ಎಳ್ಳು ಬೆಲ್ಲದ ಹಬ್ಬಕ್ಕೆ ಖರೀದಿ ಭರಾಟೆ ಜೋರು

0

ಬೆಂಗಳೂರು: ಸಂಕ್ರಾಂತಿ ಹಬ್ಬ ಹಿನ್ನೆಲೆಯಲ್ಲಿ ಎಳ್ಳು- ಬೆಲ್ಲ ಬೆಲೆ ದುಬಾರಿಯಾಗಿದ್ದು, ಗ್ರಾಹಕರಿಗೆ ಹೊರೆಯಾಗಿದೆ. ಆದರೂ ಬೆಲೆ ಏರಿಕೆ ಲೆಕ್ಕಿಸದೆ ಕೆ ಆರ್ ಮಾರುಕಟ್ಟೆ, ಯಶವಂತಪುರ, ಶಿವಾಜಿನಗರ, ಹಾಗೂ ಗಾಂಧಿಬಜಾರ್ ಮಾರುಕಟ್ಟೆಗಳಲ್ಲಿ ಎಳ್ಳು- ಬೆಲ್ಲ, ಸಕ್ಕರೆ ಅಚ್ಚು ಕಬ್ಬು, ಅವರೇಕಾಯಿ, ಗೆಣಸು, ಮಾವಿನ ಖರೀದಿ ಭರಾಟೆ ಜೋರಾಗಿತ್ತು.

ಮಾರುಕಟ್ಟೆಗಳಲ್ಲದೆ ರಾಜಾಜಿನಗರ, ಹೆಬ್ಬಾಳ, ಏರಿಯಾಗಳ ಸರ್ಕಲ್‌ಗಳಲ್ಲಿ ವ್ಯಾಪಾರ ಬಿರುಸಿನಿಂದ ಕೂಡಿತ್ತು.ಕಳೆದ ವರ್ಷ ಕೋವಿಡ್ ಪರಿಣಾಮ ಜನಸಾಮಾನ್ಯರು ಮಾರುಕಟ್ಟೆಗೆ ಬರಲು ಭಯಭೀತರಾಗಿದ್ದರು. ಈ ವರ್ಷ ಕೋವಿಡ್ ಭಯವಿಲ್ಲದ ಕಾರಣ ಗ್ರಾಹಕರು ಮಾರುಕಟ್ಟೆಗೆ ಖುಷಿಯಿಂದ ಬರುತ್ತಿದ್ದಾರೆ ಹೀಗಾಗಿ ವ್ಯಾಪಾರ ಜೋರಾಗಿ ನಡೆಯುತ್ತಿದೆ.

ಎಳ್ಳು ಬೆಲ್ಲ ತಯಾರಿಸಲು ಬೇಕಾದ ಎಳ್ಳು, ಕಡಲೆಕಾಯಿ, ಅಚ್ಚು ಬೆಲ್ಲದ ಬೆಲೆ ಏರಿಕೆಯಾಗಿದೆ. ಕಳೆದ ವರ್ಷ ಸಗಟು ಮಾರುಕಟ್ಟೆಯಲ್ಲಿ ಎಳ್ಳಿನ ದರ ಕೆಜಿಗೆ 170-180 ರೂ. ಇತ್ತು. ಈಗ 200-210 ರೂ. ಗೆ ಏರಿಕೆಯಾಗಿದೆ. ಅಚ್ಚು ಬೆಲ್ಲದ ದರ ಪ್ರತಿ ಕೆಜಿಗೆ 45-46 ರೂ.ಗಳಿಂದ 50-55 ರೂ.ಗೆ ಏರಿದೆ. ಕಡಲೆಕಾಯಿ ಬೀಜದ ದರ 130 ರೂ. ನಿಂದ 150 ರೂ. ಗೆ ಏರಿಕೆಯಾಗಿದೆ. ಉಂಡೆ ಕೊಬ್ಬರಿ 140-150 ರೂ.ಗೆ ಮಾರಾಟವಾಗುತ್ತಿದೆ.ರೆಡಿ ಮಿಕ್ಸ್ ಎಳ್ಳು ಬೆಲ್ಲದ ದರ 1 ಕೆಜಿಗೆ (ಸಗಟು ) 150-160 ರೂ. ಆಗಿದೆ. ಚಿಲ್ಲರೆ ದರದಲ್ಲಿ 170-180 ರೂ. ಗೆ ಮಾರಾಟವಾಗುತ್ತಿದೆ. ಕಬ್ಬು ಜೋಡಿಗೆ 100- 150 ರೂ.ಗೆ ಏರಿದೆ. ಹಸಿ ಕಡಲೆಕಾಯಿ ಕೆಜಿಗೆ 140-150 ರೂ, ಅವರೇಕಾಯಿ 70-80 ರೂ. ಹಾಗೂ ಗೆಣಸು ದರ 50-60 ರೂ.ಗೆ ಏರಿದೆ.

ಹೀರೆಕಾಯಿ, ಅವರೆಕಾಯಿ, ಬೆಂಡೆಕಾಯಿ ಹೊರತುಪಡಿಸಿ ಇತರ ತರಕಾರಿಗಳ ಬೆಲೆಗಳು ಮಂದಗತಿಯಲ್ಲಿವೆ. ಬೆಂಡೆಕಾಯಿ ಸಗಟು ಬೆಲೆ ಕೆ.ಜಿಗೆ 40-50 ರೂ, ಹೀರೆ ಕಾಯಿ 40-45 ರೂ. ಅವರೇಕಾಯಿ 50-60 ರೂ. ಗೆಣಸು 40-50 ರೂ.ಗೆ ಮಾರಾಟವಾಗುತ್ತಿದೆ. ಕ್ಯಾರೆಟ್ 30-40 ರೂ, ಹುರುಳಿಕಾಯಿ 25-35 ರೂ, ಬೀಟ್ರೂಟ್ 20-30 ರೂ. ಹೂಕೋಸು 40-45 ರೂ. ಗೆ ಮಾರಾಟವಾಗುತ್ತಿದೆ. ಬದನೆಕಾಯಿ 30-35 ರೂ, ಹಾಗಲಕಾಯಿ 40-50 ರೂ, ಕ್ಯಾಪ್ಸಿಕಮ್ 30-40 ರೂ, ಟೊಮೊಟೊ 10 -12 ರೂ.ಗೆ ಮಾರಾಟವಾಗುತ್ತಿದೆ.

About Author

Leave a Reply

Your email address will not be published. Required fields are marked *

You may have missed