್ಲವೋ ಎಂಬ ಚಿಂತೆಯಲ್ಲಿದ್ದಾರೆ.

ಭಾಗಶಃ ಎಲ್ಲ ಟ್ವೀಟ್‌ಗಳಿಗೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಪ್ರತಿಕ್ರಿಯಿಸುತ್ತಿದ್ದಾರೆ. ನಿಮ್ಮ ಹಣ ಕಡಿತಗೊಂಡಿದ್ದರೆ 5 ರಿಂದ 7 ಬ್ಯಾಂಕ್‌ ವ್ಯವಹಾರಗಳ ದಿನಗಳಲ್ಲಿ ವಾಪಸ್‌ ನಿಮ್ಮ ಖಾತೆಗೆ ಹಣ ಬರಲಿದೆ. ಅದಲ್ಲದೇ ತಾಂತ್ರಿಕ ಕಾರಣಗಳಿಂದ ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ ಕೆಲಸ ಮಾಡುತ್ತಿಲ್ಲ. ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ, ಅಡಚಣೆಗಾಗಿ ವಿಷಾದಿಸುತ್ತೇವೆ ಎಂಬ ಸಿದ್ಧ ಉತ್ತರ @ksrtc_journeys ಟ್ವಿಟರ್‌ ಹ್ಯಾಂಡಲ್‌ನಿಂದ ಬರುತ್ತಿದೆ.

ಜೂನ್‌ 11 ರಿಂದ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಅವಕಾಶವನ್ನು ಕರ್ನಾಟಕದಲ್ಲಿ ನೀಡಲಾಗಿದೆ. ಇದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ಗಳನ್ನು ಬುಕ್‌ ಮಾಡಲು ಮುಂದಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಸಾಮಾನ್ಯ ಬಸ್‌ಗಳಿಗೆ ಮಹಿಳೆಯರಿಗೆ ಟಿಕೆಟ್‌ ಬುಕ್‌ ಮಾಡಲು ಕೆಎಸ್‌ಆರ್‌ಟಿಸಿ ಆಪ್‌ನಲ್ಲಿ ಅವಕಾಶ ನೀಡಲಾಗಿದೆ. ಇಲ್ಲಿ 20 ರೂ ಪಾವತಿಸಿ ಮಹಿಳೆಯರು ಟಿಕೆಟ್‌ ಅನ್ನು ಬುಕ್‌ ಮಾಡಬೇಕಿದೆ. ಒಂದೇ ಬಾರಿಗೆ ಬಹಳಷ್ಟು ಜನ ಟಿಕೆಟ್‌ ಬುಕ್‌ ಮಾಡಲು ಮುಂದಾಗಿದ್ದರಿಂದ ಸರ್ವರ್‌ ಡೌನ್‌ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಕೆಎಸ್‌ಆರ್‌ಟಿಸಿ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.

About Author

Leave a Reply

Your email address will not be published. Required fields are marked *

You may have missed