KEONICS ಅಧ್ಯಕ್ಷರಾಗಿ ಹರಿಕೃಷ್ಣ ಬಂಟ್ವಾಳ್ ಅಧಿಕಾರ ಸ್ವೀಕಾರ

ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾಗಿ ಹಿರಿಯ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಇಂದು ಅಧಿಕಾರ ಸ್ವೀಕರಿಸಿದರು. ಬೆಂಗಳೂರಿನ ನಿಗಮದ ಕೇಂದ್ರ ಕಚೇರಿಯಲ್ಲಿ ಪೂಜೆ ನೆರವೇರಿಸಿದ ಹರಿಕೃಷ್ಣ ಬಂಟ್ವಾಳ್ ಅವರು ಬಳಿಕ ವಿದ್ಯುಕ್ತವಾಗಿ ಅಧಿಕಾರ ಸ್ವೀಕರಿಸಿದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾವಿ ಮುಖಂಡರಾಗಿರುವ ಹರಿಕೃಷ್ಣ ಅವ್ರು ದಕ್ಷಿಣ ಕನ್ನಡ ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷರು ಆಗಿದ್ದರೆ. ತಮ್ಮ ೨೧ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿ ಸಮಾಜ ಸೇವೆ ಆರಂಭಿಸಿದರು. ಅದೇ ವರ್ಷದಲ್ಲಿ ಬಂಟ್ವಾಳ ಘಟಕದ ಶಿಕ್ಷಕ್ ಆಗಿ ನಿಯೋಜನೆಗೊಂಡರು. ೧೯೭೪ರಲ್ಲಿ ಬೌದ್ಧಿಕ್ ಪ್ರಮುಖ್ ಆಗಿ ಉನ್ನತ ಹುದ್ದೆಗೇರಿದರು. ೧೯೭೫ರ ತುರ್ತು ಪರಿಸ್ಥಿತಿ ವೇಳೆ ಬಂಟ್ವಾಳದಲ್ಲಿ ದೊಡ್ಡ ಮಟ್ಟದ ಹೋರಾಟದ ನೇತೃತ್ವ ವಹಿಸಿದ್ದರು. ಪರಿಣಾಮ ಜೈಲು ಶಿಕ್ಷೆ ಅನುಭವಿಸಬೇಕಾಯಿತು.

ಅಲ್ಲಿಂದ ನೇರವಾಗಿ ರಾಜಕೀಯಕ್ಕೆ ಧುಮುಕಿದ ಹರಿಕೃಷ್ಣ ಅವ್ರು ಜನಸಂಘದಲ್ಲಿ ಗುರುತಿಸಿಕೊಂಡರು. ಬಳಿಕ ಬಿಜೆಪಿ ಮೂಲಕ ರಾಜಕೀಯ ಪ್ರವೇಶಿಸಿದ ಹರಿಕೃಷ್ಣ ಅವರು ೧೯೮೦ರಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಪ್ರಮುಖ ಪಾತ್ರ ವಹಿಸಿದರು. ಆದ್ರೆ, ಕಾರಣಾಂತರಗಳಿಂದ ಪಕ್ಷ ತೊರೆದ ಹರಿಕೃಷ್ಣ ಅವರು ಕಾಂಗ್ರೆಸ್ ಸೇರಿದರು. ರಾಜ್ಯ ಕಾಂಗ್ರೆಸ್ ವಕ್ತಾರರಾಗಿಯೂ ಮುಂಚೂಣಿಯಲ್ಲಿ ಗುರುತಿಸಿಕೊಂಡರು.

೨೦೧೭ರಲ್ಲಿ ತಮ್ಮ ಮಾತೃ ಪಕ್ಷಕ್ಕೆ ಮರಳಿದ ಹರಿಕೃಷ್ಣ, ಬೃಹತ್ ಸಂಖ್ಯೆಯ ಕಾರ್ಯಕರ್ತರೊಂದಿಗೆ ಯಡಿಯೂರಪ್ಪ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ೨೦೧೮ರ ವಿಧಾನಸಭೆ ಚುನಾವಣೆ ಮತ್ತು ೨೦೧೯ರ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ್ರು.

ಬಿಲ್ಲವ ಸಮುದಾಯದ ಪ್ರಭಾವಿ ನಾಯಕರಾಗಿಯೂ ಹರಿಕೃಷ್ಣ ಗುರುತಿಸಿಕೊಂಡಿದ್ದಾರೆ. ಇಂಥ ಜನನಾಯಕನಿಗೆ ಮಹತ್ವದ ಕಿಯೋನಿಕ್ಸ್ ಅಧ್ಯಕ್ಷ ಸ್ಥಾನವನ್ನು ನೀಡುವ ಮೂಲಕ ಬಿಜೆಪಿ ಮತ್ತೆ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಿದೆ. ಅಷ್ಟೇ ಅಲ್ಲ ರಾಜಕೀಯವಾಗಿ ಪ್ರಾತಿನಿಧ್ಯದ ಕೊರತೆ ಎದುರಿಸುತ್ತಿರುವ ಬಿಲ್ಲವ ಸಮುದಾಯಕ್ಕೂ ಸ್ಥಾನಮಾನ ಕಲ್ಪಿಸಿದೆ. ಹರಿಕೃಷ್ಣ ಆಯ್ಕೆಯಿಂದ ಸಾವಿರಾರು ಕಾರ್ಯಕರ್ತರು ಸಂಭ್ರಮಿಸಿದ್ದಾರೆ.

ಇಂದು ರಾಜ್ಯ ಕಿಯೋನಿಕ್ಸ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಹರಿಕೃಷ್ಣ ಅವರು, ನಿಗಮದ ಅಭಿವೃದ್ಧಿ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಅವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ, ಕೆಟಿವಿ ಕನ್ನಡ ಸಂಸ್ಥಾಪಕ ಪ್ರೀತಮ್ ಕೆಮ್ಮಾಯಿ, ಹಾರ್ನ್ ಬಿಲ್ ಸಾಫ್ಟಕ್ ಸಂಸ್ಥಾಪಕ ನವೀನ ನಾಯಕ್ ಸೇರಿದಂತೆ ಹಲವಾರು ಉಪಸ್ಥಿತರಿದ್ದು ಶುಭ ಹಾರೈಸಿದರು.

Add Comment