ಕದ್ದ ಚಿನ್ನ ನಕಲಿ ಎಂದು ಎಸೆದು ಹೋಗಿದ್ದ ಆರೋಪಿ ಅರೆಸ್ಟ್

0
ಬೆಂಗಳೂರು: ಕದ್ದ ಚಿನ್ನ ನಕಲಿ ಎಂದು ಎಸೆದು ಹೋಗಿದ್ದ ಆರೋಪಿಯನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜೇಶ್ ಅಲಿಯಾಸ್ ಕ್ರ್ಯಾಕ್ ಬಂಧಿತ. ಆರೋಪಿಯಿಂದ 19.05 ಲಕ್ಷ ರೂ ಮೌಲ್ಯದ 388 ಗ್ರಾಂ ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ನವೆಂಬರ್ 20ರಂದು ರಾಮಮೂರ್ತಿ ನಗರದ ಕುವೆಂಪು ಲೇಔಟ್​ನ ಮನೆಯೊಂದರ ಬಳಿ ಬಂದಿದ್ದ ಆರೋಪಿ, ಮೊದಲು ಮನೆ ಮುಂದಿನ ಸಿಸಿಟಿವಿಗಳನ್ನು ತಿರುಗಿಸಿ ಒಳಗೆ ನುಗ್ಗಿದ್ದ. ಆದರೆ ಮನೆಯೊಳಗಿನ ಸಿಸಿಟಿವಿಗಳನ್ನು ಗಮನಿಸದೇ ಮುಸುಕು ತೆಗೆದು ಕಳ್ಳತನ ಮಾಡಿದ್ದಾನೆ.
ಬಳಿಕ ಕದ್ದ ಚಿನ್ನಾಭರಣವನ್ನು ಹೊಸೂರಿನಲ್ಲಿ ಮಾರಾಟ ಮಾಡಲು ಹೋಗಿದ್ದ.ಈ ವೇಳೆ ಜ್ಯುವೆಲ್ಲರಿ ಶಾಪ್ ಮಾಲೀಕ ಇದು ನಕಲಿ ಚಿನ್ನವೆಂದು ಹೇಳಿ ಕಳುಹಿಸಿದ್ದಾರೆ. ಕದ್ದ ಚಿನ್ನಾಭರಣ ನಕಲಿಯೆಂದು ತಿಳಿದ ಆರೋಪಿ ಬೇಸರದಲ್ಲಿ ಹೊಸೂರಿನ ರಸ್ತೆ ಬದಿ ಕಸದಲ್ಲಿ ಚಿನ್ನಾಭರಣ ಎಸೆದು ತಲೆಮರೆಸಿಕೊಂಡಿದ್ದನು. ಚಿನ್ನಾಭರಣ ಕಳ್ಳತನವಾದ ಬಗ್ಗೆ ಮನೆಯ ಮಾಲೀಕ ಮಂಜುನಾಥ್ ರಾಮಮೂರ್ತಿ ನಗರ ಠಾಣೆಗೆ ದೂರು ದಾಖಲಿಸಿದ್ದರು. ಆರೋಪಿ ನಕಲಿ ಎಂದು ರಸ್ತೆ ಬದಿಯ ಕಸದಲ್ಲಿ ಎಸೆದಿದ್ದ 19.05 ಲಕ್ಷ ಮೌಲ್ಯದ 388 ಆಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *

You may have missed