ಓಸಿ ಪಡೆದ ವಸತಿ ಯೋಜನೆ ಮೇಲೆ ರೇರಾ ಪ್ರಾಧಿಕಾರಕ್ಕೆ ಅಧಿಕಾರವಿಲ್ಲ: ಹೈಕೋರ್ಟ್

0

ಬೆಂಗಳೂರು: ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯಿದೆ ಜಾರಿಗೂ ಮುನ್ನ ಭಾಗಶಃ ಸ್ವಾಧೀನಾನುಭವ ಪತ್ರ ಪಡೆದಿದ್ದ ವಸತಿ ಯೋಜನೆಗಳ ಮೇಲೆ ರೇರಾ ಪ್ರಾಧಿಕಾರಕ್ಕೆ ಅಧಿಕಾರವಿಲ್ಲ ಎಂದು ಬೆಂಗಳೂರಿನ ಹೈಕೋರ್ಟ್ ಪೀಠ ಮಹತ್ವದ ಆದೇಶ ನೀಡಿದೆ.

ರೇರಾ ಆದೇಶ ಪ್ರಶ್ನಿಸಿ ಮೆಸರ್ಸ್ ಪ್ರಾವಿಡೆಂಟ್ ಹೌಸಿಂಗ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿರುವ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದಿಂದ ಈ ಆದೇಶ ಹೊರಬಿದ್ದಿದೆ. ಅಲ್ಲದೇ, ಪ್ರಾಧಿಕಾರ ಗೃಹ ಖರೀದಿದಾರರೊಬ್ಬರಿಗೆ ಹಣವನ್ನು ಮರುಪಾವತಿ ಮಾಡುವಂತೆ ಮೆಸರ್ಸ್ ಪ್ರಾವಿಡೆಂಟ್ ಹೌಸಿಂಗ್ ಲಿಮಿಟೆಡ್‌ಗೆ ನಿರ್ದೇಶನ ನೀಡಿ ಹೊರಡಿಸಿದ್ದ ಆದೇಶವನ್ನೂ ಕೋರ್ಟ್‌ ರದ್ದುಗೊಳಿಸಿತು.

ವಿಚಾರಣೆ ವೇಳೆ ಅರ್ಜಿದಾರರ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕಾಯಿದೆ ಜಾರಿಗೆ ಬರುವ ಮುನ್ನ ಅಂದರೆ 2016ರಲ್ಲಿಯೇ ಸ್ವಾಧೀನಾನುಭವ ಪತ್ರ ಪಡೆದಿರುವುದು ಸರಿಯಷ್ಟೇ, ಆ ಬಗ್ಗೆ ಯಾವುದೇ ತಕರಾರು ಇಲ್ಲ. ಆದ್ದರಿಂದ ಕೆ-ರೇರಾ ನಿಯಮಾವಳಿಯ ನಿಯಮ-4ರ ಪ್ರಕಾರ ಆ ವಸತಿ ಯೋಜನೆ ಕಾಮಗಾರಿ ಪ್ರಗತಿಯಲ್ಲಿರುವ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಸ್ಪಷ್ಟಪಡಿಸಿತು. ರೇರಾ ತನ್ನ ವ್ಯಾಪ್ತಿಯನ್ನು ಮೀರಿ ಆದೇಶ ನೀಡಿದೆ. ಕಾನೂನಿನಲ್ಲಿ ಅದಕ್ಕೆ ಮಾನ್ಯತೆ ಇಲ್ಲ. ಹಾಗೆ ಕಾನೂನಿನ ಮನ್ನಣೆ ಇಲ್ಲವಾದರೆ ಅದು ಊರ್ಜಿತವಾಗುವುದಿಲ್ಲ. ಹೀಗಾಗಿ ಈ ರೀತಿಯ ಆದೇಶಗಳನ್ನು ರದ್ದುಪಡಿಸಬೇಕಾಗುತ್ತದೆ ಎಂದು ನ್ಯಾಯಪೀಠ ತಿಳಿಸಿತು.

About Author

Leave a Reply

Your email address will not be published. Required fields are marked *

You may have missed