ವಿರೂಪಾಕ್ಷಪ್ಪನನ್ನು ಸರ್ಕಾರವೇ ರಕ್ಷಿಸುತ್ತಿದೆ, ಬಂಧಿಸದೆ ನಾಟಕ ಮಾಡುತ್ತಿದ್ದಾರೆ: ಸಿಎಂ ವಿರುದ್ಧ ಸಿದ್ದರಾಮಯ್ಯ ಕಿಡಿ

0

ಮೈಸೂರು: ಮಾಡಾಳ್ ವಿರೂಪಾಕ್ಷಪ್ಪ (Madal Virupakshappa) ಪ್ರಕರಣ ಕುರಿತು ಮಾತನಾಡಿದ ಸಿದ್ದರಾಮಯ್ಯನವರು, ಸರ್ಕಾರವೇ ರಕ್ಷಣೆ ಮಾಡುತ್ತಿದೆ. ವಿರೂಪಾಕ್ಷಪ್ಪನವರು ಎಲ್ಲಿದ್ದಾರೆ ಎಂಬುವುದು ಸರ್ಕಾರಕ್ಕೆ ಗೊತ್ತಿದೆ. ವಿರೂಪಾಕ್ಷಪ್ಪ ತಮ್ಮ ಮನೆಯಲ್ಲಿಯೇ ಓಡಾಡಿಕೊಂಡಿದ್ದಾರೆ.

ಅವರನ್ನು ಬಂಧಿಸದೆ ಇವರು ನಾಟಕ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿರೂಪಾಕ್ಷಪ್ಪನವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಲು ಬಂದಾಗಲೇ ಅವರನ್ನು ಯಾಕೆ ಬಂಧಿಸಲಿಲ್ಲ? ಈಗ ಲುಕ್‌ಔಟ್ ನೋಟಿಸ್ ಹೆಸರಿನಲ್ಲಿ ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ ಅಷ್ಟೇ. ಭ್ರಷ್ಟಾಚಾರದ ಆರೋಪಕ್ಕೆ ಮಿಸ್ಟರ್ ಬೊಮ್ಮಾಯಿ (Basavaraj Bommai) ಅವರು ಸಾಕ್ಷಿ ಕೇಳುತ್ತಿದ್ದರು. ಈಗ ವಿರೂಪಾಕ್ಷಪ್ಪನವರು ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಆದರೆ ಇವರು ಏನು ಕ್ರಮ ತೆಗೆದುಕೊಂಡಿದ್ದಾರೆ? ಇವರಿಗೆ ಮುಜುಗರ ಆಗಿದೆ. ಆದರೂ ಇವರು ನಮಗೆ ಮುಜುಗರ ಇಲ್ಲಾ ಎಂದು ಹೇಳುತ್ತಿದ್ದಾರೆ. ಅಪ್ಪ ಅಧ್ಯಕ್ಷ ಆಗಿದ್ದ ಕಾರಣಕ್ಕೆ ಮಗನಿಗೆ ಲಂಚ ಕೊಡಲು ಬಂದಿದ್ದರು. ಹೀಗಾಗಿ ಅಪ್ಪನೇ ಮೊದಲ ಆರೋಪಿ. ಇವರನ್ನು ಮೊದಲು ಬಂಧಿಸಬೇಕು ಎಂದು ಒತ್ತಾಯಿಸಿದರು.

ಲೋಕಾಯುಕ್ತ ವಿಚಾರದಲ್ಲಿ ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ನಾನು ಲೋಕಾಯುಕ್ತ ಬಂದ್ ಮಾಡಲಿಲ್ಲ. ನಾನು ಲೋಕಾಯುಕ್ತ ಬಂದ್ ಮಾಡಿದ್ದರೆ ಇವತ್ತೇ ರಾಜೀನಾಮೆ ಕೊಡುತ್ತೇನೆ. ನಾವು ಭ್ರಷ್ಟಾಚಾರ ನಿಗ್ರಹಕ್ಕೆ ಎಸಿಬಿ ರಚನೆ ಮಾಡಿದ್ದೆವು ಅಷ್ಟೇ. ನಾವು ಲೋಕಾಯುಕ್ತದ ಯಾವ ಅಧಿಕಾರವನ್ನೂ ಕಿತ್ತುಕೊಂಡಿಲ್ಲ. ನಮ್ಮ ಕಾಲದಲ್ಲೂ ಲೋಕಾಯುಕ್ತ ಇತ್ತು. ಎಲ್ಲಾ ಸತ್ಯ ಗೊತ್ತಿದ್ದರೂ ಬೊಮ್ಮಾಯಿ ಸುಳ್ಳು ಹೇಳುತ್ತಿದ್ದಾರೆ ಎಂದು ಹರಿಹಾಯ್ದರು.

About Author

Leave a Reply

Your email address will not be published. Required fields are marked *

You may have missed