KSDLಗೆ ಸೇರಿದ 37 ಎಕರೆ ಜಮೀನು ಖಾಸಗಿ ಹಸ್ತಾಂತರ: ವಿರೂಪಾಕ್ಷಪ್ಪ ವಿರುದ್ಧ ತನಿಖೆಗೆ ಎಎಪಿ ಆಗ್ರಹ

0

ಬೆಂಗಳೂರು: ಬೆಂಗಳೂರಿನ ಯಶವಂತಪುರದಲ್ಲಿ ಕರ್ನಾಟಕ ಸೋಪ್‌ ಹಾಗೂ ಡಿಟರ್ಜೆಂಟ್‌ ಲಿಮಿಟೆಡ್‌ಗೆ (KSDL) ಸೇರಿದ 37 ಎಕರೆ ಜಮೀನನ್ನು ಖಾಸಗಿಯವರಿಗೆ ನೀಡುತ್ತಿರುವುದಕ್ಕೆ ಸಂಬಂಧಿಸಿ, ಸಂಸ್ಥೆಯ ಅಧ್ಯಕ್ಷ ಹಾಗೂ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ವಿರುದ್ಧ ತನಿಖೆಯಾಗಬೇಕು ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್‌ ಕಾಳಪ್ಪ ಆಗ್ರಹಿಸಿದರು.

 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ರಿಜೇಶ್‌ ಕಾಳಪ್ಪ, “ಲೋಕಾಯುಕ್ತ ದಾಳಿಯಾದ ನಂತರ ಬಿಜೆಪಿ ಶಾಸಕ ಮಾಡಾಳ್‌ ವಿರೋಪಾಕ್ಷಪ್ಪರವರು ಸುಮಾರು ಐದು ದಿನಗಳು ನಾಪತ್ತೆಯಾಗಿದ್ದರು. ನಂತರ ಹೈಕೋರ್ಟ್‌ ಪ್ರತಿವಾದಿಗಳು ಇಲ್ಲದಿರುವಾಗ ಇವರಿಗೆ ಜಾಮೀನು ದೊರೆತಿದೆ. ಇದನ್ನು ಪ್ರಶ್ನಿಸಿ ಲೋಕಾಯುಕ್ತ ಅಧಿಕಾರಿಗಳು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಲೋಕಾಯುಕ್ತದ ಈ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಹಲವು ಜನಪ್ರತಿನಿಧಿಗಳ ಬಳಿ ದೊಡ್ಡ ಪ್ರಮಾಣದ ಹಣವಿದೆ ಎಂಬ ಮಾಹಿತಿ ನಮಗೆ ದೊರೆತಿದೆ. ಆದ್ದರಿಂದ ಲೋಕಾಯುಕ್ತ ಅಧಿಕಾರಿಗಳು ಪ್ರತಿ ಜನಪ್ರತಿನಿಧಿ ಮನೆ ಹಾಗೂ ಕಚೇರಿಗಳ ದಾಳಿ ಮಾಡಬೇಕು. ಇದರಿಂದ ಯಾರ್ಯಾರ ಬಳಿ ಏನೇನಿದೆ ಎಂಬ ಸತ್ಯ ಹೊರಬರಲಿದೆ” ಎಂದು ಹೇಳಿದರು.

“ಕರ್ನಾಟಕ ಸೋಪ್‌ ಹಾಗೂ ಡಿಟರ್ಜೆಂಟ್‌ ಲಿಮಿಟೆಡ್‌ (ಕೆಎಸ್‌ಡಿಎಲ್‌) ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದಕ್ಕೂ ಹೊರಗುತ್ತಿಗೆ ನೀಡುತ್ತಿದೆ. ಸೋಪು, ಸ್ಯಾನಿಟೈಸರ್‌ ಮುಂತಾದವುಗಳ ಉತ್ಪಾದನೆಯನ್ನು ಕೂಡ ಹೊರಗುತ್ತಿದೆ ನೀಡುತ್ತಿದೆ. ಆದ್ದರಿಂದ, ಬೆಂಗಳೂರಿನ ಯಶವಂತಪುರದಲ್ಲಿ ಕೆಎಸ್‌ಡಿಎಲ್‌ಗೆ ಸೇರಿದ 37 ಎಕರೆ ಜಾಗವಿದ್ದು, ಸರ್ಕಾರ ಇದನ್ನು ಖಾಸಗಿಯವರಿಗೆ ಮಾರಾಟ ಮಾಡಲು ಹೊರಟಿದೆ” ಎಂದು ಬ್ರಿಜೇಶ್‌ ಕಾಳಪ್ಪ ಹೇಳಿದರು.

“ದೆಹಲಿ ಡಿಸಿಎಂ ಮನೀಷ್‌ ಸಿಸೋದಿಯಾರವರ ಮನೆ ಹಾಗೂ ಕಚೇರಿ ಮೇಲೆ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳು ದಾಳಿ ಮಾಡಿ, ಸುಮಾರು ಸಾವಿರ ಅಧಿಕಾರಿಗಳ ತಂಡ ತನಿಖೆ ನಡೆಸುತ್ತಿದೆ. ಆದರೆ ಅಲ್ಲಿ ಯಾವುದೇ ದೊಡ್ಡ ಪ್ರಮಾಣದ ನಗದು ಪತ್ತೆಯಾಗಿಲ್ಲದಿದ್ದರೂ ಸುಮಾರು ಹತ್ತು ದಿನಗಳಿಂದ ಅವರು ಬಂಧನದಲ್ಲಿದ್ದಾರೆ. ಭಾರೀ ಪ್ರಮಾಣದ ನಗದು ಪತ್ತೆಯಾಗಿದ್ದರೂ ಮಾಡಾಳ್‌ ವಿರೂಪಾಕ್ಷಪ್ಪ ಬಂಧನದ ಭೀತಿಯಿಲ್ಲದೇ ಹೊರಗಿದ್ದಾರೆ” ಎಂದು ಬ್ರಿಜೇಶ್‌ ಕಾಳಪ್ಪ ಹೇಳಿದರು.

About Author

Leave a Reply

Your email address will not be published. Required fields are marked *

You may have missed