Hockey World Cup.. ಇಂದು ಭಾರತ-ಇಂಗ್ಲೆಂಡ್ ಸೆಣಸಾಟ

0

ಸ್ಪೇನ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ತವರಿನಲ್ಲಿ ವಿಶ್ವಕಪ್‌ ಅಭಿಯಾನವನ್ನು ಯಶಸ್ವಿಯಾಗಿ ಆರಂಭಿಸಿರುವ ಭಾರತ ಹಾಕಿ ತಂಡ, ‘ಡಿ’ ಗುಂಪಿನ ತನ್ನ 2ನೇ ಪಂದ್ಯದಲ್ಲಿ ಭಾನುವಾರ ಬಲಿಷ್ಠ ಇಂಗ್ಲೆಂಡ್‌ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ಗೆದ್ದರೆ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ಸಾಧ್ಯತೆ ಹೆಚ್ಚಲಿದೆ.

ಹೊಚ್ಚಹೊಸ ಬಿರ್ಸಾ ಮುಂಡಾ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಸಮಬಲರ ನಡುವಿನ ಸೆಣಸಾಟ ಎಂದೇ ಕರೆಸಿಕೊಳ್ಳುತ್ತಿದೆ. ಇಂಗ್ಲೆಂಡ್‌ ತನ್ನ ಮೊದಲ ಪಂದ್ಯದಲ್ಲಿ ವೇಲ್ಸ್‌ ವಿರುದ್ಧ 5-0 ಗೋಲುಗಳ ಅಮೋಘ ಗೆಲುವು ಪಡೆದಿದ್ದು, ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದೆ.

ಸ್ಪೇನ್‌ ವಿರುದ್ಧ ಭಾರತದ ರಕ್ಷಣಾ ಪಡೆ ಅತ್ಯುತ್ತಮ ಪ್ರದರ್ಶನ ತೋರಿತ್ತು. ನಾಯಕ ಹರ್ಮನ್‌ಪ್ರೀತ್‌ ಸಿಂಗ್‌, ಉಪನಾಯಕ ಅಮಿತ್‌ ರೋಹಿದಾಸ್‌, ಗೋಲ್‌ಕೀಪರ್‌ಗಳಾದ ಶ್ರೀಜೇಶ್‌ ಹಾಗೂ ಕೃಷನ್‌ ಪಾಠಕ್‌, ಸ್ಪೇನ್‌ನ ಆಕ್ರಮಣಕಾರಿ ಆಟವನ್ನು ನಿರಾಯಾಸವಾಗಿ ನಿಯಂತ್ರಿಸಿದ್ದರು. ಇದರ ಪರಿಣಾಮ ಭಾರತ ಕಳೆದ 12 ಪಂದ್ಯಗಳಲ್ಲಿ ಮೊದಲ ಬಾರಿಗೆ ‘ಕ್ಲೀನ್‌ ಶೀಟ್‌'(ಒಂದೂ ಗೋಲು ಬಿಟ್ಟುಕೊಡದೆ ಇರುವುದು) ಸಾಧಿಸಿತು.

ಸ್ಪೇನ್‌ಗೆ ಹೋಲಿಸಿದರೆ ಇಂಗ್ಲೆಂಡ್‌ ತಂಡದಿಂದ ವಿಭಿನ್ನ ರೀತಿಯ ಸವಾಲು ಎದುರಾಗಲಿದೆ. ಇಂಗ್ಲೆಂಡ್‌ ತನ್ನ ಆಟದ ಶೈಲಿಯನ್ನು ಪ್ರತಿ ಕ್ವಾರ್ಟರ್‌ನಲ್ಲೂ ಬದಲಿಸಲಿದೆ. ಇದೇ ಕಾರಣದಿಂದಾಗಿ ವೇಲ್ಸ್‌ ವಿರುದ್ಧ ಎಲ್ಲಾ ನಾಲ್ಕೂ ಕ್ವಾರ್ಟರ್‌ಗಳಲ್ಲಿ ಗೋಲು ಬಾರಿಸುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಚೆಂಡಿನ ಮೇಲೆ ಹೆಚ್ಚು ನಿಯಂತ್ರಣ ಸಾಧಿಸುವ ಅನಿವಾರ್ಯತೆಗೆ ಭಾರತ ಸಿಲುಕಬಹುದು. ಚೆಂಡು ಇಂಗ್ಲೆಂಡ್‌ ಹಿಡಿತಕ್ಕೆ ಸಿಕ್ಕಾಗ ಭಾರತೀಯರು ಎಷ್ಟುಬೇಗ ಮರಳಿ ಪಡೆಯಲಿದ್ದಾರೆ ಎನ್ನುವುದು ನಿರ್ಣಾಯಕವೆನಿಸಲಿದೆ. ಈ ನಿಟ್ಟಿನಲ್ಲಿ ಅನುಭವಿ ಮಿಡ್‌ಫೀಲ್ಡರ್‌, ಮಾಜಿ ನಾಯಕ ಮನ್‌ಪ್ರೀತ್‌ ಸಿಂಗ್‌ ಹಾಗೂ ಸದ್ಯ ತಂಡದ ಮಿಡ್‌ಫೀಲ್ಡ್‌ ‘ಕಿಂಗ್‌’ ಎನಿಸಿರುವ ಹಾರ್ದಿಕ್‌ ಸಿಂಗ್‌ ಮೇಲೆ ದೊಡ್ಡ ಜವಾಬ್ದಾರಿ ಇರಲಿದೆ.

About Author

Leave a Reply

Your email address will not be published. Required fields are marked *

You may have missed