ನೂತನ ಸರ್ಕಾರಕ್ಕೆ ಆರಂಭದಲ್ಲೇ ಶುರುವಾದ ಸವಾಲುಗಳು: ಹೇಗೆ ಎದುರಿಸುತ್ತೆ!

0

ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಮಳೆ ಕಾಟ ಶುರುವಾಗಿದ್ದೇ ಒಂದು ದೊಡ್ಡ ಸವಾಲು. ಇದರಿಂದಲೇ ಅವರಿಗೆ ಸಮಸ್ಯೆಗಳ ಸರಮಾಲೆ ಶುರುವಾಗಿದೆ.ಹಾಗಾದ್ರೆ ಇನ್ಮುಂದೆ ಹೊಸ ಸರ್ಕಾರಕ್ಕೆ ಇರುವ ಸವಾಲುಗಳೇನು? ಈ ಸವಾಲುಗಳನ್ನು ಎದುರಿಸೋಕೆ ಸರ್ಕಾರ ಮಾಡಿಕೊಂಡಿರುವ ಸಿದ್ದತೆಗಳೇನು?

ಮಳೆಗಾಲವನ್ನು ಸರ್ಕಾರ ಸರಿಯಾಗಿ ನಿಭಾಯಿಸುವುದೇ? ಗ್ಯಾರಂಟಿಗಳ ಕಥೆ ಏನು? ಇಲ್ಲಿದೆ ಸಿದ್ದು ಸವಾಲ್ ಚಿತ್ರಣ

ಸವಾಲು – 1- ಮುಂಗಾರು ಅಬ್ಬರ ಎದುರಿಸೋಕೆ ಸಿದ್ಧವೇ?

ಪ್ರಾಕೃತಿಕ ವಿಪತ್ತುಗಳು ಹೇಳಿ ಕೇಳಿ ಬರೋದಿಲ್ಲ. ಅದರಲ್ಲೂ ಮಳೆಗಾಲದಲ್ಲಿ ಸೃಷ್ಟಿಯಾಗುವ ರಗಳೆಗಳು ಒಂದೆರಡಲ್ಲ. ಬೆಂಗಳೂರಿನಲ್ಲಂತೂ ದಿಢೀರನೆ ಮಳೆಯಾದರೆ ನೀರು ಹರಿದು ಹೋಗಲು ಸುಗಮ ವ್ಯವಸ್ಥೆಯೇ ಇಲ್ಲ! ಅಂಡರ್ ಪಾಸ್‌ಗಳಂತೂ ಮಳೆಗಾಲದಲ್ಲಿ ಯಮಸ್ವರೂಪಿ ಆಗಿಬಿಡ್ತವೆ. ಇನ್ನೂ ರಾಜ್ಯದಲ್ಲಿ ಮುಂಗಾರು ಶುರುವಾಗೇ ಇಲ್ಲ. ಆಗಲೇ ಹಲವು ಮಂದಿ ಮಳೆಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಅಂಡರ್‌ಪಾಸ್‌ನಲ್ಲಿ ಮಳೆ ನೀರಿನಲ್ಲಿ ಕಾರು ಸಿಲುಕಿ ಯುವತಿ ಬಲಿಯಾಗಿರೋದು ವ್ಯವಸ್ಥೆಗೆ ಹಿಡಿದ ಕನ್ನಡಿ. ಮಳೆಗಾಲಕ್ಕೆ ರಾಜ್ಯ ರಾಜಧಾನಿ ಎಷ್ಟರ ಮಟ್ಟಿಗೆ ಸಿದ್ದವಾಗಿದೆ ಅನ್ನೋದಕ್ಕೆ ಇದಕ್ಕಿಂತಾ ಬೇರೆ ಸಾಕ್ಷಿ ಬೇಕಿಲ್ಲ. ಕಳೆದ ವರ್ಷ ಬೆಳ್ಳಂದೂರು, ಸಿಲ್ಕ್‌ ಬೋರ್ಡ್‌, ಮಹದೇವಪುರ ಸುತ್ತ ಮುತ್ತ ರಸ್ತೆಯಲ್ಲಿ ನಿಂತಿದ್ದ ಮಳೆ ನೀರು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಬಾರಿಯಂತೂ ಮುಂಗಾರಿಗೆ ಮುನ್ನವೇ ವಿಧಾನಸೌಧದ ಕೂಗಳತೆ ದೂರದಲ್ಲೇ ಮಳೆ ಆರ್ಭಟಕ್ಕೆ ಜೀವ ಬಲಿ ಆಗಿದೆ. ಪರಿಸ್ಥಿತಿ ಹೀಗಿರುವಾಗ ಜಿಲ್ಲೆಗಳ ಮಾತಂತೂ ಕೇಳೋದೇ ಬೇಡ.. ಚುನಾವಣೆ ಹೊತ್ತಲ್ಲಿ ರಸ್ತೆಗೆ ಹಾಕಿದ್ದ ಡಾಂಬರ್ ಕಿತ್ತೆದ್ದು ಬರುತ್ತಿವೆ. ಬೆಳೆಗಳು ನೀರು ಪಾಲಾಗಿವೆ. ಪೂರ್ಣ ಪ್ರಮಾಣದಲ್ಲಿ ಮುಂಗಾರು ಆರಂಭವಾದ ಬಳಿಕ ಏನೆಲ್ಲಾ ಅನಾಹುತಗಳನ್ನು ಸರ್ಕಾರ ಎದುರಿಸಬೇಕಾಗಬಹುದು ಅಂತಾ ಅಂದಾಜೇ ಸಿಗದಂತಾಗಿದೆ. ಹೀಗಾಗಿ, ನೂತನ ಸರ್ಕಾರ ಜಿಲ್ಲಾ ಮಟ್ಟದಲ್ಲಿ, ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಮಳೆ ನಿರ್ವಹಣೆಗೆ ಸಮರೋಪಾದಿಯಲ್ಲಿ ಸಿದ್ದತೆ ನಡೆಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ..

ಸವಾಲು 2 – ಎಲ್ಲಿ ನೋಡಿದ್ರೂ ಗ್ಯಾರಂಟಿಗಳದ್ದೇ ಚರ್ಚೆ

ಎಲೆಕ್ಷನ್ ಟೈಮಲ್ಲಿ ಕಾಂಗ್ರೆಸ್ ಸರ್ಕಾರ ಕೊಟ್ಟಿದ್ದ ಗ್ಯಾರಂಟಿಗಳು ಜನರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿವೆ. ಮೊದಲ ಸಂಪುಟ ಸಭೆಯಲ್ಲೇ ಎಲ್ಲಾ ಗ್ಯಾರಂಟಿಗಳನ್ನೂ ಜಾರಿ ಮಾಡೋದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಮಾಹಿತಿ ಸಂಗ್ರಹ ಮುಗಿದ ಕೂಡಲೇ ಅನುಮತಿ ನೀಡುತ್ತೇವೆ ಅಂತಾನೂ ಸಿದ್ದರಾಮಯ್ಯ ಹೇಳಿದ್ದಾರೆ. ಸರ್ಕಾರ ಯಾವ ರೀತಿ ಮಾಹಿತಿ ಸಂಗ್ರಹ ಮಾಡುತ್ತೆ? ಫಲಾನುಭವಿಗಳು ಯಾರು? ಈ ಕುರಿತ ಹಲವಾರು ಚರ್ಚೆಗಳು ಜನರ ನಡುವೆ ನಡೀತಿದೆ. ಉಚಿತ ವಿದ್ಯುತ್ ಯಾರಿಗೆಲ್ಲಾ ಸಿಗುತ್ತೆ? ಬಿಪಿಎಲ್ ಕಾರ್ಡ್‌ದಾರರಿಗೆ 10 ಕೆಜಿ ಅಕ್ಕಿ ಯಾವಾಗಿನಿಂದ ಸಿಗುತ್ತೆ? ನಿರುದ್ಯೋಗ ಭತ್ಯೆ ಯಾರಿಗೆ ಸಿಗುತ್ತೆ? ಎಲ್ಲಾ ಗೃಹಿಣಿಯರಿಗೂ ಸಹಾಯ ಧನ ಕೊಡ್ತಾರಾ? ಗೃಹಿಣಿಯರ ಆಯ್ಕೆಯ ಮಾನದಂಡ ಏನು? ಈ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಇನ್ನು ಈ ಗ್ಯಾರಂಟಿಗಳ ಜಾರಿಗೆ ಸರ್ಕಾರದ ಬಳಿ ಸಾಕಷ್ಟು ಹಣ ಇದ್ಯಾ ಅನ್ನೋದು ಮತ್ತೊಂದು ದೊಡ್ಡ ಪ್ರಶ್ನೆ..

ಸವಾಲು 3 – ಸಂಪುಟ ಸಂಕಟ ಮುಗಿದಿಲ್ಲ!

ಸಿಎಂ ಸೀಟಿಗೆ ಗುದ್ದಾಟ ನಡೆಸಿದ್ದ ಸಿದ್ದರಾಮಯ್ಯ, ಅಂತೂ ಇಂತೂ ಡಿ. ಕೆ. ಶಿವಕುಮಾರ್ ಅವರನ್ನ ಮಣಿಸಿದ್ದಾರೆ. ಸದ್ಯ 8 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರಿಗೆ ಖಾತೆ ಹಂಚಿಕೆ ಆಗಿಲ್ಲ. ರಾಜ್ಯ ವಿಧಾನಸಭೆಯ ಗಾತ್ರವನ್ನ ಆಧರಿಸಿ ಒಟ್ಟು 34 ಮಂದಿಗೆ ಸಚಿವ ಸ್ಥಾನ ನೀಡಬಹುದು. ಸಿಎಂ ಹಾಗೂ ಡಿಸಿಎಂ ಹೊರತುಪಡಿಸಿದರೆ 32 ಮಂದಿ ಸಚಿವರಾಗಬಹುದು. ಈ ಪೈಕಿ 8 ಮಂದಿ ಸಚಿವರು ಆಗಲೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನೂ 24 ಸಚಿವ ಸ್ಥಾನಗಳು ಬಾಕಿ ಇವೆ. ಈ ಸಚಿವ ಸ್ಥಾನಗಳು ಯಾರಿಗೆ ದಕ್ಕುತ್ತವೆ. ಇದರಲ್ಲಿ ಸಿದ್ದರಾಮಯ್ಯ ಬಣಕ್ಕೆ ಎಷ್ಟು? ಡಿಕೆಶಿ ಬಣಕ್ಕೆ ಎಷ್ಟು? ಇದಲ್ಲದೆ ಹೈಕಮಾಂಡ್ ಬಣ ಅನ್ನೋ ಮತ್ತೊಂದು ಗುಂಪು ಕೂಡಾ ಮಂತ್ರಿ ಪಟ್ಟಕ್ಕೆ ಪೈಪೋಟಿ ನಡೆಸ್ತಿದೆ. ಅವರಿಗೆ ಎಷ್ಟು ಸಿಗಬಹುದು? ಅಂತಿಮವಾಗಿ ಎಲ್ಲ ಸಚಿವರಿಗೂ ಯಾವ ಯಾವ ಖಾತೆಗಳು ಸಿಗಬಹುದು? ಈ ಗೊಂದಲಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್ ಹಲವು ಸುತ್ತಿನ ಮಾತುಕತೆ ನಡೆಸಬೇಕಾಗಬಹುದು. ಜೊತೆಗೆ ಹೈಕಮಾಂಡ್ ಮಧ್ಯ ಪ್ರವೇಶ ಹಾಗೂ ಅನುಮತಿ ಇಲ್ಲದೆ ಇವೆಲ್ಲವೂ ನಡೆಯೋಕೆ ಸಾಧ್ಯವೇ ಇಲ್ಲ. ಹೀಗಾಗಿ, ಸಿದ್ದು ಸರ್ಕಾರದ ಸಂಪುಟ ಸಂಕಟ ಅಷ್ಟು ಬೇಗ ಮುಗಿಯುವ ಸಾಧ್ಯತೆಗಳು ಕಾಣುತ್ತಿಲ್ಲ.

ಸವಾಲು 4 – 40% ಕಮಿಷನ್ ಬರೀ ಆರೋಪವೋ? ತನಿಖೆ ಆಗುತ್ತೋ?

ಕಾಂಗ್ರೆಸ್ ಪಕ್ಷ ಚುನಾವಣೆಗೆ ವರ್ಷ ಮುನ್ನವೇ ಬಿಜೆಪಿ ವಿರುದ್ಧ 40 ಪರ್ಸೆಂಟ್ ಕಮಿಷನ್ ಅಸ್ತ್ರ ಪ್ರಯೋಗ ಮಾಡಿತ್ತು. ನಿರಂತರ ಅಭಿಯಾನ ನಡೆಸಿತ್ತು. ಇದೀಗ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬಂದಿದೆ. ಬಿಜೆಪಿ ವಿರುದ್ಧದ ಎಲ್ಲ ಹಗರಣ ಆರೋಪಗಳ ತನಿಖೆ ನಡೆಸೋದಾಗಿ ಹೇಳ್ತಿದೆ. ನೂತನ ಸಚಿವ ಎಂ. ಬಿ. ಪಾಟೀಲ್ ಸೇರಿದಂತೆ ಹಲವು ನಾಯಕರು ಬಿಜೆಪಿ ಅವಧಿಯ ಎಲ್ಲ ಹಗರಣಗಳ ತನಿಖೆ ಮಾಡ್ತೇವೆ ಎನ್ನುತ್ತಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ಕೂಡಾ ಸುಮ್ಮನೆ ಕುಳಿತಿಲ್ಲ. ತನಿಖೆ ಮಾಡಲಿ, ನಾವೇನೂ ಹೆದರೋದಿಲ್ಲ ಎಂದು ಖುದ್ದು ಯಡಿಯೂರಪ್ಪನವರೇ ಸಡ್ಡು ಹೊಡೆದಿದ್ದಾರೆ. ಇತ್ತ ಸಿ. ಟಿ. ರವಿ ಕೆಂಪಣ್ಣ ಆಯೋಗದ ವರದಿ ಆಧರಿಸಿ ಎಫ್‌ಐಆರ್ ದಾಖಲು ಮಾಡಿ ಅಂತಾ ಸವಾಲೆಸೆದಿದ್ದಾರೆ. ರಾಜಕೀಯದಲ್ಲಿ ಹಗರಣ ಆರೋಪ, ಪ್ರತ್ಯಾರೋಪಗಳು ಹೊಸದಲ್ಲ. ಕೇಂದ್ರದಲ್ಲಿ ಯುಪಿಎ ಸರ್ಕಾರದ ವಿರುದ್ಧ ಎನ್‌ಡಿಎ ಲಕ್ಷಾಂತರ ಕೋಟಿ ರೂಪಾಯಿ ಹಗರಣಗಳ ಆರೋಪ ಮಾಡಿತ್ತು. ಈ ಹಗರಣಗಳ ತನಿಖೆ ಎಷ್ಟರ ಮಟ್ಟಿಗೆ ತಾರ್ಕಿಕ ಅಂತ್ಯ ಕಂಡಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ಓಪನ್ ಸೀಕ್ರೆಟ್..

ಸವಾಲು 5 – ಲೋಕಸಭಾ ಚುನಾವಣೆಯೇ ಸದ್ಯದ ಟಾರ್ಗೆಟ್!

ಇಡೀ ದೇಶದ ಚಿತ್ತ ಇರೋದು 2024ರ ಲೋಕಸಭಾ ಚುನಾವಣೆ ಮೇಲೆ! ಸತತ 3ನೇ ಅವಧಿಗೆ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತಾ ಅನ್ನೋ ಚರ್ಚೆ ನಡೀತಿದೆ. ಆದ್ರೆ, ವಿರೋಧ ಪಕ್ಷಗಳು ಮಾತ್ರ ಒಗ್ಗಟ್ಟಿನ ಹೋರಾಟ ನಡೆಸಿ ಬಿಜೆಪಿಯನ್ನು ಸೋಲಿಸೋಕೆ ಸಜ್ಜಾಗುತ್ತಿವೆ. ರಾಜ್ಯದ ಮಟ್ಟಿಗೆ ಹೇಳೋದಾದ್ರೆ, ಕಾಂಗ್ರೆಸ್ ಪಕ್ಷಕ್ಕೆ ವಿಧಾನಸಭಾ ಚುನಾವಣೆ ಗೆಲುವು ನೈತಿಕ ಬಲ ಕೊಟ್ಟಿದೆ. ಆದ್ರೆ, ಈ ಗೆಲುವು ನನಗೆ ತೃಪ್ತಿ ಕೊಟ್ಟಿಲ್ಲ ಅಂತಾ ಈಗಾಗಲೇ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ. ನನ್ನ ಗುರಿ ಏನಿದ್ದರೂ 2024ರ ಲೋಕಸಭಾ ಚುನಾವಣೆ ಎಂದಿದ್ದಾರೆ ಡಿಕೆಶಿ.. ಇದಕ್ಕೆ ಕಾರಣ ಕೂಡಾ ಇದೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಪಕ್ಷದ ಒಬ್ಬನೇ ಒಬ್ಬ ಸಂಸದರು ಲೋಕಸಭೆಗೆ ಆಯ್ಕೆ ಆಗಿದ್ದರು. ಬರೋಬ್ಬರಿ 25 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಕಳೆದ ಚುನಾವಣೆ ಮಾತ್ರವಲ್ಲ, ಇತ್ತೀಚಿನ ಹಲವು ಲೋಕಸಭಾ ಎಲೆಕ್ಷನ್‌ಗಳಲ್ಲಿ ರಾಜ್ಯದ ಮತದಾರ ಬಿಜೆಪಿ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿದ್ದಾನೆ. ಹೀಗಾಗಿ, ಈ ಬಾರಿಯಾದ್ರೂ ರಾಜ್ಯದ ಕಾಂಗ್ರೆಸ್ ಸಂಸದರು ಹೆಚ್ಚಾಗಬೇಕು ಅನ್ನೋದು ಡಿಕೆಶಿ ನಿಲುವು. ಈ ಮೂಲಕ ತಮ್ಮ ಸಾಮರ್ಥ್ಯವನ್ನ ಹೈಕಮಾಂಡ್ ಎದುರು ಮತ್ತೊಮ್ಮೆ ಸಾಬೀತು ಮಾಡೋದಕ್ಕೆ ಡಿಕೆಶಿ ಸಜ್ಜಾಗಿದ್ದಾರೆ. ಚುನಾವಣೆಗೆ ಒಂದು ವರ್ಷ ಬಾಕಿ ಇದೆ. ಈ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರದ ಕಾರ್ಯ ವೈಖರಿಗೆ ಜನ ಮೆಚ್ಚುಗೆ ವ್ಯಕ್ತವಾಗಬೇಕಿದೆ. ಗ್ಯಾರಂಟಿಗಳು ಸಮರ್ಪಕವಾಗಿ ಜಾರಿ ಆಗಬೇಕಿದೆ. ಇಂದಿರಾ ಕ್ಯಾಂಟೀನ್‌ನಂಥಾ ಯೋಜನೆಗಳು ಮತ್ತೆ ಹಳಿಗೆ ಬರಬೇಕಿದೆ. ಆಡಳಿತ ಯಂತ್ರ ಸುಗಮವಾಗಿ ನಡೀತಿದೆ ಅನ್ನೋ ನಂಬಿಕೆ ಜನರಿಗೆ ಬರಬೇಕಿದೆ. ಇಷ್ಟೆಲ್ಲಾ ಆದರೆ ಮಾತ್ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನ ಓವರ್ ಟೇಕ್ ಮಾಡುವ ಕಾಂಗ್ರೆಸ್ ಕನಸು ನನಸಾಗಬಹುದು.

ಜನರ ‘ಮರೆವು’ ನಾಯಕರಿಗೆ ವರ?

ಮತದಾರನಿಗೆ ಒಳ್ಳೆಯ ಮನಸ್ಥಿತಿ ಇದೆಯೋ? ಅಥವಾ ಮರೆವು ಇದೆಯೋ? ದೇವರೇ ಬಲ್ಲ.. ಒಳ್ಳೆಯ ಆಡಳಿತ ಸಿಗಲಿ ಅನ್ನೋ ಕಾರಣಕ್ಕೆ ಮತದಾರ ಎಲ್ಲವನ್ನೂ ಬಹುಬೇಗ ಮರೆತು ಮುಂದೆ ಸಾಗುತ್ತಾನೆ. ಮತದಾರನ ನೆನಪಿನ ಶಕ್ತಿ ತುಂಬಾ ಕಡಿಮೆ.. ಇದು ಚುನಾವಣೆ ಹೊತ್ತಲ್ಲಿ ರಾಜಕಾರಣಿಗಳಿಗೆ ವರವಾಗುತ್ತೆ. ಮುಂದಿನ ಲೋಕಸಭಾ ಚುನಾವಣೆ ಹೊತ್ತಲ್ಲಿ ಈ ವರ ಯಾರಿಗೆ ಸಿಗುತ್ತೆ ಅನ್ನೋದೇ ಸದ್ಯದ ಪ್ರಶ್ನೆ.

About Author

Leave a Reply

Your email address will not be published. Required fields are marked *

You may have missed