Ind vs Aus Test: ಮೂರನೇ ಟೆಸ್ಟ್ ಪಂದ್ಯ ನಡೆಯುವುದು ಅನುಮಾನ?

0

ಭಾರತ ಕ್ರಿಕೆಟ್ ತಂಡ ಸದ್ಯ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ – ಗವಾಸ್ಕರ್ ಟ್ರೋಫಿಯ ಪ್ರಥಮ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದೆ.

 

ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಒಟ್ಟು ನಾಲ್ಕು ಪಂದ್ಯಗಳು ನಡೆಯಲಿದೆ. ಮೊದಲ ಟೆಸ್ಟ್ ಬಳಿಕ ಎರಡನೇ ಪಂದ್ಯವನ್ನು ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಬಳಿಕ ಮಾರ್ಚ್ 1 ರಿಂದ ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ನಲ್ಲಿ ಮೂರನೇ ಟೆಸ್ಟ್ ಶುರುವಾಗಲಿದೆ.

ಆದರೆ, ಈ ತೃತೀಯ ಟೆಸ್ಟ್ ಪಂದ್ಯ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಮಾರ್ಚ್ 1 ರಿಂದ 5ರ ವರೆಗೆ ಧರ್ಮಶಾಲಾದಲ್ಲಿ ಈ ಟೆಸ್ಟ್ ಶುರುವಾಗುವುದು ಕಷ್ಟವಂತೆ. ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನ ಪಿಚ್ ಅನ್ನು ಇತ್ತೀಚೆಗಷ್ಟೆ ನವೀಕರಣಗೊಳಿಸಲಾಗಿತ್ತು. ಆದರೆ, ಪಿಚ್ ಸಂಪೂರ್ಣ ಸಜ್ಜಾದ ಕಾರಣ ಅಂತರರಾಷ್ಟ್ರೀಯ ಪಂದ್ಯ ಆಡಲು ಯೋಗ್ಯವಾಗಿಲ್ಲ ಎಂದು ಹೇಳಲಾಗಿದೆ.

ಬಿಸಿಸಿಐ ಪಿಚ್ ಪರಿಶೀಲನೆ ನಡೆಸುವ ವಿಶೇಷ ಅಧಿಕಾರಿಗಳನ್ನು ಹೊಂದಿದೆ. ಇವರು ಇನ್ನೆರಡು ದಿನಗಳಲ್ಲಿ ಧರ್ಮಶಾಲಗೆ ತೆರಳಿ ಪಿಚ್ ಅನ್ನು ತಪಾಸಣೆ ನಡೆಸಿ ವರದಿ ಸಲ್ಲಿಸಲಿದ್ದಾರೆ. ಪಿಚ್ ಇನ್ನೂ ಸಂಪೂರ್ಣ ಸಿದ್ಧವಾಗಿಲ್ಲ ಎಂದಾದರೆ ಮೂರನೇ ಟೆಸ್ಟ್ ಸ್ಥಳಾಂತರಗೊಳ್ಳಲಿದೆ.

ಧರ್ಮಶಾಲ ಪಿಚ್ ಅನ್ನು ಇತ್ತೀಚೆಗಷ್ಟೆ ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಲಾಗಿತ್ತು. ಆದರೆ, ನಿರಂತರ ಮಳೆ ಸುರಿಯುತ್ತಿರುವ ಕಾರಣ ಕಾಮಗಾರಿ ವಿಳಂಬವಾಗಿದೆ. ಎಲ್ಲಾದರು ಪಿಚ್ ಸಿದ್ಧವಾಗಿ ಇಂಡೋ-ಆಸೀಸ್ ತೃತೀಯ ಟೆಸ್ಟ್ ನಡೆದರೂ ಪಂದ್ಯಕ್ಕ ಮಳೆ ಅಡ್ಡಿಪಡಿಸುವ ಸಾಧ್ಯತೆ ಇದೆ.

ಪಿಚ್ ಸರಿಪಡಿಸುವ ಕೆಲಸ ನಡೆಯುತ್ತಿರುವುದರಿಂದ ಇಲ್ಲಿ ರಣಜಿ ಸೇರಿದಂತೆ ಯಾವುದೇ ಪಂದ್ಯವನ್ನು ಆಯೋಜಿಸಿಲ್ಲ. ಧರ್ಮಶಾಲ ಬಿಟ್ಟರೆ ಭಾರತ-ಆಸ್ಟ್ರೇಲಿಯಾ ಪಂದ್ಯ ವಿಶಾಖಪಟ್ಟಣಂನ ವೈಜಾಗ್ನಲ್ಲಿ ಆಯೋಜಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಧರ್ಮಶಾಲಾದಲ್ಲಿ 2017 ರಲ್ಲಿ ಕೊನೆಯ ಟೆಸ್ಟ್ ಪಂದ್ಯ ನಡೆದಿತ್ತು. ಭಾರತ- ಆಸ್ಟ್ರೇಲಿಯಾ ನಡುವೆ ನಡೆದ ಈ ಪಂದ್ಯದಲ್ಲಿ ಟೀಮ್ ಇಂಡಿಯಾ 8 ವಿಕೆಟ್ಗಳ ಜಯ ಸಾಧಿಸಿತ್ತು. ವಿರಾಟ್ ಕೊಹ್ಲಿಗೆ ಇಂಜುರಿ ಆಗಿದ್ದ ಕಾರಣ ಅಜಿಂಕ್ಯಾ ರಹಾನೆ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡಿದ್ದರು. ಜಡೇಜಾ ಆಲ್ರೌಂಡರ್ ಪ್ರದರ್ಶನ ತೋರಿದ್ದರು.

About Author

Leave a Reply

Your email address will not be published. Required fields are marked *

You may have missed